10 ಸಾವಿರ ದಾಟಿದ ಕೋವಿಡ್ ಪ್ರಕರಣ: ಮೋದಿ ಆಪ್ತನಿಂದ ಉನ್ನತಮಟ್ಟದ ಸಭೆ

Update: 2023-04-20 03:19 GMT

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ 10 ಸಾವಿರ ದಾಟುತ್ತಿರುವಂತೆಯೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ನಿಯಂತ್ರಣಕ್ಕೆ ಕಾರ್ಯಯೋಜನೆ ರೂಪಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಮುಖ್ಯ ಕಾರ್ಯದರ್ಶಿ ಪಿ.ಕೆ.ಮಿಶ್ರಾ ಅವರು ಬುಧವಾರ ಉನ್ನತ ಮಟ್ಟದ ಸಭೆ ನಡೆಸಿ ದೇಶದ ಕೋವಿಡ್-19 ಪರಿಸ್ಥಿತಿಯನ್ನು ಅವಲೋಕಿಸಿದರು.

ದೇಶದ ವಿವಿಧೆಡೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮೂಲಸೌಕರ್ಯ ಹಾಗೂ ಸರಬರಾಜು ವ್ಯವಸ್ಥೆಯ ಸನ್ನದ್ಧತೆ ಬಗ್ಗೆ, ಔಷಧಿ ಮತ್ತು ಲಸಿಕೆ ಅಭಿಯಾನದ ಬಗ್ಗೆ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಿತು ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಬುಧವಾರ ದೇಶದಲ್ಲಿ 10542 ಕೋವಿಡ್-19 ಪ್ರಕರಣಗಳು ವರದಿಯಾಗಿವೆ.

ದೇಶದ ಹನ್ನೊಂದು ರಾಜ್ಯಗಳಲ್ಲಿ ಬುಧವಾರ ಒಟ್ಟು 27 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ. ಮರಾರಾಷ್ಟ್ರದಲ್ಲಿ ಗರಿಷ್ಠ ಅಂದರೆ ಆರು ಮಂದಿಮೃತಪಟ್ಟಿದ್ದು, ದೆಹಲಿ (5), ಛತ್ತೀಸ್‌ಗಢ (4) ಮತ್ತು ಜಾರ್ಖಂಡ್ (3) ನಂತರದ ಸ್ಥಾನಗಳಲ್ಲಿವೆ. ದೇಶದಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇಕಡ 4.39ರಷ್ಟಿದೆ. ಮಿಶ್ರಾ ನೇತೃತ್ವದ ಸಭೆಯಲ್ಲಿ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ದೇಶದ ಹಾಗೂ ಜಾಗತಿಕ ಕೋವಿಡ್-19 ಸ್ಥಿತಿಗತಿ ಬಗ್ಗೆ ಸಮಗ್ರ ಪ್ರಸ್ತುತಿ ನೀಡಿದರು.

ಕೇರಳ, ದೆಹಲಿ, ಮಹಾರಾಷ್ಟ್ರ, ಹರ್ಯಾಣ, ಉತ್ತರ ಪ್ರದೇಶ, ತಮಿಳುನಾಡು, ಕರ್ನಾಟಕ ಹಾಗೂ ರಾಜಸ್ಥಾನದಲ್ಲಿ ಪ್ರಕರಣಗಳ ಸಂಖ್ಯೆ ಕ್ಷಿಪ್ರವಾಗಿ ಏರಿಕೆಯಾಗುತ್ತಿರುವುದನ್ನು ಸಭೆಯ ಗಮನಕ್ಕೆ ತಂದರು. ಲಸಿಕ ಅಭಿಯಾನದ ಸ್ಥಿಗಗತಿ ಬಗ್ಗೆ, ಔಷಧಿ ಲಭ್ಯತೆ ಹಾಗೂ ದೇಶಾದ್ಯಂತ ಅರೋಗ್ಯ ಮೂಲಸೌಕರ್ಯದ ಸರ್ವಸನ್ನದ್ಧತೆ ಬಗ್ಗೆಯೂ ಅವಲೋಕಿಸಲಾಯಿತು ಎಂದು ತಿಳಿದು ಬಂದಿದೆ.

Similar News