ಟಿಕೆಟ್ ಹಂಚಿಕೆಯಲ್ಲಿ ಅಸಮಾಧಾನ: ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಂಜುನಾಥ ಪೂಜಾರಿ ರಾಜೀನಾಮೆ
ಉಡುಪಿ, ಎ.16: ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ಬಗ್ಗೆ ಅಸಮಾಧಾನಗೊಂಡಿರುವ ಕಾರ್ಕಳ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಂಜುನಾಥ ಪೂಜಾರಿ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ತಮ್ಮ ಈ ನಿರ್ಧಾರ ವನ್ನು ಪ್ರಕಟಿಸಿದರು. ನಾನು ಕಾಂಗ್ರೆಸ್‌ನ ತತ್ವ ಸಿದ್ಧಾಂತದಲ್ಲಿ ನಡೆಯುವ ನಿಷ್ಠಾವಂತ ಕಾರ್ಯಕರ್ತ. ಹಾಗಾಗಿ ನಾನು ಕಾಂಗ್ರೆಸ್ ಸದಸ್ಯನಾಗಿ ಇರುತ್ತೇನೆ. ಇನ್ನು ನನಗೆ ಯಾವುದೇ ಹುದ್ದೆ ಬೇಡ. ಯಾವುದೇ ಪ್ರಚಾರಕ್ಕೆ ಹೋಗುವುದಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಲ್ಲ. ಬೇರೆ ಪಕ್ಷಕ್ಕೂ ಸೇರುವುದಿಲ್ಲ. ರಾಹುಲ್ ಗಾಂಧಿಯೇ ನನ್ನ ನಾಯಕ ಎಂದರು.
ನಾವು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಡಿ.ಕೆ.ಶಿವಕುಮಾರ್ ಇದೀಗ ಆಡಿದ್ದೇ ಬೇರೆ. ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿರುವವರನ್ನು ಕಡೆಗಣಿಸಿದ್ದಾರೆ. ಬಿಜೆಪಿಯವರಿಗೆ ದೇಶವನ್ನು ಮಾರಾಟ ಮಾಡುತ್ತಿದ್ದಾರೆಂದು ಹೇಳುವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷವನ್ನೇ ಮಾರಾಟ ಮಾಡುತ್ತಿದ್ದಾರೆ. ಜಿಲ್ಲೆಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ 2 ಕೋಟಿ ರೂ. ಹಣಕ್ಕಾಗಿ ಟಿಕೆಟ್ ಮಾರಾಟ ಮಾಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನು ಗೆಲ್ಲುವುದಿಲ್ಲ ಎಂದು ಅವರು ಆರೋಪಿಸಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಅವನತಿಗೆ ವಿನಯ ಕುಮಾರ್ ಸೊರಕೆ ಮುಖ್ಯ ಕಾರಣ. ಇವರಿಂದಾಗಿಯೇ ಜಯಪ್ರಕಾಶ್ ಹೆಗ್ಡೆ, ಪ್ರಮೋದ್ ಮಧ್ವರಾಜ್ ಪಕ್ಷ ಬಿಟ್ಟು ಹೋದರು. ಹೊಸ ಮುಖಗಳಿಗೆ ಅವಕಾಶ ನೀಡಿರುವುದಾಗಿ ಹೇಳಿ ಹಲವು ಬಾರಿ ಶಾಸಕರು, ಸಂಸದರಾದ ಸೊರಕೆ, ಗೋಪಾಲ ಪೂಜಾರಿಗೆ ಯಾಕೆ ಟಿಕೆಟ್ ಕೊಟ್ಟಿದ್ದಾರೆ. ಭ್ರಷ್ಟರ ಚೇಲರಾಗಿ ಕೆಲಸ ಮಾಡುವ ಇವರ ಬದಲು, ಹೊಸಬರಿಗೆ ಟಿಕೆಟ್ ಕೊಡಬಹುದಿತ್ತಲ್ಲವೇ. ಜಿಲ್ಲೆಯಲ್ಲಿ ಕೆಲಸ ಮಾಡಿದ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ ಎಂದು ಅವರು ಟೀಕಿಸಿದರು.
ಕಾರ್ಕಳದಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಿದ ಮುನಿಯಾಲು ಉದಯ ಕುಮಾರ್ ಶೆಟ್ಟಿಗೆ ಯಾವ ನೆಲೆಯಲ್ಲಿ ಟಿಕೆಟ್ ನೀಡಿದ್ದಾರೆ. ಇವರು ಈವರೆಗೆ ಸುನೀಲ್ ಕುಮಾರ್ ವಿರುದ್ಧ ಒಂದೇ ಒಂದು ಹೇಳಿಕೆ ಕೊಟ್ಟಿಲ್ಲ. ಅದರ ಬದಲು ಶೇ.40 ಕಮಿಷನ್ ಬಗ್ಗೆ ಸರಕಾರದ ಪರವಾಗಿ ಹೇಳಿಕೊಟ್ಟಿ ದ್ದಾರೆ. ಇವರು ಒಮ್ಮೆ ನಳಿನ್ ಕುಮಾರ್ ಕಟೀಲ್ ಜೊತೆ, ಇನ್ನೊಮ್ಮೆ ಪ್ರಭಾಕರ್ ಭಟ್, ಸುನೀಲ್ ಕುಮಾರ್ ಜೊತೆಗೆ ಹೋಗುತ್ತಾರೆ ಎಂದು ಅವರು ಆರೋಪಿಸಿದರು.
"ಆಕಾಂಕ್ಷಿಗಳಿಂದ ಅರ್ಜಿ ತೆಗೆದುಕೊಂಡಿದ್ದಾರೆ. ನಮ್ಮ ಹತ್ತಿರ ಕೆಲಸ ಮಾಡಿಸಿದ್ದಾರೆ. ನಾನು ಈ ಚುನಾವಣೆ ಸಿದ್ಧತೆಗಾಗಿ ಒಂದು ಕೋಟಿ ರೂ. ಖರ್ಚು ಮಾಡಿದ್ದೇನೆ. ಕೊನೆಗೆ ಇವರು ಆಕಾಂಕ್ಷಿಗಳನ್ನು ಮಂಗ ಮಾಡಿ ಬೇರೆಯವರಿಗೆ ಟಿಕೆಟ್ ಮಾರಾಟ ಮಾಡಿದ್ದಾರೆ. ಕಾಂಗ್ರೆಸ್ ಡಿ.ಕೆ.ಶಿವಕುಮಾರ್ ಅವರ ಅಪ್ಪನ ಆಸ್ತಿಯಲ್ಲ. ನನ್ನ ಉಚ್ಛಾಟನೆ ಮಾಡಿದರೂ ನನ್ನಲ್ಲಿರುವ ಕಾಂಗ್ರೆಸ್ ಸಿದ್ಧಾಂತವನ್ನು ಉಚ್ಛಾಟನೆ ಮಾಡಲು ಅವರಿಗೆ ಸಾಧ್ಯವಿಲ್ಲ".
-ಮಂಜುನಾಥ್ ಪೂಜಾರಿ,
ಅಧ್ಯಕ್ಷರು, ಹೆಬ್ರಿ ಬ್ಲಾಕ್ ಕಾಂಗ್ರೆಸ್