ಅನ್ನಪೂರ್ಣ ಪರ್ವತವನ್ನು ಏರಿದ ಬಳಿಕ ಐರಿಶ್ ಮಹಿಳಾ ಪರ್ವತಾರೋಹಿ ಸಾವು
ಕಾಠ್ಮಂಡು,ಎ.18: ಐರ್ಲ್ಯಾಂಡ್ ನ ಮಹಿಳಾ ಪರ್ವತಾರೋಹಿಯೊಬ್ಬರು, ಜಗತ್ತಿನ 10ನೇ ಅತಿ ಎತ್ತರದ ಶಿಖರ ಅನ್ನಪೂರ್ಣವನ್ನು ಹತ್ತಿ ಇಳಿಯುತ್ತಿದ್ದಾಗ ಸಾವನ್ನಪ್ಪಿದ್ದಾರೆ.
ಮೃತ ಪರ್ವತಾರೋಹಿಯನ್ನು ನೊಯೆಲ್ ಹನ್ನಾ ಎಂದು ಗುರುತಿಸಲಾಗಿದೆ. ಆಕೆ ವಿಶ್ವದ ಅತಿ ಎತ್ತರದ ಶಿಖರ ಮೌಟ್ ಎವರೆಸ್ಟನ್ನು 10 ಸಲ ಆರೋಹಣಗೈದಿದ್ದರು. ಪಶ್ಚಿಮ ನೇಪಾಳದಲ್ಲಿರುವ 8,091 ಮೀಟರ್ ಎತ್ತರದ ಅನ್ನಪೂರ್ಣ ಶಿಖರದ ಶೃಂಗವನ್ನು ಅವರು ಸೋಮವಾರ ತಲುಪಿದ್ದರು. ಪರ್ವತದದಿಂದ ಇಳಿಯುತ್ತಿದ್ದಾಗ ಅವರು ಕ್ಯಾಂಪ್ 4ರಲ್ಲಿ ಮಧ್ಯರಾತ್ರಿ ವೇಳೆ ಸಾವನ್ನಪ್ಪಿದರು. ಆಕೆಯ ಸಾವಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲವೆಂದು ನೇಪಾಳದ ಪರ್ವತಾರೋಹಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅನ್ನಪೂರ್ಣ ಶಿಖರವನ್ನು 1950ರ ದಶಕದ ಆರಂಭದಲ್ಲಿ ಮೊತ್ತ ಮೊದಲ ಬಾರಿಗೆ ಫ್ರಾನ್ಸ್ ನ ಮೌರಿಸ್ ಏರಿದ್ದರು. ಈ ಶಿಖರದಲ್ಲಿ ಪದೇ ಪದೇ ಹಿಮಪಾತವುಂಟಾಗುವ ಸಾಧ್ಯತೆಯಿರುವುದರಿಂದ, ಪರ್ವತಾರೋಹಣವು ಅತ್ಯಂತ ಅಪಾಯಕಾರಿಯೆನಿಸಿದೆ. ಅನ್ನಪೂರ್ಣ ಶಿಖರವನ್ನು ಏರಲು ಹೊರಟಿದ್ದ ಹಲವು ಪರ್ವತಾರೋಹಿಗಳು ಮೃತಪಟ್ಟಿದ್ದಾರೆ.