ವಿವಿಧ ಪ್ರಕರಣಗಳ ಆರೋಪಿ ತಹಶೀಲ್ದಾರ್ ರಘುಮೂರ್ತಿ ರಾಜೀನಾಮೆ ಅಂಗೀಕಾರ
ಬೆಂಗಳೂರು: ಹದಿನೇಳು ಎಕರೆ ಸರಕಾರಿ ಜಮೀನು ಪರಿಹಾರದ ಹಣ ಪಡೆಯುವ ಪ್ರಕರಣ, ಸರಕಾರಿ ಗೋಮಾಳ ಜಮೀನಿನಲ್ಲಿ ಅಕ್ರಮ ಪೋಡಿ, ಖಾಸಗಿ ವ್ಯಕ್ತಿಗಳ ಹೆಸರಿಗೆ ಸರಕಾರಿ ಜಮೀನು ಪೋಡಿ ದುರಸ್ತಿ, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ, ಭೂಮಾಫಿಯಾದೊಂದಿಗೆ ಶಾಮೀಲಾಗಿ ಬಗರ್ ಹುಕುಂ ಜಮೀನು ಮಂಜೂರಾತಿ ಸೇರಿದಂತೆ ಗಂಭೀರ ಸ್ವರೂಪದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ಗುರಿಯಾಗಿರುವ ತಹಶೀಲ್ದಾರ್ ಎನ್.ರಘುಮೂರ್ತಿ ಎಂಬವರ ರಾಜೀನಾಮೆಯನ್ನು ರಾಜ್ಯ ಸರಕಾರವು ಅಂಗೀಕರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಗಂಭೀರ ಸ್ವರೂಪದ ಆರೋಪಗಳ ಕುರಿತಾದ ಪ್ರಕರಣಗಳು ವಿಚಾರಣೆ ಹಂತದಲ್ಲಿರುವ ಕಾರಣ ಒಂದು ವೇಳೆ ಆರೋಪ ಸಾಬೀತಾದಲ್ಲಿ ಸೇವೆಯಿಂದ ತೆಗೆದು ಹಾಕುವ ಅಥವಾ ವಜಾ ಮಾಡುವ, ದಂಡನೆ ವಿಧಿಸುವ ಸಂಭವವಿದೆ ಎಂದು ಕಂದಾಯ ಇಲಾಖೆಯ ಸರಕಾರದ ಕಾರ್ಯದರ್ಶಿ ಎನ್.ಜಯರಾಮ್ ಅವರು ಸರಕಾರದ ಗಮನಕ್ಕೆ ತಂದಿದ್ದರು.
ಈ ಮಧ್ಯೆ ರಘುಮೂರ್ತಿ ಅವರ ಪರವಾಗಿ ಕರ್ನಾಟಕ ಉಚ್ಛ ನ್ಯಾಯಾಲಯವು ನೀಡಿದ್ದ ಮಧ್ಯಂತರ ಆದೇಶ (ಅಂತಿಮ ಆದೇಶದ ಷರತ್ತುಗಳಿಗೆ ಒಳಪಟ್ಟು) ಮುಂದಿರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಘುಮೂರ್ತಿ ಅವರ ರಾಜೀನಾಮೆಗೆ ಅಂಕಿತ ಹಾಕಿದ್ದಾರೆ. ಈ ಸಂಬಂಧ "the-file.in"ಗೆ ಸರಕಾರದ ಆದೇಶವೂ ಸೇರಿದಂತೆ ಮಹತ್ವದ ದಾಖಲೆಗಳು ಲಭ್ಯವಾಗಿವೆ.
ಇಲಾಖೆ ವಿಚಾರಣೆ, ಲೋಕಾಯುಕ್ತ ಪ್ರಕರಣ, ಕ್ರಿಮಿನಲ್ ಪ್ರಕರಣಗಳ ಸಂಬಂಧ ವಿಚಾರಣೆ ಎದುರಿಸುತ್ತಿದ್ದ ಎನ್.ರಘುಮೂರ್ತಿ ಅವರು ತಹಶೀಲ್ದಾರ್ (ಗ್ರೇಡ್ -೨ ) ಹುದ್ದೆಗೆ ವೈಯಕ್ತಿಕ ಕಾರಣಗಳನ್ನು ಮುಂದಿರಿಸಿ ರಾಜೀನಾಮೆ ಸಲ್ಲಿಸಿದ್ದರು. ಅಲ್ಲದೇ ವಿಧಾನಸಭೆಗೆ ಇದೇ ಮೇ ತಿಂಗಳಿನಲ್ಲಿ ನಡೆಯುವ ಚುನಾವಣೆಯಲ್ಲಿ ರಾಜಕೀಯ
ಪಕ್ಷವೊಂದರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು.
ಗಂಭೀರ ಸ್ವರೂಪದ ಆರೋಪಗಳ ಸಂಬಂಧ ವಿಚಾರಣೆ ಎದುರಿಸುತ್ತಿರುವ ರಘುಮೂರ್ತಿ ಅವರ ರಾಜೀನಾಮೆ ಅಂಗೀ ಕರಿಸಲು ನಿಯಮಾವ ಳಿಗಳಲ್ಲಿ ಅವಕಾಶಗಳೇ ಇಲ್ಲ. ‘ಸದರಿ ಅಧಿಕಾರಿ ವಿರುದ್ಧ ಗಂಭೀರ ಸ್ವರೂಪದ ಆರೋಪಗಳಿದ್ದು ವಿಚಾರಣೆ ಹಂತದಲ್ಲಿರುತ್ತವೆ. ಒಂದು ವೇಳೆ ಆರೋಪ ಸಾಬೀತಾದಲ್ಲಿ ಅವರನ್ನು ಸೇವೆಯಿಂದ ತೆಗೆದು ಹಾಕುವ ಅಥವಾ ವಜಾ ಮಾಡುವ, ದಂಡನೆ ವಿಧಿಸುವ ಸಂಭವವಿದೆ’ ಎಂದು ಕಂದಾಯ ಇಲಾಖೆಯ ಸರಕಾರದ ಕಾರ್ಯದರ್ಶಿ ಎನ್.ಜಯರಾಮ್ ಅವರು ಟಿಪ್ಪಣಿಯಲ್ಲಿ ಸ್ಪಷ್ಟ ಅಭಿಪ್ರಾಯ ದಾಖಲಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಅಲ್ಲದೇ ಇಲಾಖೆ ವಿಚಾರಣೆ, ಲೋಕಾಯುಕ್ತ ಪ್ರಕರಣಗಳು ಬಾಕಿ ಇದ್ದಲ್ಲಿ ೧೯೯೦ರ ಎ.೩ರಂದು ಇಲಾಖೆಯು ಹೊರಡಿಸಿದ್ದ ಆದೇಶದಂತೆ ರಘುಮೂರ್ತಿ ಅವರ ರಾಜೀನಾಮೆಯನ್ನು ಅಂಗೀಕರಿಸಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಅಭಿಪ್ರಾಯ ನೀಡಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
‘ರಘುಮೂರ್ತಿ ಅವರ ವಿರುದ್ಧ ಈಗಾಗಲೇ ಹೂಡಿರುವ, ಪರಿಶೀಲನೆಯಲ್ಲಿರುವ ಹಾಗೂ ಹೂಡಲು ಪ್ರಸ್ತಾಪಿಸಿರುವ, ತನಿಖಾ ಹಂತದಲ್ಲಿರುವ ಇಲಾಖೆ ವಿಚಾರಣೆ ಪ್ರಕರಣಗಳು, ಜಂಟಿ ಇಲಾಖೆ ವಿಚಾರಣೆ ಪ್ರಕರಣಗಳು, ಲೋಕಾಯುಕ್ತ ಪ್ರಕರಣಗಳು, ಸಿವಿಲ್, ಕ್ರಿಮಿನಲ್, ನ್ಯಾಯಾಲಯ ಮೊಕದ್ದಮೆ ಪ್ರಕರಣಗಳನ್ನು ನಿಯಮಾನುಸಾರ ಮುಂದುವರಿಸುವ ಹಾಗೂ ಭವಿಷ್ಯದಲ್ಲಿಯೂ ಇವರ ವಿರುದ್ಧ ಕಂದಾಯ ಇಲಾಖೆ ಒಳಗೊಂಡಂತೆ ಇನ್ನಿತರ ಯಾವುದೇ ಇಲಾಖೆಯಲ್ಲಿ ಉದ್ಭವವಾಗಬಹುದಾದ ಶಿಸ್ತು ಕ್ರಮ ಪ್ರಕರಣಗಳು,, ಸಿವಿಲ್, ಕ್ರಿಮಿನಲ್, ನ್ಯಾಯಾಲಯದ ಮೊಕದ್ದಮೆ, ಪ್ರಕರಣಗಳನ್ನು ಹೂಡುವ ಸಂಭವವಿದ್ದಲ್ಲಿ ನಿಯಮಾನುಸಾರ ಹೂಡುವ ಷರತ್ತಿಗೆ ಒಳಪಟ್ಟಂತೆ ಇವರ ರಾಜೀನಾಮೆಯನ್ನು ಅಂಗೀಕರಿಸಿದೆ,’ ಎಂದು ಆದೇಶದಲ್ಲಿ ವಿವರಿಸಿದೆ.
ಈ ಆದೇಶ ಹೊರಡಿಸುವ ಸಂಬಂಧ ಕಡತಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂಕಿತ ಹಾಕಿದ್ದಾರೆ.