ಕಾರಿನ ಬಾನೆಟ್ ಮೇಲೆ ಸಿಲುಕಿಕೊಂಡ ಟ್ರಾಫಿಕ್ ಪೊಲೀಸ್‌ನನ್ನು 18 ಕಿ.ಮೀ. ಎಳೆದೊಯ್ದ ಚಾಲಕ
ಮುಂಬೈ,ನ.16: ಮಾದಕದ್ರವ್ಯದ ನಶೆಯಲ್ಲಿದ್ದ ಕಾರುಚಾಲಕನೊಬ್ಬ, ಸಿಗ್ನಲ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ತನ್ನನ್ನು ತಡೆದು ನಿಲ್ಲಿಸಿದ ಟ್ರಾಫಿಕ್ ಪೊಲೀಸ್‌ಗೆ ಡಿಕ್ಕಿ ಹೊಡೆದು, ಕಾರಿನ ಬಾನೆಟ್ ಮೇಲೆ ಸಿಕ್ಕಿಕೊಂಡ ಅವರನ್ನು ನವಿಮುಂಬೈನ ರಸ್ತೆಯಲ್ಲಿ 18 ಕಿ.ಮೀ. ದೂರದವರೆಗೂ ಎಳೆದೊಯ್ದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಆರೋಪಿ ಚಾಲಕನನ್ನು 23 ವರ್ಷ ವಯಸ್ಸಿನ ಆದಿತ್ಯ ಬೆಂಢೆ ಎಂದು ಗುರುತಿಸಲಾಗಿದೆ. ಆತ ಮುಂಬೈನ ವಾಶಿಯಲ್ಲಿ ಟ್ರಾಫಿಕ್ ಸಿಗ್ನಲ್ ಉಲ್ಲಂಘಿಸಿದ್ದನ್ನು ಗಮನಿಸಿದ್ನ ಟ್ರಾಫಿಕ್ ಪೊಲೀಸ್ ಸಿದ್ಧೇಶ್ವರ್ ಮಾಲಿ , ವಾಹನವನ್ನು ತಡೆದು ನಿಲ್ಲಿಸಲು ಯತ್ನಿಸಿದ್ದರು. ಈ ಸಂದರ್ಭ ಅವರು ವಾಹನದ ಎದುರಿನಲ್ಲೇ ನಿಂತಿದ್ದರೆನ್ನಲಾಗಿದೆ. ಆದರೆ ಕಾರನ್ನು ನಿಲ್ಲಿಸುವ ಬದಲು, ಬೆಂಢೆ ವಾಹನದ ವೇಗವನ್ನು ಹೆಚ್ಚಿಸಿದ್ದನು. ಆಗ ಬೆಂಢೆೆ ಕಾರಿನ ಬಾನೆಟ್ ಮೇಲೆ ಜಿಗಿದಿದ್ದರು. ಆದರೂ ವಾಹನ ನಿಲ್ಲಿಸದ ಬೆಂಢೆ, ಸುಮಾರು 18 ಕಿ.ಮೀ. ವರೆಗೂ ಕಾರನ್ನು ಚಲಾಯಿಸಿಕೊಂಡು ಹೋಗಿದ್ದನು.
ಕೊನೆಗೆ ಪೊಲೀಸರು, ಗವಹಾನ್ ಫಾಟದಲ್ಲಿನ ರಸ್ತೆಯ ಮಧ್ಯೆ ಕಂಟೈನರ್ ವಾಹನವನ್ನು ನಿಯೋಜಿಸುವ ಮೂಲಕ ಬೆಂಢೆೆಯ ಕಾರನ್ನು ನಿಲ್ಲಿಸುವಲ್ಲಿ ಸಫಲರಾದರು. ಬೆಂಢೆ ಮಾದಕದ್ರವ್ಯ ಸೇವಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಬೆಂಢೆಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಭಾರತೀಯ ದಂಡಸಂಹಿತೆಯ 307 (ಕೊಲೆ ಯತ್ನ), 353 ( ಕರ್ತವ್ಯ ನಿರ್ವಹಿಸದಂತೆ ಸಾರ್ವಜನಿಕ ಉದ್ಯೋಗಿಯನ್ನು ತಡೆಯಲು ಹಲ್ಲೆ ಅಥವಾ ಕ್ರಿಮಿನಲ್ ಬಲವನ್ನು ಬಳಸುವುದು) ಹಾಗೂ 279 (ಸಾರ್ವಜನಿಕ ರಸ್ತೆಯಲ್ಲಿ ಒರಟಾದ ರೀತಿಯಲ್ಲಿ ವಾಹನ ಚಾಲನೆ) ಸೆಕ್ಷನ್‌ಗಳು ಹಾಗೂ ಮಾದಕದ್ರವ್ಯಗಳು ಹಾಗೂ ಚಿತ್ತಭ್ರಾಮಕ ಪದಾರ್ಥಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.