ಗರಿಷ್ಟ ಮಟ್ಟ ತಲುಪಿದ ಹಸಿರುಮನೆ ಅನಿಲ ಸಾಂದ್ರತೆ: ವಿಶ್ವಸಂಸ್ಥೆ ಎಚ್ಚರಿಕೆ

Update: 2023-04-23 18:45 GMT

ಜಿನೆವಾ, ಎ.23: ಹಸಿರುಮನೆ ಅನಿಲ ಸಾಂದ್ರತೆಯು 2021ರಲ್ಲಿ ಹೊಸ ಎತ್ತರಕ್ಕೆ ಏರಿದೆ. ಕಾರ್ಬನ್ ಡೈಆಕ್ಸೈಡ್‌ನ ಸಾಂದ್ರತೆಯು ಜಾಗತಿಕವಾಗಿ ಪ್ರತೀ ಮಿಲಿಯನ್‌ಗೆ 415.7 ಪ್ರಮಾಣಕ್ಕೆ ಅಥವಾ ಕೈಗಾರಿಕಾ ಪೂರ್ವ ಮಟ್ಟ(1750)ದ 149%ದಷ್ಟು ಮಟ್ಟಕ್ಕೆ ತಲುಪಿದ್ದರೆ, ಮಿಥೇನ್ ಪ್ರಮಾಣ 262%ಕ್ಕೆ, ನಿಟ್ರಸ್ ಆಕ್ಸೈಡ್‌ನ ಮಟ್ಟ 124%ಕ್ಕೆ ತಲುಪಿದೆ ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆ ವಿಶ್ವಹವಾಮಾನ ಸಂಸ್ಥೆಯ ವರದಿ ಹೇಳಿದೆ.

ಹವಾಮಾನ ಬದಲಾವಣೆ ಸೂಚಕಗಳು ಮತ್ತೊಮ್ಮೆ ಗರಿಷ್ಟ ಮಟ್ಟಕ್ಕೆ ತಲುಪಿದ್ದು  ಕಳೆದ ವರ್ಷ ವಿಶ್ವದ ಹಿಮನದಿಗಳು ನಾಟಕೀಯ ವೇಗದಲ್ಲಿ ಕರಗಿದವು ಮತ್ತು ಅವುಗಳನ್ನು ಉಳಿಸುವುದು ಸಾಧ್ಯವೇ ಇಲ್ಲ ಎಂಬ ಹಂತ ತಲುಪಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ   ಶುಕ್ರವಾರ ವರದಿ ಮಾಡಿದೆ.

ಅಂಟಾರ್ಕ್ಟಿಕ್ ಸಮುದ್ರ ಮಂಜುಗಡ್ಡೆಯು ದಾಖಲೆಯ ಕನಿಷ್ಟ ಮಟ್ಟಕ್ಕೆ ಕುಸಿದಿದೆ ಹಾಗೂ ಕೆಲವು ಯುರೋಪಿಯನ್ ಹಿಮನದಿಗಳ ಕರಗುವಿಕೆಯೂ ತೀವ್ರಗೊಂಡಿದೆ. ಸಮುದ್ರದ ಮಟ್ಟಗಳೂ ದಾಖಲೆಯ ಮಟ್ಟಕ್ಕೇರಿದ್ದು 2013ರಿಂದ 2022ರ ಅವಧಿಯಲ್ಲಿ ಪ್ರತೀವರ್ಷ ಸರಾಸರಿ 4.62 ಮಿಲಿಮೀಟರ್‌ನಷ್ಟು ಏರಿಕೆಯಾಗಿದೆ. 1993ರಿಂದ 2002ರವರೆಗಿನ ಅವಧಿಗೆ ಹೋಲಿಸಿದರೆ ಏರಿಕೆ ದರ ದುಪ್ಪಟ್ಟಾಗಿದೆ ಎಂದು ವಿಶ್ವಹವಾಮಾನ ಸಂಸ್ಥೆಯ ವಾರ್ಷಿಕ ಹವಾಮಾನ ಪರಿಶೀಲನೆಯ ವರದಿ ಹೇಳಿದೆ.

ಭೂಮಿಯ ಮೇಲೆ ಹಸಿರುಮನೆ ಅನಿಲ ಹೊರಸೂಸುವಿಕೆಯ 90%ದಷ್ಟು ಶಾಖ ಸಂಗ್ರಹಗೊಂಡಿರುವ ಸಾಗರಗಳಲ್ಲಿ ದಾಖಲೆ ಮಟ್ಟದ ಗರಿಷ್ಟ ಉಷ್ಣತೆ ದಾಖಲಾಗಿದೆ. 2015ರ ಪ್ಯಾರಿಸ್ ಒಪ್ಪಂದದಂತೆ ದೇಶಗಳು ಜಾಗತಿಕ ತಾಪಮಾನವನ್ನು 2 ಡಿಗ್ರಿ ಸೆಲ್ಶಿಯಸ್‌ಗೂ ಕಡಿಮೆ ಮಟ್ಟಕ್ಕೆ, ಸಾಧ್ಯವಾದರೆ 1.5 ಡಿಗ್ರಿ ಸೆಲ್ಶಿಯಸ್‌ಗೆ ನಿಯಂತ್ರಿಸಲು ಒಪ್ಪಿದ್ದವು ಎಂದು ವರದಿ ಹೇಳಿದೆ.

ಈ ಅಂಕಿಅಂಶ 2022ರಲ್ಲೂ ಏರಿಕೆಯಾಗಲಿದೆ. ಹಸಿರುಮನೆ ಅನಿಲ ಹೊರಸೂಸುವಿಕೆಯಿಂದ ಉಂಟಾಗುವ ಹವಾಮಾನ ವೈಪರೀತ್ಯವು, ತಾಪಮಾನ ತಗ್ಗಿಸುವಿಕೆಯಲ್ಲಿ ನಾವು ಯಶಸ್ವಿಯಾಗದಿದ್ದರೆ 2060ರವರೆಗೂ ಮುಂದುವರಿಯಬಹುದು ಎಂದು ವಿಶ್ವ ಹವಾಮಾನ ಸಂಸ್ಥೆ ಮುಖ್ಯಸ್ಥ ಪೀಟರ್ ತಲಾಸ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ನಮ್ಮ ಬಹಳಷ್ಟು ಪರ್ವತ ಹಿಮನದಿಗಳು ಕಣ್ಮರೆಯಾಗುತ್ತಿವೆ ಮತ್ತು ವಾತಾವರಣದಿಂದ ಇಂಗಾಲದ ಡೈಆಕ್ಸೈಡ್ ಪ್ರಮಾಣವನ್ನು ಕಡಿಮೆಗೊಳಿಸದಿದ್ದರೆ ಅಂಟಾರ್ಕ್ಟಿಟ್ ಮತ್ತು ಗ್ರೀನ್‌ಲ್ಯಾಂಡ್ ಹಿಮನದಿಗಳ ಕುಗ್ಗುವಿಕೆ ದೀರ್ಘಾವಧಿಯವರೆಗೆ ಮುಂದುವರಿಯುತ್ತದೆ ಎಂದವರು ಹೇಳಿದ್ದಾರೆ.

ಆದರೆ ವರದಿಯಲ್ಲಿನ ಕೆಲವು ಕೆಟ್ಟ ಸುದ್ಧಿಗಳ ಹೊರತಾಗಿಯೂ ಆಶಾವಾದಕ್ಕೆ ಕಾರಣಗಳಿವೆ. ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವ ವಿಧಾನಗಳು ಹೆಚ್ಚು ಕೈಗೆಟಕುವಂತಿವೆ. ಹಸಿರುಶಕ್ತಿಯು ಪಳೆಯುಳಿಕೆ ಇಂಧನಗಳಿಗಿಂತ ಹೆಚ್ಚು ಅಗ್ಗವಾಗುತ್ತಿದೆ ಮತ್ತು ವಿಶ್ವವು ಉತ್ತಮ ತಗ್ಗಿಸುವಿಕೆ(ತಾಪಮಾನ) ವಿಧಾನವನ್ನು ಅಭಿವೃದ್ಧಿಪಡಿಸುತ್ತಿದೆ. ನಮ್ಮ ಭೂಮಿ 3ರಿಂದ 5 ಡಿಗ್ರಿಯಷ್ಟು ತಾಪಮಾನದತ್ತ ಹೊರಳಲಿದೆ ಎಂದು 2014ರಲ್ಲಿ ಅಂದಾಜು ಮಾಡಲಾಗಿತ್ತು. ಆದರೆ ಈಗ ಇದು 2.5ರಿಂದ 3 ಡಿಗ್ರಿಯ ಮಟ್ಟಕ್ಕೆ ಇಳಿದಿದೆ. ಇನ್ನಷ್ಟು ಪ್ರಯತ್ನಿಸಿದರೆ ನಾವು 1.5 ಡಿಗ್ರಿಯ ಮಟ್ಟ ತಲುಪಲು ಸಾಧ್ಯವಾಗಲಿದೆ. ಇದು ಮಾನವಕುಲದ ಕಲ್ಯಾಣ, ಜೀವಗೋಳ ಮತ್ತು ಜಾಗತಿಕ ಆರ್ಥಿಕತೆಗೆ ಉತ್ತಮವಾಗಿದೆ  ಎಂದು ತಲಾಸ್ ಹೇಳಿದ್ದಾರೆ.

Similar News