ಎಸ್‍ಡಿಪಿಐ ಅಭ್ಯರ್ಥಿ ಹನೀಫ್ ಮೂಳೂರು ನಾಮಪತ್ರ ಸಲ್ಲಿಕೆ
ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಎಸ್‍ಡಿಪಿಐ ಅಭ್ಯರ್ಥಿಯಾಗಿ ಹನೀಫ್ ಮೂಳೂರು ಸೋಮವಾರ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮೊದಲು ಮೂಳೂರಿನಿಂದ ಕಾಪು ಆಡಳಿತ ಸೌಧದವರೆಗೆ ಬೈಕ್ ರ್ಯಾಲಿಯಲ್ಲಿ ಆಗಮಿಸಿದ ನೂರಾರು ಕಾರ್ಯಕರ್ತರೊಂದಿಗೆ ಆಗಮಿಸಿದ ಹನೀಫ್ ಮೂಳೂರು ನಾಮಪತ್ರವನ್ನು ಚುನಾವಣಾಧಿಕಾರಿ ಬಿನೊಯ್ ನಂಬಿಯಾರ್ ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಇದ್ದರು.
ಇದಕ್ಕೂ ಮೊದಲು ಮಾಧ್ಯಮದೊಂದಿಗೆ ಮಾತನಾಡಿದ ಹನೀಫ್ ಮೂಳೂರು, ಭ್ರಷ್ಟಾಚಾರ ರಹಿತ ಒಳ್ಳಯೆ ಜನಪರ ಆಡಳಿತ ನಡೆಸಲು ಎಸ್‍ಡಿಪಿಐನಿಂದ ಮಾತ್ರ ಸಾಧ್ಯ. ನಾವು ಯಾರದೇ ಅಂಗಪಕ್ಷವಲ್ಲ. ಇದು ವಿರೋಧಿಗಳ ಅಪಪ್ರಚಾರ. ಇದಕ್ಕೆ ಯಾರೂ ಬಲಿಯಾಗಬೇಡಿ ಎಂದ ಅವರು, ಜಾತಿವಾದ, ಕೋಮುವಾದ, ಭ್ರಷ್ಟಾಚಾರ ಪಕ್ಷಗಳೊಂದಿಗೆ ಎಂದಿಗೂ ಎಸ್‍ಡಿಪಿಐ ಕೈಜೋಡಿಸುವುದಿಲ್ಲ. ಉತ್ತಮ ಆಡಳಿತ, ಶಾಂತಿ ಸೌಹಾರ್ದತೆಯನ್ನು ಕಾಪಾಡಿ ಜನಸಾಮಾನ್ಯರ ಅಭಿವೃದ್ಧಿಯೇ ಮೂಲಮಂತ್ರ ಎಂದರು.
ಬಿಜೆಪಿ ಹಾಗು ಕಾಂಗ್ರೆಸ್ ಸಹೋದರರಿದ್ದಂತೆ ಟಿಕೆಟ್ ಸಿಗದಿದ್ದರೆ ಈ ಎರಡು ಪಕ್ಷಗಳಿಗೂ ಪಕ್ಷಾಂತರವಾಗುವ ನಾಯಕರಿಂದ ಜನಸಾಮನ್ಯರು ಏನೂ ನಿರೀಕ್ಷಸಲು ಸಾಧ್ಯವಿಲ್ಲ. ಇದು ಸ್ವಾರ್ಥ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಎಂದರು. ಜಿಲ್ಲಾಧ್ಯಕ್ಷ ಶಾಹಿದ್ ಆಲಿ, ಮಾಜಿ ಅಧ್ಯಕ್ಷ ನಝೀರ್ ಉಡುಪಿ, ಜಿಲ್ಲಾ ಸಮಿತಿ ಸದಸ್ಯರಾದ ರಝಾಕ್ ವೈ.ಎಸ್, ಅಬೂಬಕ್ಕರ್ ಪಾದೂರು ಉಪಸ್ಥಿತರಿದ್ದರು.