ಮಾನವೀಯ ಸಮಾನತೆಯ ಸಂದೇಶ ಸಾರುವ ಈದ್ ಅಲ್ ಫಿತ್ರ್ ಸರ್ವ ಜನರಿಗೂ ಸಂತೋಷ, ಸಮೃದ್ಧಿ ತರಲಿ: ಡಾ.ಎಸ್.ಎಮ್. ರಶೀದ್ ಹಾಜಿ
ಬಿ.ಸಿ.ಸಿ.ಐ ಅಧ್ಯಕ್ಷರಿಂದ ಈದ್ ಸಂದೇಶ
ಮಂಗಳೂರು, ಮೇ 21: ಇಸ್ಲಾಮಿನಲ್ಲಿ ಆಚರಿಸಲ್ಪಡುವ ಎರಡು ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ, ಈದ್ ಉಲ್ ಫಿತರ್ ಹಬ್ಬವು ಪವಿತ್ರ ರಂಝಾನ್ ಮಾಸದ ಒಂದು ತಿಂಗಳ ಉಪವಾಸದ ನಂತರ ಶವ್ವಾಲ್ ತಿಂಗಳ ಚಂದ್ರದರ್ಶನದೊಂದಿಗೆ ಬರುವ ಹಬ್ಬವಾಗಿದೆ. ಮಾನವೀಯ ಸಮಾನತೆಯ ಸಂದೇಶ ಸಾರುವ ಈದ್ ಅಲ್ ಫಿತ್ರ್ ಸರ್ವ ಜನರಿಗೂ ಸಂತೋಷ, ಸಮೃದ್ಧಿ ತರಲಿ ಎಂದು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ (ಬಿ.ಸಿ.ಸಿ.ಐ.) ಇದರ ಅಧ್ಯಕ್ಷರಾದ ಡಾ. ಎಸ್. ಎಮ್. ರಶೀದ್ ಹಾಜಿಯವರು ಸಂದೇಶ ನೀಡಿದ್ದಾರೆ.
ಈದ್ ಉಲ್ ಫಿತರ್ ಹಬ್ಬದ ವಿಶೇಷತೆ ಎಂದರೆ, ಇಲ್ಲಿ ವಿಶ್ವಾಸಿಗಳು ತಮ್ಮ ಸೃಷ್ಟಿಕರ್ತನಿಗೆ ನಿಕಟರಾಗುವ ಆಧ್ಯಾತ್ಮಿಕ ತರಬೇತಿಯನ್ನು ಒಂದು ತಿಂಗಳ ಕಠಿಣ ವೃತಾನುಷ್ಟಾನದ ಮೂಲಕ ಪಡೆಯುತ್ತಾರೆ. ತನ್ಮೂಲಕ ದೇವಭಯವನ್ನು ವೃದ್ಧಿಸಿ, ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ನಾವು ಬದುಕಲು ಬೇಕಾದ ಪ್ರೇರಣೆಯನ್ನು ಇದು ನೀಡುತ್ತದೆ.
ಈ ಈದ್ ಮಾನವೀಯ ಸಮಾನತೆಯ ಸಂದೇಶ ನೀಡುತ್ತಿದ್ದು ಇಲ್ಲಿ ಬಡವ, ಶ್ರೀಮಂತ ಎಂಬ ಬೇಧ ಭಾವಗಳಿಗೆ ಅವಕಾಶವಿಲ್ಲದೆ, ಸರ್ವ ಮಾನವರು ಸಮಾನರು ಎಂಬ ಸಂದೇಶ ನೀಡುತ್ತದೆ. ಆದ್ದರಿಂದಲೇ ಈದ್ ಸಂಭ್ರಮಿಸುವ ಯಾರಿಗೂ ಅವರ ಬಡತನ ತೊಡಕಾಗಬಾರದು ಎಂಬ ಉದ್ದೇಶದಿಂದಲೇ, ಇಲ್ಲಿ ಈದ್ ದಿನಕ್ಕೆ ಬೇಕಾದ ಆಹಾರ ಸಾಮಗ್ರಿಗಳನ್ನು ಪ್ರತಿಯೊಬ್ಬ ಉಳ್ಳವನು 'ಫಿತರ್ ಝಕಾತ್' ಎಂಬ ಹೆಸರಿನ ದಾನವನ್ನು ಸಾಮೂಹಿಕವಾಗಿ ಎಲ್ಲಾ ಬಡವರಿಗೂ ವಿತರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಈ ರೀತಿಯಲ್ಲಿ ಮಾನವೀಯ ಮೌಲ್ಯತೆಯ ಸಮಾನತೆಯನ್ನು ಸಾರುವ ಈದ್ ಅಲ್ ಫಿತ್ರ್ ಸರ್ವ ಜನರಿಗೂ ಸುಖ, ಸಂತೋಷ, ಸಮೃದ್ಧಿ ತರಲಿ ಮತ್ತು ಸಮಾಜದಲ್ಲಿ ಶಾಂತಿ ಸಾಮರಸ್ಯ ನೆಲೆಸಿ, ಸಮುದಾಯಗಳ ನಡುವೆ ಅನ್ಯೋನ್ಯತೆ ವೃದ್ಧಿಸಲು ನಾಂದಿಯಾಗಲಿಯೆಂದು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ (ಬಿ.ಸಿ.ಸಿ.ಐ.) ಇದರ ಅಧ್ಯಕ್ಷರಾದ ಡಾ. ಎಸ್. ಎಮ್. ರಶೀದ್ ಹಾಜಿಯವರು ತಮ್ಮ ಈದ್ ಸಂದೇಶದಲ್ಲಿ ತಿಳಿಸಿದ್ದಾರೆ.