ಎಐ ಅಥವಾ ಸಿಎಸ್ ಇಂಜಿನಿಯರ್ ಆಗುವ ಬಯಕೆ: ಸ್ಮಯಾ ಸದಾನಂದ
ಉಡುಪಿ, ಎ.21: ವಿಜ್ಞಾನ ವಿಭಾಗದಲ್ಲಿ 600ರಲ್ಲಿ 594 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೂರನೇ ರ‍್ಯಾಂಕ್
ಹಂಚಿಕೊಂಡಿರುವ ಕಾರ್ಕಳ ತಾಲೂಕು ಕುಕ್ಕಂದೂರು ಗಣಿತನಗರದ ಜ್ಞಾನಸುಧಾ ಪಿಯು ಕಾಲೇಜಿನ ಸ್ಮಯಾ ಸದಾನಂದ ಮಾಬೆನ್ ಬೆಂಗಳೂರಿನ ಯಾವುದಾದರೂ ಪ್ರತಿಷ್ಠಿತ ಇಂಜಿನಿಯರಿಂಗ್ (ಆರ್‌ವಿ, ಪೆಸೆಟ್, ರಾಮಯ್ಯ) ಕಾಲೇಜಿನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಅಥವಾ ಕಂಪ್ಯೂಟರ್ ಇಂಜಿನಿಯರಿಂಗ್ (ಸಿಎಸ್)ನಲ್ಲಿ ಓದು ಮುಂದುವರಿಸುವ ಬಯಕೆಯನ್ನು ಹೊಂದಿದ್ದಾರೆ.
ಫಲಿತಾಂಶದ ಕುರಿತಂತೆ ಹರ್ಷಚಿತ್ತರಾಗಿದ್ದ ಸ್ಮಯಾ, ಆದರೆ ನಾನು ರಾಜ್ಯಕ್ಕೆ ಮೂರನೇ ರ‍್ಯಾಂಕ್ ಮಾತ್ರ ನಿರೀಕ್ಷಿಸಿರಲಿಲ್ಲ ಎನ್ನುತ್ತಾರೆ. 580-585 ಅಂಕಗಳ ನಿರೀಕ್ಷೆ ಇದ್ದ ಅವರಿಗೆ ಒಟ್ಟು 594 ಅಂಕಗಳು ಬಂದಿವೆ. ಭೌತಶಾಸ್ತ್ರದಲ್ಲಿ 99, ರಸಾಯನ ಶಾಸ್ತ್ರದಲ್ಲಿ 99, ಗಣಿತದಲ್ಲಿ 99, ಕಂಪ್ಯೂಟರ್‌ನಲ್ಲಿ 100, ಇಂಗ್ಲೀಷ್‌ನಲ್ಲಿ 98 ಹಾಗೂ ಕನ್ನಡದಲ್ಲಿ 99 ಅಂಕಗಳನ್ನು ಅವರು ಪಡೆದಿದ್ದಾರೆ.
ಎಸೆಸೆಲ್ಸಿಯಲ್ಲಿ ಶೇ.97 ಅಂಕ ಪಡೆದಿದ್ದ ಸ್ಮಯಾ, ಇದೀಗ ಸಿಇಟಿಯ ಫಲಿತಾಂಶವನ್ನು ಎದುರು ನೋಡುತಿದ್ದಾರೆ. ತಾವು ಪಟ್ಟ ಪರಿಶ್ರಮ, ಹೆತ್ತವರ ಬೆಂಬಲ, ಪ್ರೋತ್ಸಾಹ, ಉಪನ್ಯಾಸಕರ ಉತ್ತೇಜನದಿಂದ ತಾವು ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದವರು ಹೇಳುತ್ತಾರೆ.
ಜ್ಞಾನಸುಧಾ ಕಾಲೇಜಿನಲ್ಲಿ ತಮಗೆ ದೊರೆಯುತಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಯಲ್ಲಷ್ಟೇ ತಾವು ಪಾಲ್ಗೊಂಡಿದ್ದು, ಉಳಿದಂತೆ ಯಾವುದೇ ಕೋಚಿಂಗ್ ಪಡೆದಿಲ್ಲ ಎಂದವರು ತಿಳಿಸಿದರು. ತನಗೆ ಓದಲು ಯಾವುದೇ ನಿಗದಿತ ಸಮಯವೆಂಬುದಿರಲಿಲ್ಲ. ಓದುವ ಮನಸ್ಸು ಬಂದಾಗಲೆಲ್ಲಾ ತಾವು ಪಟ್ಟು ಹಿಡಿದು ಓದುತ್ತಿದುದಾಗಿ ಅವರು ಹೇಳಿದರು.
ಇಂಗ್ಲೀಷ್ ಕಾದಂಬರಿ ಓದುವ ಹವ್ಯಾಸ ತನಗಿದೆ. ಕನ್ನಡ ಕಾದಂಬರಿ ಗಳನ್ನು ಓದುವ ಮನಸ್ಸಿದ್ದರೂ, ಯಾವುದನ್ನು ಓದಬೇಕು ಎಂಬುದೇ ನನಗೆ ಗೊತ್ತಾಗುತ್ತಿಲ್ಲ. ಇನ್ನು ಭರತನಾಟ್ಯ ಜೂನಿಯರ್ ಪಾಸಾಗಿದ್ದೇನೆ. ಒಂದು ವರ್ಷ ಯಕ್ಷಗಾನದಲ್ಲೂ ತರಬೇತಿ ಪಡೆದಿದ್ದೇನೆ ಎಂದು ಸ್ಮಯಾ ನುಡಿದರು.
ಸ್ಮಯಾರ ತಂದೆ ಸದಾನಂದ ಶೀನ ಮಾಬೆನ್ ಕಾರ್ಕಳದಲ್ಲಿ ಉದ್ಯಮಿ. ತಾಯಿ ಮಮತಾ ಕುಮಾರಿ. ಸ್ಮಯಾರ ತಮ್ಮ ಕಾರ್ಕಳ ಕ್ರೈಸ್ಟ್ ಕಿಂಗ್‌ನಲ್ಲಿ ಎಂಟನೇ ತರಗತಿ ಓದುತಿದ್ದಾನೆ.