ಮಂಗಳೂರು ನಗರ ದಕ್ಷಿಣ: ಕಾಂಗ್ರೆಸ್ ನಿಂದ 3ನೇ ಬಾರಿ ಕಣಕ್ಕಿಳಿದ ಮಾಜಿ ಶಾಸಕ ಜೆ.ಆರ್.ಲೋಬೊ
ಮಂಗಳೂರು, ಎ.15: ರಾಜ್ಯ ವಿಧಾನಸಭೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಇಂದು ಪಕ್ಷವು ಪ್ರಕಟಿಸಿದ್ದು, ಮಾಜಿ ಶಾಸಕ ಜೆ.ಆರ್.ಲೋಬೊ ಮೂರನೇ ಬಾರಿಗೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸತತ ನಾಲ್ಕು ಬಾರಿ ಶಾಸಕರಾಗಿದ್ದ ಎನ್.ಯೋಗೀಶ್ ಭಟ್‌ರನ್ನು 2013ರ ಚುನಾವಣೆಯಲ್ಲಿ 12,275 ಮತಗಳ ಅಂತರದಿಂದ ಮಣಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶಿದ್ದ ಜೆ.ಆರ್.ಲೋಬೊ, 2018ರ ಚುನಾವಣೆಯಲ್ಲಿ ಬಿಜೆಪಿಯ ಡಿ.ವೇದವ್ಯಾಸ ಕಾಮತ್ ವಿರುದ್ಧ 16,075 ಮತಗಳ ಅಂತರದಿಂದ ಸೋಲುಂಡಿದ್ದರು.
70ರ ಹರೆಯದ ಲೋಬೊ ಶಾಸಕರಾಗಿದ್ದಾಗ ಮಂಗಳೂರು ನಗರಕ್ಕೆ 750 ಕೋ.ರೂ. ಮೊತ್ತದ ‘ಜಲಸಿರಿ’ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ ಸಹಿತ ಅನೇಕ ಯೋಜನೆಗಳ ಕಾಮಗಾರಿಯನ್ನು ಅನುಷ್ಠಾನಗೊಳಿಸಿದ್ದರು.
ಜಾನ್ ರಿಚರ್ಡ್ ಲೋಬೊ ತನ್ನ 23ರ ಹರೆಯದಲ್ಲೇ ಕೆಎಎಸ್ ತೇರ್ಗಡೆಯಾಗಿ ತಹಶೀಲ್ದಾರ್, ಸಹಾಯಕ ಆಯುಕ್ತ, ಮಹಾನಗರ ಪಾಲಿಕೆ ಆಯುಕ್ತ, ಕರ್ನಾಟಕ ನಗರಾಭಿವೃದ್ಧಿ ಮತ್ತು ಕರಾವಳಿ ಪರಿಸರ ನಿರ್ವಹಣೆ ಯೋಜನೆಯ ಜಂಟಿ ಯೋಜನಾ ನಿರ್ದೇಶಕರಾಗಿ, ಜಿಲ್ಲಾಧಿಕಾರಿಯ ಸ್ಥಾನೀಯ ಸಹಾಯಕ ಹೀಗೆ ಹಲವು ಹುದ್ದೆಗಳಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ರಾಜಕೀಯ ರಂಗ ಪ್ರವೇಶಿಸಿದ್ದರು.
ಕಂದಾಯ, ನಗರಾಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಹೊಸ ಯೋಜನೆಯ ಅನುಷ್ಠಾನದಲ್ಲಿ ಅನುಭವ ಹೊಂದಿರುವ ಜೆ.ಆರ್.ಲೋಬೊ ತಮ್ಮ ಸುದೀರ್ಘವಾದ ಸೇವಾ ಅವಧಿಯಲ್ಲಿ ವಿಶಿಷ್ಟವಾದ ಕಾರ್ಯವೈಖರಿಯಿಂದ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದರು.
ಪಿಲಿಕುಳ ನಿಸರ್ಗಧಾಮದ ಅಭಿವೃದ್ಧಿಯ ರೂವಾರಿಯಾಗಿದ್ದ ಜೆ.ಆರ್.ಲೋಬೋ ಮನಪಾ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ದೀರ್ಘ ಬಾಳಿಕೆಯ ಕಾಂಕ್ರಿಟ್ ರಸ್ತೆಗಳ ನಿರ್ಮಾಣಕ್ಕೆ ಚಾಲನೆ ನೀಡಿ ಗಮನ ಸೆಳೆದಿದ್ದರು.
ಈ ನಡುವೆ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. ಇಲ್ಲಿ ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಇನಾಯತ್ ಅಲಿ ಮಧ್ಯೆ ಟಿಕೆಟ್ ಗಾಗಿ ತೀವ್ರ ಪೈಪೋಟಿ ಮುಂದುವರಿದಿದೆ.