ಸುರತ್ಕಲ್: ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ನಾಮಪತ್ರ ಸಲ್ಲಿಕೆ
ಸುರತ್ಕಲ್: ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರು ಗುರುವಾರ ಬೆಳಗ್ಗೆ ಕಾವೂರು ಮೈದಾನದಲ್ಲಿ ಬಹಿರಂಗ ಸಮಾವೇಶ ನಡೆಸಿ, ಕಾವೂರು ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿ ಬಳಿಕ ನಾಮಪತ್ರ ಸಲ್ಲಿಸಿದರು.
ಸಮಾವೇಶದಲ್ಲಿ ಮಾತಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್, ಕಾಂಗ್ರೆಸ್ ಪಕ್ಷ ನಿಂತ ನೀರಲ್ಲ ಹರಿಯುವ ನೀರು. ಹೀಗಾಗಿ ಇನಾಯತ್ ಅಲಿ ಅನ್ನುವ ಯುವ ನಾಯಕನಿಗೆ ಪಕ್ಷ ಟಿಕೆಟ್ ನೀಡಿದೆ. ಓರ್ವ ಸಮರ್ಥ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ. ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ಇಂದಿರಾ ಗಾಂಧಿಯವರು ರಾಷ್ಟ್ರೀಕೃತ ಗೊಳಿಸಿದ್ದ ಬ್ಯಾಂಕ್‌ಗಳನ್ನು ಬಿಜೆಪಿ ಸರಕಾರ ಬೇರೆ ಬ್ಯಾಂಗಳೊಂದಿಗೆ ವಿಲೀನ ಮಾಡಿ ಜನತೆಗೆ ಮೋಸ ಮಾಡಿದೆ. ಸಂಸದ ನಳಿನ್ ಕುಮಾರ್ ಅವರು ಆಸ್ಕರ್ ಫೆರ್ನಂಡಿಸ್ ತಂದಿದ್ದ ಮೇಲ್ಸೇತುವೆ ನಿರ್ಮಿಸಲು 15 ವರ್ಷ ಮಾಡಿ ಈಗ ಅದನ್ನು ನಳಿನ್ ಕುಮಾರ್ ಸೇತುವೆ ಎಂದು ಜನರು ಹೇಳುತ್ತಿದಾರೆ ಎಂದು ಲೇವಡಿ ಮಾಡಿದರು.
ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ ಮಾತನಾಡಿ, ಬಿಜೆಪಿಯವರು ತಮ್ಮ ಅಭಿವೃದ್ಧಿಯನ್ನು ಹೇಳಿಕೊಂಡು ಮತ ಕೇಳುವುದಿಲ್ಲ. ಮೋದಿ, ರಾಮಮಂದಿರ, ಹಿಂದೂ ಧರ್ಮಕ್ಕೆ ಮತನೀಡಿ ಎಂದು ಕೇಳುತ್ತಾರೆ. ಎಲ್ಲಾ ಧರ್ಮ, ಜಾತಿ, ಪಂಗಡದ ಜನರು ಒಪ್ಪಿಕೊಂಡಿರುವ ಏಕೈಕ ಜತ್ಯತೀತ ಪಕ್ಷ ಅದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ. ಹಿಂದೂಗಳೇ ಹೆಚ್ಚಾಗಿರುವ ರಾಜ್ಯಗಳಲ್ಲೂ ಕಾಂಗ್ರೆಸ್ ಪಕ್ಷ ಜಯಗಳಿಸುತ್ತಿದೆ. ಇದು ಜನರು ಬಿಜೆಪಿಯ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ ಎಂಬುದರ ಸೂಚನೆ ಎಂದರು.
ಇನಾಯತ್ ಅಲಿ ಅವರು ಯೋಗ್ಯ ಅಭ್ಯರ್ಥಿ ಎಂದು ಪಕ್ಷ ಗುರುತಿಸಿ ಟಿಕೆಟ್ ನೀಡಿದೆ. ಅವರಿಗೆ ನಾವೆಲ್ಲರೂ ಬೆಂಬಲಿಸಬೇಕು. ನಾವೆಲ್ಲರೂ ಹಿಂದೂಗಳು ಒಗ್ಗಟ್ಟಾಗಿ ಮುಸ್ಲಿಂ ಅಭ್ಯರ್ಥಿಯನ್ನು ಸೋಲಲು ಬಿಡುವುದಿಲ್ಲ. ಇನ್ನುಳಿದ 20 ದಿನಗಳ ಅವಧಿಯಲ್ಲಿ ಪಕ್ಷ ನೀಡಿರುವ ಪ್ರಬುದ್ಧ ಅಭ್ಯರ್ಥಿಯನ್ನು ಗೆಲ್ಲಿಸುವ ಪಣ ತೊಡಬೇಕು ಎಂದು ಕರೆ ನೀಡಿದರು.
ಬಳಿಕ ಮಾತಾಡಿದ ಅಭ್ಯರ್ಥಿ ಇನಾಯತ್ ಅಲಿ , ಪಕ್ಷ ನನ್ನ ಸೇವೆಯನ್ನು ಗುರುತಿಸಿ ಟಿಕೆಟ್ ನೀಡಿದೆ. ನನ್ನನ್ನು ಎಲ್ಲಾ ಸಮುದಾಯದ ಜನರು ಪ್ರೀತಿಯಿಂದ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ. ಮಂಗಳೂರು ಉತ್ತರ ಕ್ಷೇತ್ರದ ಕಾರ್ಯಕರ್ತರು, ಮುಖಂಡರಲ್ಲಿ ಏನೇ ವೈಮನಸ್ಸು ಇದ್ದರೂ ಅದನ್ನು ಮರೆತು ಎಲ್ಲರೂ ಒಂದಾಗಿ ಗೆಲುವಿಗೆ ಶ್ರಮಿಸಬೇಕೆಂದು ಮನವಿ ಮಡಿದರು.
ವೇದಿಕೆಯಲ್ಲಿ ಮಿಥುನ್ ರೈ, ಮಾಜಿ ಮೇಯರ್ ಕವಿತಾ ಸನಿಲ್, ಸುಧೀರ್ ಕುಮಾರ್ ಮುರೊಳಿ, ಗಿರೀಶ್ ಆಳ್ವ, ಶಾಹುಲ್ ಹಮೀದ್, ನೀರೇಶ್ ಪಾಲ್, ಉಮೇಶ್ ದಂಡೆಕೇರಿ, ಕೆ. ಅಭಯಚಂದ್ರ ಜೈನ್, ಯು. ಪಿ ಇಬ್ರಾಹಿಂ, ಶಶಿಕಲಾ ಪದ್ಮನಾಭ, ಜೇಸನ್ ಸುರತ್ಕಲ್, ಸುರೇಂದ್ರ ಕಂಬಳಿ, ಮುಫಿದಾ, ಚಂದ್ರಹಾಸ್ ಪೂಜಾರಿ, ಶ್ರೀನಿವಾಸ್ ಸಾಲಿಯಾನ್, ಆನಂದ ಅಮೀನ್, ನೀರಜ್ ಪಾಲ್, ಮಂಗಳೂರು ಉತ್ತರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಹಮ್ಮದ್ ಸಮೀರ್ ಮೊದಲಾದವರು ಉಪಸ್ಥಿತರಿದ್ದರು.
"ಬಿಜೆಪಿಯದ್ದು ಡೋಂಗಿ ದೇಶಪ್ರೇಮ"
ಸ್ವತಂತ್ರ್ಯ ತಂದು ಕೊಟ್ಟದ್ದು ಕಾಂಗ್ರೆಸ್ ಆ ಸಮಯದಲ್ಲಿ ನಗುತ್ತಿದ್ದವರಿಗೆ ಈಗ ಕುಳಿತಲ್ಲಿ ನಿಂತಲ್ಲಿ ದೇಶ ಪ್ರೇಮ ಉಕ್ಕಿ ಹರಿಯುತ್ತಿದೆ. ಬಡವರ ಮಕ್ಕಳನ್ನು ಅಪರಾಧ ಕೃತ್ಯಗಳಿಗೆ ಛುಬಿಡುತ್ತಿದಾರೆ. ತಮ್ಮ ಮಕ್ಕಳಿಗೆ ವಿದೇಶದಲ್ಲಿ ವಿದ್ಯಾಭ್ಯಾಸ ನೀಡುತ್ತಿದ್ದಾರೆ. ಒಬ್ಬನೇ ಒಬ್ಬ ಬಿಜೆಪಿ ನಾಯಕನ ಮಕ್ಕಳ ಮೇಲೆ ಕ್ರಮಿನಲ್ ಪ್ರಕರಣಗಳಿಲ್ಲ. ಅವರು ವಿದೇಶಗಳಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ಒಕಗಲು ಮಸೂದೆಯಲ್ಲಿ ಭೂಮಿ ಪಡೆದವರ ಮಕ್ಕಳನ್ನು ಅಡ್ಡದಾರಿ ಹಿಡಿಸಿದವರು ಬಿಜೆಪಿಯವರು ದೇಶಕ್ಕಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ ಅಭಯಚಂದ್ರ ಜೈನ್, ಬಿಜೆಪಿಯವರದ್ದು ದೋಂಗಿ ದೇಶ ಪ್ರೇಮ ಎಂದು ಕಿಡಿಕಾರಿದರು.
ಸಾವಿರಾರು ಕಾರ್ಯಕರ್ತರೊಂದಿಗೆ ರೋಡ್ ಶೋ
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರು ಸಾವಿರಾರು ಕಾರ್ಯಕರ್ತರ ಜೊತೆ ಹೂವಿನಲ್ಲಿ ಅಲಂಕರಿಸಲಾಗಿದ್ದ ತೆರೆದ ವಾಹನದಲ್ಲಿ ಬೃಹತ್ ಮೆರಣಿಗೆಯ ಮೂಲಕ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ರೋಡ್ ಶೋ ಉದ್ದಕ್ಕೂ ಕಾರ್ಯಕರ್ತರು ಹೂವಿನ ಸುರಿಮಳೆಗೈಯ್ಯುತ್ತಾ ಇನಾಯತ್ ಅಲಿ, ಕಾಂಗ್ರೆಸ್ ಪಕ್ಷ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಜಯಘೋಷ ಮೊಳಗಿಸಿದರು. ಬಳಿಕ ಕಾರ್ಯಕರ್ತರೊಂದಿಗೆ ನಗರದ ಮಿನಿ ವಿಧಾನ ಸೌಧಕ್ಕೆ ತೆರಳಿ ತನ್ನ ಉಮೇದುವಾರಿಕೆ ಸಲ್ಲಿಸಿದರು.
"ಕೈ" ಕಾರ್ಯಕರ್ತರು ಮೊಯ್ದಿನ್ ಬಾವ ಬೆಂಬಲಿಗರ ನಡುವೆ ಮಾತಿನ ಚಕಮಕಿ
ನಾಮಪತ್ರ ಸಲ್ಲಿಕೆಯ ಸಂದರ್ಭ ಕಾಂಗ್ರೆಸ್‌ನಿಂದ ಟಿಕೆಟ್ ನಿರಾಕರಿಸಿದ್ದ ಪರಿಣಾಮ ಮಾಜಿ ಶಾಸಕ ಕಾಂಗ್ರೆಸ್ ತೊರೆದು ಜೆಡಿಎಸ್‌ನಲ್ಲಿ ನಾಮಪತ್ರ ಸಲ್ಲಿಸಲು ಮಿನಿ ವಿಧಾನ ಸೌಧಕ್ಕೆ ಆಗಮಿಸದ್ದರು. ಈ ವೇಳೆ ಮೊದಲೇ ನಾಮಪತ್ರ ಸಲ್ಲಿಸಲು ಬಂದಿದ್ದ ಇನಾಯತ್ ಅಲಿ ಬೆಂಬಲಿಗರ ಜೊತೆ ಪೈಪೋಟಿಯ ಘೋಷಣೆಗಳು ಮಾತಿನ ಚಕಮಕಿ ನಡೆಯಿತು. ಜೊತೆಗೆ ಜೆಡಿಎಸ್ ಕಾರ್ಯಕರ್ತರು ಡಿಕೆಶಿ ವಿರುದ್ಧ "ಕಳ್ಳ" ಎಂದು ಘೋಷಣೆಗಳನ್ನು ಕೂಗಲಾರಂಭಿಸಿದರು. ಆಗ ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮೊಯ್ದಿನ್ ಬಾವ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಎರಡೂ ಕಡೆಯವರನ್ನು ಬೇರ್ಪಡಿಸಿ ಶಾಂತಿ ಕಾಪಾಡಿದರು.
ಬಳಿಕ ಮಾತನಾಡಿದ ಇನಾಯತ್ ಅಲಿ, ಕಾಂಗ್ರೆಸ್ ಈ ಬಾರಿ ಯುವ ಕಾರ್ಯಕರ್ತರಿಗೆ ಆದ್ಯತೆ ನೀಡಿ ಅವಕಾಶ ನೀಡಿದೆ ಎಂದರು. ಹಣ ನೀಡಿ ಟಿಕೆಟ್ ಪಡೆಯಲಾಗಿದೆ ಎಂಬ ಆರೋಪದ ಕುರಿತ ಪ್ರಶ್ನೆಗೆ ಉತ್ತರಿದ ಇನಾಯತ್ ಅಲಿ, ಇದು ಸಿನೆಮಾ ಟಿಕೆಟ್ ಅಲ್ಲ, ಹಣ ನೀಡಿ ಪಡೆಯಲು, ನಾಕು ಕಳೆದ 27ವರ್ಷಗಳಿಂದ ಕಂಗ್ರೆಸ್‌ನಲ್ಲಿ ನಿಷ್ಠಾವಂತನಾಗಿ ದುಡಿದಿದ್ದೇನೆ. ಎನ್‌ಎಸ್‌ಯುಐ ಬ್ಲಾಕ್ ಅಧ್ಯಕ್ಷನಾಗಿ, ರಾಜ್ಯಮಟ್ಟದಲ್ಲಿ ಪಕ್ಷದ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇನೆ. ಹಾಗಾಗಿ ಪಕ್ಷ ನನ್ನ ಕೆಲಸವನ್ನು ಗುರುತಿಸಿ ಈ ಬಾರಿ ಅವಕಾಶ ನೀಡಿದೆ ಎಂದರು. ಸತತವಾಗಿ ಎರಡು ವರ್ಷಗಳಿಂದ ಕ್ಷೇತ್ರದ ಮನೆಮನೆಗೂ ಭೇಟಿ ನೀಡಿ ಅವರ ಕಷ್ಟ ಸುಖಗಳನ್ನು ಅರಿತ್ತಿದ್ದೇನೆ. ಕಾರ್ಯಕರ್ತರ ಮೇಲೆ ಸಂಪೂರ್ಣ ವಿಶ್ವಾಸ ಇದೆ. ಕಾರ್ಯಕರ್ತರ ಮೂಲಕ ಮತದಾರರನ್ನು ಮುಟ್ಟಿ ಗೆಲ್ಲುವ ಭರವಸೆ ಇದೆ ಎಂದರು.
ಜನರು ಭ್ರಷ್ಟ ಬಿಜೆಪಿಯ ವಿರುದ್ಧ ತತ್ತರಿಸಿಹೋಗಿದ್ದಾರೆ. ಜನರು ಬದಲಾವಣೆಯನ್ನು ಬಯಸುತ್ತಿರುವುದು ಅವರ ಭೇಟಿಯ ವೇಳೆ ತಿಳಿಯಲು ಸಾಧ್ಯವಾಗಿದೆ. ಉತ್ತರ ವಿಧಾನ ಸಭಾ ಕ್ಷೇತ್ರ ಮತ್ತು ರಾಜ್ಯದಲ್ಲಿಯೂ ಬದಲಾವಣೆ ಆಗಲಿದೆ ಎಂದು ಭರವಸೆ ನುಡಿದರು. ಟಿಕೆಟ್ ಖರೀದಿಸಿರುವ ಕುರಿತು ಮೊಯ್ದಿನ್ ಬಾವ ಅವರ ಆರೋಪದ ಕುರಿತು ಪ್ರತಿಕ್ರಿಯಿಸದ ಆಲಿ, ಈ ಕುರಿತು ಆರೋಪ ಮಾಡುವ ಬದಲು ಸಾಕ್ಷಿ ನೀಡಿ ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.
ನಾಮಪತ್ರ ಸಲ್ಲಿಸುವ ಸಂದರ್ಭ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡೆಕೇರಿ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಕೆಪಿಸಿಸಿ ಸದಸ್ಯ ಪ್ರಥ್ವಿರಾಜ್, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸ್ಟಾನಿ ಅಲ್ವರೆಸ್ ಉಪಸ್ಥಿತರಿದ್ದರು.