ಬಳ್ಕುಂಜೆಯಲ್ಲಿ ಕೈಗಾರಿಕೆಗೆ ಭೂ ಸ್ವಾಧೀನ ನೆಪದಲ್ಲಿ ಶಾಸಕರಿಂದ ಬೇನಾಮಿ ಆಸ್ತಿ: ಮಿಥುನ್ ರೈ ಆರೋಪ

Update: 2023-04-19 17:42 GMT

ಮುಲ್ಕಿ, ಎ.19: ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಳ್ಕುಂಜೆ, ಉಳೆಪಾಡಿ, ಕೊಲ್ಲೂರು, ಅತಿಕಾರಿಬೆಟ್ಟು, ಕವತ್ತಾರು, ಬಜ್ಪೆ ವ್ಯಾಪ್ತಿಯಲ್ಲಿ ಕೈಗಾರಿಕೆಗಳಿಗೆ ಯೋಗ್ಯವಾದ ಸುಮಾರು ಒಂದು ಸಾವಿರ ಎಕರೆಗೂ ಮಿಕ್ಕಿ ಭೂಮಿಯಿದ್ದು, ಜನರು ಸರಕಾರಕ್ಕೆ ಕೊಡಲು ಉತ್ಸುಕರಾಗಿದ್ದು, ತಾವು ದಯವಿಟ್ಟು ಈ ಭಾಗದಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಭೂ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡು ಕೈಗಾರಿಕೆ ಸ್ಥಾಪಿಸಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಸರಕಾರ ಹಾಗೂ ಕೆಐಡಿಬಿ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಈ ಭಾಗದ ಕೃಷಿಕರ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚುವ ಪ್ರಯತ್ನ ನಡೆಸಿದ್ದಾರೆ ಎಂದು ಮಿಥುನ್ ರೈ ಆರೋಪಿಸಿದ್ದಾರೆ.

ಕಿನ್ನಿಗೋಳಿಯ ತಮ್ಮ ನಿವಾಸದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲ ತಿಂಗಳ ಹಿಂದೆ ಕಿನ್ನಿಗೋಳಿ ಸಮೀಪದ ಬಳ್ಕುಂಜೆ, ಕೊಲ್ಲೂರು, ಉಳೆಪಾಡಿ ಪ್ರದೇಶಗಳ ಸುಮಾರು 1,000 ಎಕರೆಗೂ ಅಧಿಕ ಕೃಷಿ ಪ್ರದೇಶವನ್ನು ಸ್ವಾಧೀನಪಡಿಸುವುದರ ಬಗ್ಗೆ ಶಾಸಕ ಹಾಗೂ ಸಂಸದರ ಮಧ್ಯಸ್ಥಿಕೆಯಲ್ಲಿ ತಡೆ ಹಿಡಿಯಲಾಗಿದೆ ಎಂಬುದು ಎಲ್ಲಾ ಶಾಸಕರ ಹಾಗೂ ಸಂಸದರ ನಾಟಕವಾಗಿದೆ. ಈ ಪ್ರದೇಶದಲ್ಲಿ ಈಗಾಗಲೇ ಕೈಗಾರಿಕೆಗೆ ಸರ್ವೇ ನಡೆಸಲಾಗಿದ್ದು, ಶಾಸಕರು ಕೋಟ್ಯಂತರ ರೂ. ಬೆಲೆ ಬಾಳುವ ಬೇನಾಮಿ ಆಸ್ತಿಗಳನ್ನು ಮಾಡಿದ್ದಾರೆ. ಇದರಲ್ಲಿ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕೂಡ ಭಾಗಿಯಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಧರ್ಮ ಹಾಗೂ ಅಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಚುನಾವಣೆ ಎಂದು ಮಾತನಾಡುವ ಶಾಸಕ ಉಮಾನಾಥ ಕೋಟ್ಯಾನ್, ಕೃಷಿ ಪ್ರಧಾನ ಪ್ರದೇಶಗಳಾದ ಅದರಲ್ಲೂ ಅತಿಕಾರಿಬೆಟ್ಟು ಪ್ರದೇಶದಲ್ಲಿ ಕಾರಣಿಕ ಕ್ಷೇತ್ರಗಳ ಜಾಗವನ್ನು ಕೈಗಾರಿಕೆಗೆ ಮಾರಲು ಹುನ್ನಾರ ನಡೆಸುತ್ತಿದೆ. ಬಳ್ಕುಂಜೆ ಭೂ ಸಂತ್ರಸ್ತರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಿದ್ದಾರೆ. ಶಾಸಕ ಕೋಟ್ಯಾನ್ ಸುಳ್ಳು ಹೇಳಿ ಕೃಷಿಕರ ಹೊಟ್ಟೆಗೆ ಒಡೆಯುವ ಯತ್ನ ಮಾಡಿದ್ದಾರೆ ಎಂದು ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಆರೋಪಿಸಿದರು.

ಶಾಸಕರು ಬಳ್ಕುಂಜೆಯಲ್ಲಿ ಕೈಗಾರಿಕೆಗೆ ಭೂ ಸ್ವಾಧೀನ ನೆಪದಲ್ಲಿ ಮಾಡಿದ ಬೇನಾಮಿ ಆಸ್ತಿ ಬಗ್ಗೆ ಸಮಗ್ರ ತನಿಖೆಯಾಗಬೇಕು ಹಾಗೂ ಕೈಗಾರಿಕೆಗಳಿಗೆ ಭೂಸ್ವಾಧೀನದ ಬಗ್ಗೆ ಸರಕಾರಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಬರೆದ ಪತ್ರದ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ ಮಿಥುನ್ ರೈ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಶಾಸಕರ ವಿರುದ್ಧ ಹಾಗೂ ಕೃಷಿ ಭೂಮಿ ಉಳಿಸಲು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ್ ಬೆರ್ನಾಡ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಪ್ರಶಾಂತ್ ಶೆಟ್ಟಿ, ಮರಿನಾ ಮತ್ತಿತರರು ಉಪಸ್ಥಿತರಿದ್ದರು. 

Similar News