ಸಮಾಜದಲ್ಲಿ ಜಾತಿ, ಧರ್ಮಗಳ ನಡುವೆ ಧ್ವೇಷದ ಹುಳಿ ಹಿಂಡುವುದೇ ಬಿಜೆಪಿ ಸಾಧನೆ: ಇನಾಯತ್ ಅಲಿ ಆರೋಪ
► ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ ► ಬಿಜೆಪಿ ತೊರೆದು ಕಾಂಗ್ರೆಸ್ ಕೈ ಹಿಡಿದ 70ಕ್ಕೂ ಅಧಿಕ ಕಾರ್ಯಕರ್ತರು
ಸುರತ್ಕಲ್, ಎ.23: ಬಿಜೆಪಿ ನಾಯಕರು ಅಭಿವೃದ್ಧಿ ಮಾಡುವುದನ್ನು ಬಿಟ್ಟು ಸಮಾಜದಲ್ಲಿ ಜಾತಿ, ಧರ್ಮಗಳ ನಡುವೆ ಧ್ವೇಷದ ಹುಳಿ ಹಿಂಡುವ ಕೆಲಸವನ್ನಷ್ಟೇ ಮಾಡಿದ್ದಾರೆ. ಇದಷ್ಟೇ ಬಿಜೆಪಿಯ ಸಾಧನೆ ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಹೇಳಿದರು.
ಅವರು ಕಾವೂರಿನ ಶಾಂತಿನಗರದಲ್ಲಿ ಆಯೋಜಿಸಲಾಗಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕೋವಿಡ್ ಬಳಿಕ ಬೆಲೆ ಏರಿಕೆ, ಉದ್ಯೋಗ ಇಲ್ಲದೆ ವಿದ್ಯಾವಂತರು ಕಂಗೆಟ್ಟು ಹೋಗಿದ್ದಾರೆ. ಬಿಜೆಪಿಯ ದುಷ್ಟ ಆಡಳಿತದಿಂದ ಬೇಸತ್ತಿರುವ ಜನರು ಈ ಬಾರಿ ಕಾಂಗ್ರೆಸ್ ಬೆಂಬಲಿಸಿ ಅಧಿಕಾರಕ್ಕೆ ತರಲಿದ್ದಾರೆ ಎಂದರು.
ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡೆಕೇರಿ ಮಾತನಾಡಿ, ಇನಾಯತ್ ಅಲಿ ಅವರು ಬಲಕೈಯಲ್ಲಿ ಮಾಡಿರುವ ದಾನ ಎಡಗೈಗೆ ತಿಳಿಯಬಾರದು ಎಂದು ಯೋಚಿಸುವ ವ್ಯಕ್ತಿ. ಜಾತಿ ಧರ್ಮಗಳನ್ನು ಮೀರಿ ಅದೆಷ್ಟೋ ಬಡ ಹೆಣ್ಣು ಮಕ್ಕಳ ಮದುವೆ, ಯುವಕರಿಗೆ ಉದ್ಯೋಗ, ಮನೆ ಇಲ್ಲದವರಿಗೆ ಮನೆ, ಆರ್ಥಿಕ ಸಹಾಯ ಮಾಡಿದ್ದಾರೆ. ಅದನ್ನೂ ಇಂದಿಗೂ ಅವರು ಎಲ್ಲಿಯೂ ಹೇಳಿಕೊಳ್ಳುತ್ತಿಲ್ಲ. ಆದರೆ, ಭರತ್ ಶೆಟ್ಟಿಯವರಿಗೆ ಹಿಂದೂ ಯುವಕರ ಹೆಣದ ಮೇಲೆ ರಾಜಕೀಯ ಮಾಡುವುದು ಮಾತ್ರ ಗೊತ್ತು. ಅದು ಬಿಟ್ಟು ಎಷ್ಟು ಮಂದಿ ಹಿಂದೂ ಯುವಕರಿಗೆ ಕೆಲಸ ಕೊಟ್ಟಿದ್ದಾರೆ. ಎಷ್ಟು ಜನರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ? ಎಂದು ಅವರು ಪ್ರಶ್ನಿಸಿದರು.
ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮಾತಾಡಿದರು. ವೇದಿಕೆಯಲ್ಲಿ ನೀರಜ್ ಪಾಲ್, ಪುರುಷೋತ್ತಮ ಚಿತ್ರಾಪುರ, ಮಾಜಿ ಮೇಯರ್ ಕವಿತಾ ಸನಿಲ್, ಗಿರೀಶ್ ಆಳ್ವ, ದೀಪಕ್ ಪೂಜಾರಿ, ಮುಹಮ್ಮದ್ ಕುಂಜತ್ತಬೈಲ್, ಉತ್ತಮ್ ಆಳ್ವ, ರಾಘವೇಂದ್ರ ರಾವ್, ಸಾರಿಕಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಕಾವೂರಿನ ಶಾಂತಿನಗರದಲ್ಲಿ ಆಯೋಜಿಸಲಾಗಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿಯ ಹಲವು ಯುವ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು. ಯುವ ಕಾಂಗ್ರೆಸ್ ಮುಖಂಡ ಉತ್ತಮ್ ಆಳ್ವ ಸಾರಥ್ಯದಲ್ಲಿ ತುಷಾರ್, ಅಭಿಲಾಷ್, ಚಂದ್ರಶೇಖರ, ಮನೋಜ್, ಹೃತಿಕ್ ಶೆಟ್ಟಿ, ಇರ್ಷಾದ್ ಮತ್ತು ತಂಡದ 70ಕ್ಕೂ ಹೆಚ್ಚು ಯುವಕರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಇನಾಯತ್ ಅಲಿ ಅವರು ಪಕ್ಷದ ಧ್ವಜ ಕೊಟ್ಟು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
"ಜನರು ಕೋವಿಡ್ ಬಳಿಕ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಅದೆಷ್ಟೋ ವಿದ್ಯಾವಂತ ಯುವಜನತೆ ಉದ್ಯೋಗ ಕಳೆದುಕೊಂಡಿದ್ದಾರೆ. ಬಿಜೆಪಿಯವರು ತಮ್ಮದು ಡಬಲ್ ಇಂಜಿನ್ ಸರಕಾರ ಅಂತ ಹೇಳ್ತಾರೆ. ಆದರೆ ಅದರ ಇಂಜಿನ್ ಮಾತ್ರ ಇಲ್ಲಿದೆ, ಬೋಗಿ ದೂರದ ಯುಪಿ, ಗುಜರಾತ್‌ನಲ್ಲಿದೆ"
- ಇನಾಯತ್ ಅಲಿ, ಮಂಗಳೂರು ಉತ್ತರ ಕಾಂಗ್ರೆಸ್ ಅಭ್ಯರ್ಥಿ