ಶೇ. 95 ಭಾರತೀಯರಿಗೆ ರಾಷ್ಟ್ರಧ್ವಜದ ಬಗ್ಗೆ ಜ್ಞಾನ ಇಲ್ಲ: ‘ದಿ ಫ್ಲ್ಯಾಗ್ ಫೌಂಡೇಶನ್ ಆಫ್ ಇಂಡಿಯಾ’ ಸಿಇಒ
ಗುವಾಹತಿ: ರಾಷ್ಟ್ರಧ್ವಜದ ಬಗ್ಗೆ ಶೇ. 95 ಭಾರತೀಯರಿಗೆ ಸರಿಯಾದ ಜ್ಞಾನ ಇಲ್ಲ ಎಂದು ‘ದಿ ಫ್ಲ್ಯಾಗ್ ಫೌಂಡೇಶನ್ ಆಫ್ ಇಂಡಿಯಾ’ ಹೇಳಿದೆ.
‘‘ಭಾರತದ ಶೇ. 95 ಜನರಿಗೆ ರಾಷ್ಟ್ರ ಧ್ವಜದ ಕುರಿತು ಜ್ಞಾನ ಇಲ್ಲ ಎಂದು ನಾನು ಹೇಳುತ್ತೇನೆ. ರಾಷ್ಟ್ರ ಧ್ವಜವನ್ನು ಹಗಲು ಹಾಗೂ ರಾತ್ರಿ ಆರೋಹಣ ಮಾಡಬಹುದೇ? ಖಾದಿಯಿಂದಲೇ ಮಾಡಬೇಕೇ? ಎಂಬ ಬಗ್ಗೆ ಅವರಿಗೆ ಸ್ಪಷ್ಟತೆ ಇಲ್ಲ" ಎಂದು ‘ದಿ ಫ್ಲ್ಯಾಗ್ ಫೌಂಡೇಶನ್ ಆಫ್ ಇಂಡಿಯಾ’ದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೇಜರ್ ಜನರಲ್ (ನಿವೃತ್ತ) ಅಸೀಮ್ ಕೊಹ್ಲಿ ಅವರು ಹೇಳಿದ್ದಾರೆ.
ದಿಲ್ಲಿ ಮೂಲದ ಈ ಸರಕಾರೇತರ ಸಂಸ್ಥೆ ಗುವಾಹಟಿಯಲ್ಲಿರುವ ನರೆಂಗಿ ಸೇನಾ ನೆಲೆಯಲ್ಲಿ ಸಂಸ್ಥೆ ಶನಿವಾರ 107 ನೇ ಬೃಹತ್ ರಾಷ್ಟ್ರಧ್ವಜ ಸ್ಥಾಪಿಸಿತು. ಸಂಸ್ಥೆ ತ್ರಿವರ್ಣ ಧ್ವಜದ ಬಗ್ಗೆ ಜನರಿಗೆ ಶಿಕ್ಷಣ ನೀಡುತ್ತಿದೆ. ಅಲ್ಲದೆ, ರಾಷ್ಟ್ರಧ್ವಜ ಹಾರಿಸಲು ಪ್ರೇರಣೆ ನೀಡುತ್ತಿದೆ ‘‘ಧ್ವಜವನ್ನು ಹತ್ತಿ, ಖಾದಿ, ಸಿಲ್ಕ್, ಪಾಲಿಸ್ಟರ್ ಬಟ್ಟೆಯಿಂದ ಮಾಡಬಹುದು. ಅದು 3:2 ಪ್ರಮಾಣದಲ್ಲಿ ಇರಬೇಕು’’ ಎಂದು ಅವರು ಹೇಳಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಅಂತ್ಯದಲ್ಲಿ ನಾವು ರಾಷ್ಟ್ರ ಧ್ವಜವನ್ನು ಕೆಳಗಿಳಿಸುತ್ತೇವೆ ಎಂದು ಹಲವು ಶಿಕ್ಷಿತರು ಹಾಗೂ ಹಿರಿಯರು ಹೇಳಿದರು. ಇದನ್ನು ಕೇಳಿ ನನಗೆ ನೋವುಂಟಾಯಿತು ಎಂದು ಅವರು ತಿಳಿಸಿದ್ದಾರೆ. ‘‘ಸರಕಾರದ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ. ರಾಷ್ಟ್ರಧ್ವಜವನ್ನು 365 ದಿನಗಳ ಕಾಲ ಹಾರಿಸುವುದು ನಿಮ್ಮ ಹಕ್ಕು’’ ಎಂದು ಅಸೀಮ್ ಕೊಹ್ಲಿ ಅವರು ಹೇಳಿದರು.