×
Ad

"ನ್ಯಾಯ ಸಿಗೋವರೆಗೂ ಇಲ್ಲೇ ಊಟ, ಇಲ್ಲೇ ನಿದ್ದೆ..": ದಿಲ್ಲಿಯಲ್ಲಿ ಮತ್ತೆ ಧರಣಿ ಕೂತ ಕುಸ್ತಿಪಟುಗಳು

Update: 2023-04-23 17:38 IST

ಹೊಸದಿಲ್ಲಿ: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಶೋಷಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದ ಭಾರತೀಯ ಕುಸ್ತಿಪಟುಗಳು ಮತ್ತೆ ದಿಲ್ಲಿಯ ಜಂತರ್‌ ಮಂತರ್‌ ನಲ್ಲಿ ಧರಣಿಗೆ ಕುಳಿತಿದ್ದಾರೆ. ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಏಳು ಮಹಿಳಾ ಕುಸ್ತಿಪಟುಗಳು ಸೆಂಟ್ರಲ್ ದೆಹಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಎಫ್‌ಐಆರ್‌ ಇನ್ನಷ್ಟೇ ದಾಖಲಿಸಬೇಕಾಗಿದೆ.  

ಈ ವಿಷಯದ ಬಗ್ಗೆ ಸರ್ಕಾರದ ಸಮಿತಿಯ ವರದಿಯನ್ನು ಇನ್ನೂ ಸಾರ್ವಜನಿಕಗೊಳಿಸದಿರುವುದು ಹತಾಶೆ ತಂದಿದೆ ಎಂದು ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಹೇಳಿದ್ದಾರೆ. 

"ಮಹಿಳಾ ಕುಸ್ತಿಪಟುಗಳ ಹೇಳಿಕೆಯನ್ನು ದಾಖಲಿಸಿರುವ ವರದಿಯು ಸಾರ್ವಜನಿಕವಾಗಬೇಕೆಂದು ನಾವು ಬಯಸುತ್ತೇವೆ. ಇದು ಸೂಕ್ಷ್ಮ ವಿಷಯವಾಗಿದೆ, ದೂರುದಾರರಲ್ಲಿ ಒಬ್ಬರು ಅಪ್ರಾಪ್ತ ಬಾಲಕಿಯೂ ಸೇರಿದ್ದಾರೆ" ಎಂದು ಅವರು ಹೇಳಿದ್ದು, ದೂರುದಾರರ ಹೆಸರುಗಳನ್ನು ಸೋರಿಕೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

"ಬ್ರಿಜ್ ಭೂಷಣ್ ಅವರನ್ನು ಬಂಧಿಸುವವರೆಗೂ ನಾವು ಇಲ್ಲಿಂದ ಹೋಗುವುದಿಲ್ಲ" ಎಂದು ಅಂತರಾಷ್ಟ್ರೀಯ ಕುಸ್ತಿಪಟು ಬಜರಂಗ್ ಪುನಿಯಾ ಹೇಳಿದ್ದಾರೆ. 

ಪದೇ ಪದೇ ಪ್ರಯತ್ನಿಸಿದರೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ವಿನೇಶ್ ಫೋಗಟ್ ಹೇಳಿದ್ದಾರೆ. 

"ನಮಗೆ ನ್ಯಾಯ ಸಿಗುವವರೆಗೆ ನಾವು ಇಲ್ಲೇ ಮಲಗುತ್ತೇವೆ ಮತ್ತು ಇಲ್ಲೇ ಊಟ ಮಾಡುತ್ತೇವೆ. ನಾವು ಅವರನ್ನು (ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮತ್ತು ಇತರ ಸಂಬಂಧಿತ ಪ್ರಾಧಿಕಾರ) ಸಂಪರ್ಕಿಸಲು ಮೂರು ತಿಂಗಳಿನಿಂದ ಪ್ರಯತ್ನಿಸುತ್ತಿದ್ದೇವೆ. ಸಮಿತಿಯ ಸದಸ್ಯರು ನಮಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಕ್ರೀಡಾ ಸಚಿವಾಲಯವೂ ಹೇಳಿದೆ. ನಾವು ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದೇವೆ ಮತ್ತು ಇದಕ್ಕಾಗಿ ನಮ್ಮ ವೃತ್ತಿಜೀವನವನ್ನು ಪಣಕ್ಕಿಟ್ಟಿದ್ದೇವೆ, ”  ಅವರು ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥರು ಮತ್ತು ಇತರ ತರಬೇತುದಾರರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಕುಸ್ತಿಪಟುಗಳು ನಡೆಸಿದ್ದ ಧರಣಿಯು ದೇಶದ ಗಮನ ಸೆಳೆದಿತ್ತು. ಧರಣಿ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಕ್ರೀಡಾ ಸಚಿವಾಲಯವು ಜನವರಿ 23 ರಂದು ಬಾಕ್ಸರ್ ಎಂಸಿ ಮೇರಿ ಕೋಮ್ ನೇತೃತ್ವದ ಐವರು ಸದಸ್ಯರ ಉಸ್ತುವಾರಿ ಸಮಿತಿಯನ್ನು ರಚಿಸಿ, ವರದಿಯನ್ನು ಒಂದು ತಿಂಗಳಲ್ಲಿ ಸಲ್ಲಿಸುವಂತೆ ಕೇಳಿತ್ತು. ಬಳಿಕ ಪ್ರತಿಭಟನಾನಿರತ ಕುಸ್ತಿಪಟುಗಳ ಒತ್ತಾಯದ ಮೇರೆಗೆ ಅದರ ಆರನೇ ಸದಸ್ಯೆಯಾಗಿ ಬಬಿತಾ ಫೋಗಟ್ ಅವರನ್ನು ತನಿಖಾ ಸಮಿತಿಗೆ ಸೇರಿಸಿತ್ತು.

ಸಮಿತಿಯು ತನ್ನ ವರದಿಯನ್ನು ಏಪ್ರಿಲ್ ಮೊದಲ ವಾರದಲ್ಲಿ ಸಲ್ಲಿಸಿದೆ, ಆದರೆ ಸಚಿವಾಲಯವು ತನ್ನ ವರದಿಯನ್ನು ಇನ್ನೂ ಸಾರ್ವಜನಿಕಗೊಳಿಸಿಲ್ಲ. ‌ಇದು ಕುಸ್ತಿಪಟುಗಳ ಆಕ್ರೋಶಕ್ಕೆ ಕಾರಣವಾಗಿದೆ.

Similar News