×
Ad

ಚುರುಕುಗೊಂಡ ಪುತ್ತೂರು ಚುನಾವಣಾ ಕಣ: ಬಿಜೆಪಿ, ಜೆಡಿಎಸ್‍ನಲ್ಲಿ ಬಂಡಾಯದ ಕೂಗು

Update: 2023-04-16 22:19 IST

ಪುತ್ತೂರು: ರಾಷ್ಟ್ರೀಯ ಪಕ್ಷಗಳಲ್ಲಿ ಆಯ್ಕೆಯಾಗದ ಕಾರಣ ಸಾಕಷ್ಟು ಕುತೂಹಲದ ಜೊತೆಗೆ ಈ ತನಕ ಶಾಂತವಾಗಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳ ಘೋಷಣೆ ಆಗುತ್ತಿದ್ದಂತೆ ಚುರುಕುಗೊಂಡಿದೆ. ಇದರೊಂದಿಗೆ ಬಿಜೆಪಿ ಮತ್ತು ಜೆಡಿಎಸ್‍ನಲ್ಲಿ ಬಂಡಾಯದ ಕೂಗು ಮೊಳಗಿದೆ. 

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಲ್ಲಿ ಆಶಾ ತಿಮ್ಮಪ್ಪ, ಕಾಂಗ್ರೆಸ್‍ನಲ್ಲಿ ಅಶೋಕ್ ಕುಮಾರ್ ರೈ, ಜೆಡಿಎಸ್‍ನಲ್ಲಿ ದಿವ್ಯಪ್ರಭಾ ಚಿಲ್ತಡ್ಕ, ಅಮ್‍ಆದ್ಮಿಯಲ್ಲಿ ಡಾ. ವಿಶುಕುಮಾರ್, ಎಸ್‍ಡಿಪಿಐಯಲ್ಲಿ ಶಾಫಿ ಬೆಳ್ಳಾರೆ ಇವರನ್ನು ಅಭ್ಯರ್ಥಿಗಳಾಗಿ ಘೋಷಿಸಲಾಗಿದೆ. ಇದರ ಜೊತೆಗೆ ಬಿಜೆಪಿ ಬಂಡಾಯದ ಪಕ್ಷೇತರರಾಗಿ ಅರುಣ್ ಕುಮಾರ್ ಪುತ್ತಿಲ ಮತ್ತು ಜೆಡಿಎಸ್‍ನ ಬಂಡಾಯದ ಪಕ್ಷೇತರರಾಗಿ ಅಶ್ರಫ್ ಕಲ್ಲೇಗ ಅವರು ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ. 

ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಪರ ಹಾಲಿ ಶಾಸಕ ಸಂಜೀವ ಮಠಂದೂರು ಹೇಳಿಕೆ ನೀಡಿದ್ದು, ಆಶಾ ತಿಮ್ಮಪ್ಪ ಅವರ ಆಯ್ಕೆಯು ಪಕ್ಷದ ತೀರ್ಮಾನವಾಗಿದೆ. ಅದನ್ನು ಗೌರವಿಸಿ ನಾವೆಲ್ಲರೂ ತಂಡವಾಗಿ ಅವರ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದಿದ್ದಾರೆ. ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು ಆಶಾ ತಿಮ್ಮಪ್ಪ ಗೌಡರ ಜೊತೆಗಿದ್ದಾರೆ. ಆದರೆ ಬಂಡಾಯ ಅಭ್ಯರ್ಥಿಯಾಗಿರುವ ಅರುಣ್ ಕುಮಾರ್ ಪುತ್ತಿಲ ಅವರೊಂದಿಗೆ ಪಕ್ಷದ ಕೆಲವು ಪಂಚಾಯತ್ ಮಟ್ಟದ ಜನಪ್ರತಿನಿಧಿಗಳು, ಯುವ ಸಮುದಾಯ ಸೇರಿಕೊಂಡಿದ್ದಾರೆ. ತನ್ನ ಶಕ್ತಿ ಪ್ರದರ್ಶನಕ್ಕಾಗಿ ಬುಧವಾರ ಪುತ್ತಿಲ ಅವರು ನಡೆಸಿದ ಸಭೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಅಲ್ಲದೆ ಪುತ್ತಿಲ ಅವರು ತಾನು ಹಿಂದುತ್ವದ ಪರವಾಗಿ ಹಾಗೂ ಅನ್ಯಾಯಕ್ಕೆ ಒಳಗಾದ ಪಕ್ಷದ ಕಾರ್ಯಕರ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸ್ಪರ್ಧಿಸುತ್ತಿದ್ದೇನೆ. ಗೆದ್ದ ಬಳಿಕ ಬಿಜೆಪಿಗೆ ಶಕ್ತಿ ನೀಡಲಿದ್ದೇನೆ ಎಂದು ಹೇಳಿರುವುದು ಬಿಜೆಪಿಗೆ ಅಘಾತ ತಂದಿಟ್ಟಿದೆ.   

ಕಾಂಗ್ರೆಸ್‍ನಿಂದ 14 ಮಂದಿ ಸ್ಪರ್ಧಾಕಾಂಕ್ಷಿಗಳಿದ್ದರೂ ಪಕ್ಷವು ಇತ್ತಿಚೆಗಷ್ಟೇ ಬಿಜೆಪಿಯಿಂದ ಪಕ್ಷಾಂತರಗೊಂಡು ಕಾಂಗ್ರೆಸ್‍ಗೆ ಸೇರ್ಪಡೆಯಾಗಿರುವ ಉದ್ಯಮಿ ಅಶೋಕ್ ಕುಮಾರ್ ರೈ ಅವರಿಗೆ ಟಿಕೇಟ್ ನೀಡಿರುವುದು ಚರ್ಚೆಗೆ ಕಾರಣವಾಗಿದ್ದರೂ ಬಂಡಾಯದ ಧ್ವನಿ ಈ ತನಕ ಕೇಳಿ ಬಂದಿಲ್ಲ. ಆದರೆ ಶಕುಂತಳಾ ಶೆಟ್ಟಿ ಅವರಿಗೆ ಅವಕಾಶ ನೀಡದಿರುವುದನ್ನು ಆಕ್ಷೇಪಿಸಿ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಅರಸ್ ಮತ್ತು ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ವಿಶಾಲಾಕ್ಷಿ ಬನ್ನೂರು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್ ಟಿಕೇಟ್‍ಗಾಗಿ ಅರ್ಜಿ ಸಲ್ಲಿಸಿದ್ದ ಸುಳ್ಯದ ದಿವ್ಯಪ್ರಭಾ ಚಿಲ್ತಡ್ಕ ಅವರು ಕಾಂಗ್ರೆಸ್‍ನಲ್ಲಿ ಟಿಕೇಟ್ ಸಿಗುವುದು ಖಾತ್ರಿಯಾಗದ ಕಾರಣ ಜೆಡಿಎಸ್ ಪಕ್ಷಕ್ಕೆ ಪಕ್ಷಾಂತರಗೊಂಡಿದ್ದಾರೆ. ಪಕ್ಷಾಂತರಗೊಂಡ ದಿನವೇ ಅವರಿಗೆ ಜೆಡಿಎಸ್‍ನಿಂದ ಪುತ್ತೂರಿಗೆ ಟಿಕೇಟ್ ಲಭ್ಯವಾಗಿತ್ತು. ಇದರಿಂದಾಗಿ ಪುತ್ತೂರಿನ ಟಿಕೇಟ್ ಆಕಾಂಕ್ಷಿಯಾಗಿದ್ದ ಜೆಡಿಎಸ್‍ನ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿರುವ ಅಶ್ರಫ್ ಕಲ್ಲೇಗ ಅವರು ಬಂಡಾಯದ ಧ್ವನಿ ಮೊಳಗಿಸಿದ್ದಾರೆ. ಮುಸ್ಲಿಂ ಸಮುದಾಯದ ಮತದಾರರು ಪುತ್ತೂರಿನಲ್ಲಿ ಒಂದನೇ ಸ್ಥಾನದಲ್ಲಿದ್ದಾರೆ. ಆದರೆ ಮುಸ್ಲಿಮರಿಗೆ ಅವಕಾಶ ವಂಚನೆ ಮಾಡಲಾಗಿದೆ. ಸಮುದಾಯದ ಪರವಾಗಿ ನಾನು ಪಕ್ಷೇತರವಾಗಿ ಸ್ಪರ್ಧಿಸಲಿದ್ದೇನೆ ಎಂದಿದ್ದಾರೆ.

ಈ ನಡುವೆ ಆಮ್ ಆದ್ಮಿ ಪಕ್ಷವು ಮೊದಲ ಬಾರಿಗೆ ಪುತ್ತೂರಿನಲ್ಲಿ ಸ್ಪರ್ಧೆಗಿಳಿದಿದ್ದು, ಖಾತೆ ತೆರೆಯುವ ಉತ್ಸಾಹದಲ್ಲಿದೆ. ಆಮ್‍ಆದ್ಮಿ ಪಕ್ಷದಿಂದ ಉನ್ನತ ಶಿಕ್ಷಣ ಪಡೆದಿರುವ (ಎಂಎಸ್‍ಸಿ, ಪಿಎಚ್‍ಡಿ, ಎಂಬಿಎ, ಪಿಜಿಡಿಎಂಎಂ, ಡಿಎಫ್‍ಎಸಿ) ಕೃಷಿ ವಿಜ್ಞಾನಿಯಾಗಿದ್ದ ಡಾ. ಬಿ.ಕೆ. ವಿಶು ಕುಮಾರ್ ಅವರು ಸ್ಪರ್ಧಿಸುತ್ತಿದ್ದಾರೆ. ಎಸ್‍ಡಿಪಿಐ ಪಕ್ಷವೂ ಸ್ಪರ್ಧಾ ಕಣದಲ್ಲಿದೆ. ಪ್ರವೀಣ್ ನೆಟ್ಟರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಐಎ ಯಿಂದ ಬಂಧನಕ್ಕೆ ಒಳಗಾಗಿರುವ ಶಾಫಿ ಬೆಳ್ಳಾರೆ ಅವರನ್ನು ಪಕ್ಷವು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ. 

ಇದೀಗ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಯ ರಂಗೇರಿದೆ. ಪ್ರತಿಯೊಂದು ಪಕ್ಷದ ಅಭ್ಯರ್ಥಿಗಳು ಮತದಾರರ ಬಳಿಗೆ ತೆರಳುವ ಕೆಲಸ ಮಾಡುತ್ತಿದ್ದಾರೆ. ತಮ್ಮ ನಾಯಕರ ಪರ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತ ಯಾಚಿಸುತ್ತಿದ್ದಾರೆ.

Similar News