×
Ad

ಅಡಗಿರುವ ಭಯೋತ್ಪಾದಕರಿಗಾಗಿ ಸೇನೆಯಿಂದ ತೀವ್ರ ಶೋಧ ಕಾರ್ಯಾಚರಣೆ, ಸಂಚಾರ ಸ್ಥಗಿತ

ಪೂಂಛ್ ನಲ್ಲಿ ಸೇನಾವಾಹನದ ಮೇಲೆ ದಾಳಿ ಪ್ರಕರಣ

Update: 2023-04-21 22:27 IST

ಹೊಸದಿಲ್ಲಿ,ಎ.21: ಜಮ್ಮು-ಕಾಶ್ಮೀರದ ಮೆಂದರ್ನ ಭಾಟಾ ಧುರಿಯಾನ್ನಲ್ಲಿ ಗುರುವಾರ ಸೇನಾ ವಾಹನದ ಮೇಲೆ ಹೊಂಚುದಾಳಿಯನ್ನು ನಡೆಸಿದ್ದ ಉಗ್ರರಿಗಾಗಿ ಭದ್ರತಾ ಪಡೆಗಳು ಬೃಹತ್ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಈ ದಾಳಿಯಲ್ಲಿ ಐವರು ಯೋಧರು ಕೊಲ್ಲಲ್ಟಟ್ಟಿದ್ದು, ಓರ್ವ ಯೋಧ ಗಂಭೀರವಾಗಿ ಗಾಯಗೊಂಡಿದ್ದ.

ಶೋಧ ಕಾರ್ಯಾರಣೆ ಸುಗಮವಾಗಿ ನಡೆಯವಂತಾಗಲು ಭಿಂಭೇರ್ ಗಲಿಯಿಂದ ಸುರಾನಕೋಟ್ವರೆಗೆ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳುವಂತೆ ವಾಹನಗಳ ಚಾಲಕರಿಗೆ ಸೂಚಿಸಲಾಗಿದೆ.

ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿರುವ ಭಾಟಾ ಧುರಿಯಾನ್ ಸೇರಿದಂತೆ ಹಲವಾರು ಗ್ರಾಮಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಈ ನಡುವೆ ಗುರುವಾರ ಉಗ್ರರ ದಾಳಿಯಲ್ಲಿ ಮೃತಪಟ್ಟ ಯೋಧರನ್ನು ರಾಷ್ಟ್ರೀಯ ರೈಫಲ್ಸ್ ನ ಹವಾಲ್ದಾರ್ ಮಂದೀಪ ಸಿಂಗ್, ಲಾನ್ಸ್ ನಾಯ್ಕ್ ಕುಲ್ವಂತ ಸಿಂಗ್,ಸಿಪಾಯಿ ಹರಕೃಷನ್ ಸಿಂಗ್,ಸಿಪಾಯಿ ಸೇವಕ ಸಿಂಗ್ ಮತ್ತು ಲಾನ್ಸ್ನಾಯ್ಕ್ ದೇಬಾಶಿಷ್ ಬಸ್ವಾಲ್ ಎಂದು ಗುರುತಿಸಲಾಗಿದೆ. ಶುಕ್ರವಾರ ಕಾನೂನು ಔಪಚಾರಿಕತೆಗಳ ಬಳಿಕ ಅವರ ಪಾರ್ಥಿವ ಶರೀರಗಳನ್ನು ಹುಟ್ಟೂರುಗಳಿಗೆ ರವಾನಿಸಲಾಗಿದೆ.

ದಾಳಿಯ ಸಂದರ್ಭದಲ್ಲಿ ಇಂಧನ ಟ್ಯಾಂಕ್ಗೆ ಗುಂಡು ಹಾರಿಸಿದ ಪರಿಣಾಮ ಸೇನೆಯ ಟ್ರಕ್ ಗೆ ಬೆಂಕಿ ಹತ್ತಿಕೊಂಡಿತ್ತು. ಉಗ್ರರು ಟ್ರಕ್ ನ ಮೇಲೆ ಗ್ರನೇಡ್ ಗಳನ್ನು ಎಸೆದಿದ್ದರು ಎಂದು ಸೇನೆಯು ತಿಳಿಸಿದೆ. ಮರಗಳ ಹಿಂದೆ ಅಡಗಿದ್ದ ಉಗ್ರರು ಪ್ರತಿಕೂಲ ಹವಾಮಾನದ ಲಾಭ ಪಡೆದು ಈ ವ್ಯವಸ್ಥಿತ ದಾಳಿಯನ್ನು ನಡೆಸಿದ್ದರು. ನಿರಂತರ ಗುಂಡು ಹಾರಾಟ, ಗ್ರೆನೇಡ್ ಗಳ ಎಸೆತ ಮತ್ತು ಟ್ರಕ್ ಗೆ ಹತ್ತಿಕೊಂಡಿದ್ದ ಬೆಂಕಿಯ ಕೆನ್ನಾಲಿಗೆಗಳಿಂದಾಗಿ ಯೋಧರಿಗೆ ಪ್ರತಿದಾಳಿ ನಡೆಸಲೂ ಸಾಧ್ಯವಾಗಿರಲಿಲ್ಲ.

ಸ್ಫೋಟದ ಶಬ್ದ ಕೇಳಿ ಧಾವಿಸಿ ಬಂದಿದ್ದ ಸ್ಥಳೀಯರು ಬೆಂಕಿಯನ್ನು ಆರಿಸುವ ಕಾರ್ಯದಲ್ಲಿ ಭದ್ರತಾ ಪಡೆಗಳಿಗೆ ನೆರವಾಗಿದ್ದರು.

Similar News