ಯಾವುದೇ ಕ್ಷಣದಲ್ಲಿ ಮಹಾರಾಷ್ಟ್ರ ಚುನಾವಣೆ: ಉದ್ಧವ್ ಭವಿಷ್ಯ

Update: 2023-04-24 03:00 GMT

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಯಾವುದೇ ಕ್ಷಣದಲ್ಲಿ ನಡೆಯಬಹುದು. ತಮ್ಮ ಪಕ್ಷ ಇದಕ್ಕೆ ಸಜ್ಜಾಗಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಏಕನಾಥ ಶಿಂಧೆ ಸರ್ಕಾರ ಮುಂದಿನ 15-20 ದಿನಗಳಲ್ಲಿ ಪತನಗೊಳ್ಳಲಿದೆ ಎಂದು ಶಿವಸೇನೆ (ಯುಬಿಟಿ) ಮುಖಂಡ ಸಂಜಯ್ ರಾವತ್ ಹೇಳಿಕೆ ನೀಡಿದ ಬೆನ್ನಲ್ಲೇ ಉದ್ಧವ್ ಠಾಕ್ರೆ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

"ಯಾವುದೇ ಕ್ಷಣದಲ್ಲಿ ಚುನಾವಣೆ ನಡೆಯಬಹುದು; ಇಂದು ಕೂಡಾ ನಡೆಯಬಹುದು. ಅದಕ್ಕೆ ನಾವು ಸಜ್ಜಾಗಿದ್ದೇವೆ. ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದ್ದು, ತೀರ್ಪು ನಮ್ಮ ಪರವಾಗಿ ಬರಲಿದೆ ಎಂಬ ನಿರೀಕ್ಷೆ ನಮ್ಮದು. ಆ ಬಳಿಕ ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಸಂಭವಿಸಬಹುದು" ಎಂದು ಜಲಗಾಂವ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸ್ಪಷ್ಟಪಡಿಸಿದರು.

ಒಟ್ಟು 288 ಕ್ಷೇತ್ರಗಳ ಪೈಕಿ ಶಿಂಧೆ ಬಣಕ್ಕೆ ಕೇವಲ 48 ಸ್ಥಾನಗಳನ್ನು ನೀಡುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ, ಮುಂದಿನ ಚುನಾವಣೆಯನ್ನು ಸಿಎಂ ಏಕನಾಥ ಶಿಂಧೆ ನೇತೃತ್ವದಲ್ಲೇ ನಡೆಸಲಾಗುತ್ತದೆಯೇ ಎಂಬ ಬಗ್ಗೆ ಬಿಜೆಪಿ ಸ್ಪಷ್ಟನೆ ನೀಡಬೇಕು ಎಂದು ಅವರು ಗ್ರಹಿಸಿದರು.

ಇದಕ್ಕೂ ಮುನ್ನ ಶಿಂಧೆ ಬಣಕ್ಕೆ 288 ಸ್ಥಾನಗಳ ಪೈಕಿ ಕೇವಲ 48 ಸ್ಥಾನಗಳನ್ನಷ್ಟೇ ನೀಡಲಾಗುವುದು ಎಂದು ರಾಜ್ಯ ಬಿಜೆಪಿ ಧ್ಯಕ್ಷ ಚಂದ್ರಶೇಖರ ಭವಾಂಕುಲೆ ಹೇಳಿದ್ದರು. ಕೇವಲ 48 ಸ್ಥಾನಗಳಿಗೆ ಸ್ಪರ್ಧಿಸುವ ಪಕ್ಷದ ಅಡಿಯಲ್ಲಿ ಬಿಜೆಪಿ ಚುನಾವಣೆ ಎದುರಿಸುತ್ತದೆಯೇ ಎಂದು ಅವರು ಪ್ರಶ್ನಿಸಿದರು.

Similar News