ಕ್ರೈಸ್ತರ ಮನೆಗೆ ʼಸ್ನೇಹಯಾತ್ರೆʼ ನಡೆಸಿದ ಬಳಿಕ ಈದ್‌ ದಿನದಂದು ಮುಸ್ಲಿಮರನ್ನು ಭೇಟಿಯಾಗಲಿರುವ ಕೇರಳ ಬಿಜೆಪಿಗರು

Update: 2023-04-16 14:14 GMT

ತಿರುವನಂತಪುರಂ: ಕೇರಳದ ಬಿಜೆಪಿ (Kerala BJP) ಕಾರ್ಯಕರ್ತರು ಮುಂದಿನ ವಾರ ಈದ್ ಹಬ್ಬದ ಸಂದರ್ಭದಲ್ಲಿ ಶುಭಾಶಯ ವಿನಿಮಯ ಮಾಡಿಕೊಳ್ಳಲು ರಾಜ್ಯದ ಮುಸ್ಲಿಮರ  ನಿವಾಸಗಳಿಗೆ ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳನ್ನು ಉಲ್ಲೇಖಿಸಿ PTI ವರದಿ ಮಾಡಿದೆ.

ಕಳೆದ ರವಿವಾರ, ಪಕ್ಷವು ಈಸ್ಟರ್ ಹಿನ್ನೆಲೆಯಲ್ಲಿ 'ಸ್ನೇಹ ಯಾತ್ರೆ' ನಡೆಸಿತ್ತು. ಕ್ರಿಶ್ಚಿಯನ್‌ ಸಮುದಾಯವನ್ನು ಓಲೈಸಲು ಈ ಸ್ನೇಹಯಾತ್ರೆ ಆಯೋಜನೆ ಮಾಡಲಾಗಿತ್ತು ಎನ್ನಲಾಗಿದೆ. 

ಕೊಚ್ಚಿಯಲ್ಲಿ ಬುಧವಾರ ನಡೆದ ಬಿಜೆಪಿಯ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಈದ್ ಸಂದರ್ಭದಲ್ಲಿ ಮುಸ್ಲಿಮರನ್ನು ತಲುಪುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಸಭೆಯಲ್ಲಿ, ಬಿಜೆಪಿಯ ಕೇರಳ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಅವರು ಈಸ್ಟರ್ ಹಬ್ಬದ ಶುಭಾಶಯಗಳನ್ನು ಕ್ರಿಶ್ಚಿಯನ್ನರೊಂದಿಗೆ ವಿನಿಮಯ ಮಾಡಿದಕ್ಕಾಗಿ ಪಕ್ಷದ ರಾಜ್ಯ ಘಟಕವನ್ನು ಅಭಿನಂದಿಸಿದ್ದಾರೆ. ಭಾರತೀಯರು ಜಾತಿ, ಧರ್ಮ ಮತ್ತು ಪ್ರಾದೇಶಿಕ ಚಿಂತನೆಗಳನ್ನು ಮೀರಿದವರು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಲವಾಗಿ ನಂಬಿದ್ದಾರೆ ಎಂದು ಸಭೆಯಲ್ಲಿ ಹೇಳಿದ ಅವರು, ಎಲ್ಲರನ್ನೂ ಒಗ್ಗೂಡಿಸುವ ಪ್ರಧಾನಿ ಅವರ ಕಲ್ಪನೆಯನ್ನು ಸಾಕಾರಗೊಳಿಸಲು ಶ್ರಮಿಸುವಂತೆ ಪಕ್ಷದ ಕಾರ್ಯಕರ್ತರಿಗೆ ನಿರ್ದೇಶನ ನೀಡಿದರು ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ಎಲ್ಲರೊಂದಿಗೆ 'ವಿಷು' ಆಚರಿಸುವಂತೆಯೂ ಬಿಜೆಪಿ ಕಾರ್ಯಕರ್ತರಿಗೆ ಜಾವಡೇಕರ್ ಸೂಚಿಸಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈಸ್ಟರ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದಿಲ್ಲಿಯ ಚರ್ಚ್‌ಗೆ ಭೇಟಿ ನೀಡಿದ್ದು, ಬಿಜೆಪಿ ಅಲ್ಪಸಂಖ್ಯಾತರ ವಿರುದ್ಧವಾಗಿದೆ ಎಂಬ ಕಾಂಗ್ರೆಸ್ ಮತ್ತು ಎಡಪಕ್ಷಗಳ ಪ್ರತಿಪಾದನೆಯನ್ನು ಒಡೆದು ಹಾಕಲು ಸಹಾಯ ಮಾಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Similar News