ಎ.27ರಂದು ರಾಹುಲ್ ಗಾಂಧಿ ಉಡುಪಿಗೆ: ಮೊಗವೀರರೊಂದಿಗೆ ಸಂವಾದ
ಉಡುಪಿ, ಎ.21: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಎ.27ರಂದು ಉಡುಪಿ ಜಿಲ್ಲೆಗೆ ಆಗಮಿಸಲಿದ್ದು, ಅಂದು ಅವರು ಉಚ್ಚಿಲದಲ್ಲಿ ಮೀನುಗಾರ ರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಿರುವರು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.
ಉಡುಪಿ ಕಾಂಗ್ರೆಸ್ ಭವನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧ 40 ಮಂದಿ ಸ್ಟಾರ್ ಕ್ಯಾಂಪೆನ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಹಲವು ಮಂದಿ ನಾಯಕರು ಜಿಲ್ಲೆಗೆ ಆಗಮಿಸಿ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪರವಾದ ಹವಾ ಇದ್ದು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ಅಚ್ಚರಿ ಫಲಿತಾಂಶ ಹೊರಬೀಳಲಿದೆ ಎಂದರು.
ಎ.23ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೈಂದೂರಿಗೆ ಆಗಮಿಸಿ, ಮಧ್ಯಾಹ್ನ 3.30ಕ್ಕೆ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿರುವರು. ನಂತರ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಅವರು ಎ.24ರಂದು ಮಧ್ಯಾಹ್ನ ಉಡುಪಿಗೆ ಆಗಮಿಸಿ ಮಧ್ಯಾಹ್ನ 3ಗಂಟೆಯಿಂದ ಸಂಜೆ 5ಗಂಟೆವರೆಗೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದಿಂದ ಅಜ್ಜರಕಾಡಿನ ಹುತಾತ್ಮ ಚೌಕದವರೆಗೆ ರೋಡ್ ಶೋ ನಡೆಸಲಿದ್ದಾರೆ. ಇದರಲ್ಲಿ 5-10ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ಮಾಹಿತಿ ನೀಡಿದರು.
ಅದೇ ರೀತಿ ಈ ತಿಂಗಳ ಕೊನೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಉಡುಪಿ ಜಿಲ್ಲೆಗೆ ಆಗಮಿಸಲಿದ್ದಾರೆ. ಕೇರಳ ಸಂಸದ ಟಿ.ಎನ್.ಪ್ರತಾಪನ್ ಜಿಲ್ಲೆಯ ಕರಾವಳಿಯ ನಾಲ್ಕು ಕ್ಷೇತ್ರಗಳಲ್ಲಿ ಮೀನುಗಾರರ ಸಂಘಟನೆಯೊಂದಿಗೆ ಪ್ರಚಾರ ಕಾರ್ಯ ಮಾಡಲಿದ್ದಾರೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಜಿಲ್ಲೆಗೆ ಆಗಮಿಸಿ ಪ್ರಚಾರ ಕಾರ್ಯ ನಡೆಸಲಿದ್ದಾರೆ ಎಂದರು.
ಉಡುಪಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ನಿರುದ್ಯೋಗ ಸಮಸ್ಯೆಯಿಂದ ತತ್ತರಿಸಿರುವ ಯುವ ಸಮುದಾಯ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಒಲವು ತೋರಿಸುತ್ತಿದ್ದಾರೆ. ಆದುದರಿಂದ ಈ ಬಾರಿ ಕಾಂಗ್ರೆಸ್ ಪಕ್ಷದ ಐದು ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಪೂರ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಭಾಸ್ಕರ್ ರಾವ್ ಕಿದಿಯೂರು, ರಮೇಶ್ ಕಾಂಚನ್, ದಿನಕರ ಹೇರೂರು, ಬಿ.ನರಸಿಂಹ ಮೂರ್ತಿ, ಪ್ರಖ್ಯಾತ್ ಶೆಟ್ಟಿ, ಕುಶಲ ಶೆಟ್ಟಿ, ಅಮೃತ್ ಶೆಣೈ, ಮಹಬಲ ಕುಂದರ್, ಹರೀಶ್ ಶೆಟ್ಟಿ ಪಾಂಗಾಳ, ಹರೀಶ್ ಕಿಣಿ ಉಪಸ್ಥಿತರಿದ್ದರು.