×
Ad

ಮಂಗಳೂರು ನಗರ ದಕ್ಷಿಣ: ಬಿಜೆಪಿಯ ವೇದವ್ಯಾಸ ಕಾಮತ್ ನಾಮಪತ್ರ ಸಲ್ಲಿಕೆ

Update: 2023-04-17 21:24 IST

ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ  ವೇದವ್ಯಾಸ್ ಕಾಮತ್ ನಗರದ ಲಾಲ್‌ಬಾಗ್‌ನಲ್ಲಿರುವ ಮಂಗಳೂರು ಮನಪಾ ಕಟ್ಟಡದಲ್ಲಿರುವ ಚುನಾವಣಾಧಿಕಾರಿಗೆ ಸೋಮವಾರ ನಾಮಪತ್ರ ಸಲ್ಲಿಸಿದರು.

ನಗರದ ಕದ್ರಿ, ಮಂಗಳಾದೇವಿ, ರಥಬೀದಿಯ ವೆಂಕಟರಮಣ, ಬಜಿಲಕೇರಿಯ ಮುಖ್ಯಪ್ರಾಣ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಾವಿರಾರು ಅಭಿಮಾನಿ ಬಳಗ ಹಾಗೂ ಬಿಜೆಪಿ ನಾಯಕರು, ಕಾರ್ಯಕರ್ತರ ಸಮ್ಮುಖ ಕುದ್ರೋಳಿ ಕ್ಷೇತ್ರದಿಂದ ಲಾಲ್‌ಬಾಗ್‌ವರೆಗೆ ಪಾದಯಾತ್ರೆ ನಡೆಸಿ ನಾಮಪತ್ರ ಸಲ್ಲಿಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ವೇದವ್ಯಾಸ ಕಾಮತ್ ‘ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ಮುಖಂಡರ ಸಹಕಾರದಿಂದ ಈ ಬಾರಿ ಮತ್ತೆ ಸ್ಪರ್ಧಿಸಲು ಅವಕಾಶ ದೊರೆತಿದೆ. ಕಳೆದ 5 ವರ್ಷಗಳಲ್ಲಿ 4000 ಕೋ.ರೂ. ಅನುದಾನದಲ್ಲಿ ಆಗಿರುವ ಅಭಿವೃದ್ಧಿ ಯೋಜನೆಗಳು, ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಾಗಿರುವ ವಿವಿಧ ಯೋಜನೆಗಳು, ಆಡಳಿತ ಸುಧಾರಣೆಯ  ಕೆಲಸಗಳಿಂದ ಈ ಬಾರಿ ೩೦ ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸುವ ವಿಶ್ವಾಸ ಹೊಂದಿರುವೆ’ ಎಂದರು. 

ಈ ಸಂದರ್ಭ ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಪಕ್ಷದ ಮುಖಂಡರಾದ ನಿತಿನ್ ಕುಮಾರ್, ವಿಜಯ ಕುಮಾರ್ ಶೆಟ್ಟಿ, ರವೀಂದ್ರ ಕುಮಾರ್, ಮೋನಪ್ಪ ಭಂಡಾರಿ, ಉಮಾನಾಥ್ ಅಮೀನ್, ಸಿಎ ಗೌತಮ್ ಪೈ ಉಪಸ್ಥಿತರಿದ್ದರು.

ಪಾದಯಾತ್ರೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಚುನಾವಣಾ ಪ್ರಭಾರಿ ಸುಪ್ರಸಾದ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರೂಪಾ ಡಿ ಬಂಗೇರ, ಪುರಂದರ ಜಪ್ಪಿನಮೊಗರು, ಮಂಡಲ ಉಪಾಧ್ಯಕ್ಷರಾದ ರಮೇಶ್ ಕಂಡೆಟ್ಟು, ದೀಪಕ್ ಪೈ, ಅಜಯ್ ಕುಲಶೇಖರ್, ರಮೇಶ್ ಹೆಗ್ಡೆ ಮತ್ತಿತರರು ಪಾಲ್ಗೊಂಡಿದ್ದರು.

ಕಳೆದ ವರ್ಷ ನಗರದಲ್ಲಿ ನಡೆದ ಕುಕ್ಕರ್ ಸ್ಫೋಟದಲ್ಲಿ ಗಂಭೀರ ಗಾಯಗೊಂಡಿದ್ದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರು ಕುದ್ರೋಳಿ ದೇವಸ್ಥಾನಕ್ಕೆ ಆಗಮಿಸಿ ಅಭ್ಯರ್ಥಿ ವೇದವ್ಯಾಸ ಕಾಮತ್‌ರ ಗೆಲುವಿಗೆ ಶುಭ ಹಾರೈಸಿದರು.

Similar News