ಕೋವಿಡ್‌ನಿಂದ ಮೃತಪಟ್ಟಿದ್ದಾನೆ ಎಂದು ಘೋಷಿಸಲಾದ ವ್ಯಕ್ತಿ ಎರಡು ವರ್ಷಗಳ ಬಳಿಕ ಜೀವಂತವಾಗಿ ಪತ್ತೆ!

Update: 2023-04-16 04:41 GMT

ಅಹ್ಮದಾಬಾದ್: ಕೋವಿಡ್-19 ಎರಡನೇ ಅಲೆಯ ಸಂದರ್ಭದಲ್ಲಿ ಅಂದರೆ 2021ರಲ್ಲಿ ಮೃತಪಟ್ಟಿದ್ದಾನೆ ಎಂದು ಘೋಷಿಸಲಾದ ವ್ಯಕ್ತಿಯೊಬ್ಬ ಎರಡು ವರ್ಷಗಳ ಬಳಿಕ ಜೀವಂತವಾಗಿ ಮರಳಿದ ಕುತೂಹಲಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಮೂಲತಃ ಬದ್ನವಾರ್ ತಾಲೂಕಿನ ಕದೋದ್‌ಕಲನ್ ಗ್ರಾಮದ ಕಮಲೇಶ್ ಪಾಟಿದಾರ್ ಎಂಬ ವ್ಯಕ್ತಿ 2021ರ ಫೆಬ್ರುವರಿಯಲ್ಲಿ ಕೋವಿಡ್-19 ಅಲೆ ಉತ್ತುಂಗ ತಲುಪಿದ್ದಾಗ ಸೋಂಕಿಗೆ ಬಲಿಯಾಗಿದ್ದಾನೆ ಎಂದು ಘೋಷಿಸಲಾಗಿತ್ತು. ಆ ಬಳಿಕ ಪಿಪಿಇ ಕಿಟ್ ಮುಚ್ಚಿದ್ದ ಮೃತದೇಹವೊಂದನ್ನು ಸಾಮೂಹಿಕವಾಗಿ ಅಂತ್ಯಸಂಸ್ಕಾರ ನಡೆಸಲಾಗಿತ್ತು.

ಆದರೆ ಶನಿವಾರ ಕಡೊಕಾಲನ್‌ನಿಂದ ಸುಮಾರು 35 ಕಿಲೋಮೀಟರ್ ಗ್ರಾಮದ ಸರ್ದಾಪುರ ಬಳಿಯ ಬದವೇಲಿ ಗ್ರಾಮದಲ್ಲಿರುವ ತನ್ನ ಮಾವನ ಮನೆಗೆ ಕಮಲೇಶ್ ಮರಳಿದಾಗ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರಿಗೆ ಅಚ್ಚರಿ, ಆಘಾತ ಹಾಗೂ ಸಂತಸವಾಯಿತು.

"ಕೋವಿಡ್ ಸೋಂಕು ತಗುಲಿದೆ ಎಂಬ ವರದಿ ಬಂದಾಗ ಕಮಲೇಶ್ ಬಡವೇಲಿಯಲ್ಲಿದ್ದರು. ಹತ್ತಿರ ಎಲ್ಲೂ ಆಸ್ಪತ್ರೆ ಬೆಡ್ ಸಿಗದೇ ಇದ್ದಾಗ ಅವರನ್ನು ಬರೋಡಾಗೆ ಕರೆದೊಯ್ಯಲಾಗಿತ್ತು. ಕಮಲೇಶ್ ಮೃತಪಟ್ಟಿದ್ದಾಗಿ ಘೋಷಿಸಲಾಗಿತ್ತು. ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿದ್ದ ಶವವನ್ನು ಬಂಧುಗಳಿಗೆ ತೋರಿಸಿ, ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು" ಎಂದು ಸಂಬಂಧಿ ಮಹೇಶ್ ಪಾಟಿದಾರ್ ವಿವರಿಸಿದ್ದಾರೆ.

ಕಮಲೇಶ್ ಅವರ ಮಾವ ರಾಮೇಶ್ವರ್ ಅವರ ಪ್ರಕಾರ, "ರೌಡಿಗಳ ಗ್ಯಾಂಗ್ ಒಂದು ಸ್ವಲ್ಪಸಮಯ ಕಮಲೇಶ್‌ನನ್ನು ಒತ್ತೆಯಾಳಾಗಿ ಇಟ್ಟುಕೊಂಡಿತ್ತು. ಕೋವಿಡ್‌ನಿಂದ ಚೇತರಿಸಿಕೊಂಡ ಬಳಿಕ ಅಹ್ಮದಾಬಾದ್‌ನಲ್ಲಿ ಕೆಲ ಮಂದಿ ಆತನನ್ನು ಬಂಧನದಲ್ಲಿ ಇಟ್ಟುಕೊಂಡಿದ್ದರು. ಔಷಧಿ ಚುಚ್ಚಿ ಸದಾ ಅರೆಪ್ರಜ್ಞಾವಸ್ಥೆಯಲ್ಲೇ ಇರುವಂತೆ ನೋಡಿಕೊಂಡಿದ್ದರು. ಶುಕ್ರವಾರ ಕಾರಿನಲ್ಲಿ ಒಂದು ಕರಡೆಗೆ ಕರೆದೊಯ್ಯುತ್ತಿದ್ದಾಗ ಈ ಗ್ಯಾಂಗ್ ಹೋಟೆಲ್ ಒಂದರ ಬಳಿ ನಿಲ್ಲಿಸಿದ್ದರು. ಅವರಿಗೆ ತಿಳಿಯದಂತೆ ಅಹ್ಮದಾಬಾದ್-ಇಂದೋರ್ ಬಸ್ ಏರಿದ. ತಡರಾತ್ರಿ ಸರ್ದಾಪುರಕ್ಕೆ ಬಂದು ಬಡವೇಲಿ ಗ್ರಾಮಕ್ಕೆ ಕೆಲ ಮಂದಿಯೊಂದಿಗೆ ವಾಪಸ್ಸಾದ. ಇನ್ನೂ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿದ್ದಾನೆ"

Similar News