×
Ad

ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿಯಿಂದ ಎ.23ಕ್ಕೆ ಡಾ.ಅಂಬೇಡ್ಕರ್ ಜನ್ಮದಿನದ ಪ್ರಯುಕ್ತ ‘ಭಾರತ ಭಾಗ್ಯವಿಧಾತ’

Update: 2023-04-21 20:33 IST

ಉಡುಪಿ, ಎ.21: ಉಡುಪಿ ಜಿಲ್ಲಾ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿಯ ವತಿಯಿಂದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೇ ಜನ್ಮದಿನಾಚರಣೆಯ ಪ್ರಯುಕ್ತ ಇದೇ ಎ.23 ರವಿವಾರ ಉಡುಪಿಯಲ್ಲಿ ‘ಭಾರತ ಭಾಗ್ಯವಿಧಾತ’ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಷಿತ ಸಮುದಾಯಗಳ ಸಾಂಸ್ಕೃತಿಕ ಮಹಾಜಾಥಾ ಮತ್ತು ಶೈಕ್ಷಣಿಕ ಪ್ರೋತ್ಸಾಹದ ಈ ವೈವಿಧ್ಯಮಯ ಕಾರ್ಯಕ್ರಮ ಬೆಳಗ್ಗೆ 11:00ಕ್ಕೆ ಪ್ರಾರಂಭ ಗೊಳ್ಳಲಿದೆ ಎಂದರು.

ಕಾರ್ಯಕ್ರಮವು ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯ್ದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡಲಾಗುತ್ತದೆ. ದಿನವಿಡೀ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತದಿಂದ ಬರುವ ಸುಮಾರು ಐದು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಬೆಳಗ್ಗೆ 11:00 ಗಂಟೆಗೆ ನಗರದ ಬೋರ್ಡ್ ಹೈಸ್ಕೂಲ್ ಆವರಣದಿಂದ  ಸಾಂಸ್ಕೃತಿಕ ತಂಡಗಳು, ಕೇರಳ ಚಂಡೆ, ಡೊಳ್ಳು, ಕೀಲುಕುದುರೆ ಹಾಗೂ ವಿವಿಧ ವೇಷಗಳೊಂದಿಗೆ ಮೆರವಣಿಗೆ ಪ್ರಾರಂಭಗೊಳ್ಳಲಿದ್ದು, ಸಭಾಭವನ ದಲ್ಲಿ ಮುಕ್ತಾಯಗೊಳ್ಳಲಿದೆ. ಅಪರಾಹ್ನ 2:00ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಶೈಕ್ಷಣಿಕ ಮತ್ತು ಸಾಮಾಜಿಕ ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ವಿತರಣೆ ನಡೆಯಲಿದೆ ಎಂದು ಗಿಳಿಯಾರು ನುಡಿದರು.

ಉರಿಲಿಂಗ ಪೆದ್ದಿಮಠದ ಸ್ವಾಮೀ ಉದ್ಘಾಟನೆ: ಕಾರ್ಯಕ್ರಮವನ್ನು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಬೀದರ್‌ನ ಅಣದೂರು ಧಮ್ಯ ದರ್ಶನ ಭೂಮಿಯ ಬೌದ್ಧಬಿಕ್ಕು ಭಂತೇ ಪರಜ್ಯೋತಿ ಈ ಸಂದರ್ಭದಲ್ಲಿ ಉಪಸ್ಥಿತರಿರುವರು.

ಮಂಜುನಾಥ ಗಿಳಿಯಾರು ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ  ಬೆಂಗಳೂರಿನ ಕರ್ನಾಟಕ ಜನಶಕ್ತಿಯ ಮಲ್ಲಿಗೆ ಸಿರಿಮನೆ, ಮೈಸೂರು ಮುಕ್ತ ವಿವಿಯ ಡಾ.ಕೆ.ಪಿ.ಮಹಾಲಿಂಗು, ಉಡುಪಿ ಧರ್ಮಗುರು ವಂ.ವಿಲಿಯಂ ಮಾರ್ಟಿಸ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸಿನ್ ಮಲ್ಪೆ, ಜಿಲ್ಲಾ ಕ್ರೈಸ್ತ ಒಕ್ಕೂಟದ ಪ್ರಶಾಂತ್ ಜತ್ತನ್ನ, ಜನಪರ ಹೋರಾಟಗಾರ ನಾರಾಯಣ ಮಣೂರು, ಜಿಲ್ಲಾ ಭಾರತೀಯ ಬೌದ್ಧಮಹಾಸಭಾದ ಅಧ್ಯಕ್ಷ ಜಿ.ರಾಘವೇಂದ್ರ, ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ರಾಜೇಂದ್ರ ಹಿರಿಯಡ್ಕ, ಬಿಲ್ಲವ ಯುವವಾಹಿನಿ ಕಟಪಾಡಿ ಘಟಕದ ಅಧ್ಯಕ್ಷ ಸುನಿಲ್ ಡಿ.ಬಂಗೇರ, ಮಣಿಪಾಲದ ಚಿಂತಕ ಪ್ರೊ.ಫಣಿರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಉಡುಪಿ ಜಿಲ್ಲಾ ಐಕ್ಯ ಹೋರಾಟ ಸಮಿತಿಯ ಜಯನ್ ಮಲ್ಪೆ, ಸುಂದರ ಮಾಸ್ತರ್, ಶ್ಯಾಮರಾಜ್ ಬಿರ್ತಿ, ಶೇಖರ ಹೆಜಮಾಡಿ, ವಾಸುದೇವ ಮುದೂರು, ಹರೀಶ್ ಸಾಲ್ಯಾನ್, ವಿಶ್ವನಾಥ ಬೆಳ್ಳಂಪಳ್ಳಿ, ಪರಮೇಶ್ವರ ಉಪ್ಪೂರು, ರಮೇಶ್ ಕೋಟ್ಯಾನ್ ಹಾಗೂ ಆನಂದ ಬ್ರಹ್ಮಾವರ ಉಪಸ್ಥಿತರಿರುವರು.

7 ಮಂದಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ವಿಠ್ಠಲದಾಸ ಬನ್ನಂಜೆ, ಪಿಎಚ್‌ಡಿ ಪದವಿ ಪಡೆದ ಮೊದಲ ಕೊರಗ ಮಹಿಳೆ ಡಾ.ಸಬಿತಾ ಗುಂಡ್ಮಿ, ರಾಷ್ಟ್ರಮಟ್ಟದ ಕ್ರೀಡಾಪಟು ಅನುರಾಗ್ ಜಿ., ಮಲ್ಪೆಯ ಸರಸ್ವತಿ ಯುವಕ ಮಂಡಲ, ಸಮಾಜ ಸೇವಕ ರವಿ ಕಟಪಾಡಿ, ಈಶ್ವರ ಮಲ್ಪೆ ಹಾಗೂ ಲಿಕೋ ಬ್ಯಾಂಕ್ ಅಧ್ಯಕ್ಷ ಕೃಷ್ಣ ಅವರನ್ನು ಸನ್ಮಾನಿಸಲಾಗುವುದು ಎಂದು ಮಂಜುನಾಥ ಗಿಳಿಯಾರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕರಾದ ಸುಂದರ ಮಾಸ್ತರ್, ಶ್ಯಾಮರಾಜ ಬಿರ್ತಿ, ವಾಸುದೇವ ಮುದೂರು, ಹರೀಶ್ ಸಾಲ್ಯಾನ್, ವಿಶ್ವನಾಥ ಬೆಳ್ಳಂಪಳ್ಳಿ, ಪರಮೇಶ್ವರ ಉಪ್ಪೂರು ಹಾಗೂ ಮಂಜುನಾಥ ಬಾಳ್ಕುದ್ರು ಉಪಸ್ಥಿತರಿದ್ದರು.

Similar News