ಬಿಸಿಲ ಝಳಕ್ಕೆ ಕೇರಳ ಕಂಗಾಲು: ಒಂದೇ ದಿನ 100 ದಶಲಕ್ಷ ಯೂನಿಟ್ ಗೂ ಅಧಿಕ ವಿದ್ಯುತ್ ಬಳಕೆ
ತಿರುವನಂತಪುರ,ಎ.19: ಕಳೆದ ಕೆಲವು ದಿನಗಳಿಂದ ಕೇರಳವುತೀವ್ರ ಬಿಸಿಲಿನ ಝಳದಿಂದ ತತ್ತರಿಸಿದ್ದು, ಪಾಲಕ್ಕಾಡ್ ಜಿಲ್ಲೆಯಲ್ಲಿ 39.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.
ಬಿಸಿಲಿನ ತಾಪಮಾನ ಏರಿಕೆಯಾಗುತ್ತಿರುವಂತೆಯೇ, ಕೇರಳದಲ್ಲಿ ವಿದ್ಯುತ್ ಖರೀದಿಯೂ ಹೆಚ್ಚಳ ಕಂಡಿದೆ. ಎಪ್ರಿಲ್ 17ರಂದು 100.35 ದಶಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗಿದೆ ಎಂದು ಕೇರಳ ವಿದ್ಯುತ್ಶಕ್ತಿ ಇಲಾಖೆಯ ದಾಖಲೆಗಳಿಂದ ತಿಳಿದುಬಂದಿದೆ.
ಈ ತಿಂಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ಖರೀದಿ ಪ್ರಮಾಣವು 100 ದಶಲಕ್ಷ ಯೂನಿಟ್ ಗಡಿಯನ್ನು ದಾಟಿರುವುದು ಇದು ಮೂರನೆ ಸಲ ಹಾಗೂ ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಯಾಗಿದೆ. ಎಪ್ರಿಲ್ ತಿಂಗಳ 13, 28 ದಿನಾಂಕಗಳಲ್ಲಿ ವಿದ್ಯುತ್ ಖರೀದಿ ಪ್ರಮಾಣವು 100 ದಶಲಕ್ಷ ಯೂನಿಟ್ ಗಡಿಯನ್ನು ದಾಟಿತ್ತು ಎಂದು ಮೂಲಗಳು ತಿಳಿಸಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ರಾಜ್ಯವು ವಿದ್ಯುತ್ ಕೊರತೆಯನ್ನು ಎದುರಿಸುವ ಸಾಧ್ಯತೆಯಿದ್ದು, ಜನತೆ, ವಿದ್ಯುತ್ಶಕ್ತಿ ಬಳಕೆಯಲ್ಲಿ ಮಿತವ್ಯಯ ಸಾಧಿಸುವಂತೆ ಕೇರಳ ವಿದ್ಯುತ್ಚ್ಛಕ್ತಿ ಮಂಡಳಿಯು ಜನರಿಗೆ ಕರೆ ನೀಡಿದೆ.
ರಾಜ್ಯದ ಅಣೆಕಟ್ಟುಗಳಲ್ಲಿ ನೀರಿನ ಮಟ್ಟದ ಗಣನೀಯ ಇಳಿಕೆಯಾಗಿದೆ ಹಾಗೂ ಕಳೆದ ಆರು ವರ್ಷಗಳಲ್ಲೇ ಕನಿಷ್ಠ ಮಟ್ಟವನ್ನು ತಲುಪಿದೆ. ರಾಜ್ಯದ ಅಣೆಕಟ್ಟುಗಳಲ್ಲಿ ನೀರಿನ ಮಟ್ಟವು, ಒಟ್ಟು ಸಂಗ್ರಹ ಸಾಮರ್ಥ್ಯಕ್ಕಿಂತ ಶೇ.38ರಷ್ಟು ಇಳಿಕೆಯನ್ನು ಕಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲಪ್ಪು, ಕೊಟ್ಟಾಯಂ, ಕೋಝಿಕ್ಕೋಡ್, ಕೊಲ್ಲಂ ಹಾಗೂ ತ್ರಿಶೂರು ಜಿಲ್ಲೆಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಅಧಿಕವಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.