×
Ad

ಐಟಿ ನಿಯಮಗಳ ತಿದ್ದುಪಡಿಯಲ್ಲಿ ವಿಡಂಬನೆಗಳಿಗೆ ರಕ್ಷಣೆ ಕೊಡುವ ಅಂಶ ಇಲ್ಲ: ಬಾಂಬೆ ಹೈಕೋರ್ಟ್

Update: 2023-04-24 22:40 IST

ಮುಂಬೈ: ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 (ಐಟಿ ನಿಯಮಗಳು 2021) ರಲ್ಲಿನ ಇತ್ತೀಚಿನ ತಿದ್ದುಪಡಿಗಳನ್ನು ಪ್ರಶ್ನಿಸಿ  ಕಾಮಿಡಿಯನ್ ಕುನಾಲ್ ಕಾಮ್ರಾ ಅವರು ಸಲ್ಲಿಸಿದ ಅರ್ಜಿಯು ಅರ್ಹವಾಗಿದೆ ಎಂದು ಬಾಂಬೆ ಹೈಕೋರ್ಟ್ ಸೋಮವಾರ ಹೇಳಿದೆ.

ನ್ಯಾಯಮೂರ್ತಿ ಜಿಎಸ್ ಪಟೇಲ್ ಮತ್ತು ನ್ಯಾಯಮೂರ್ತಿ ನೀಲಾ ಗೋಖಲೆ ಅವರ ಪೀಠವು, ಐಟಿ ನಿಯಮಗಳು 2021 ರ ಹೊಸ ಪರಿಷ್ಕರಣೆಯು ವಿಡಂಬನೆ ಮತ್ತು ವ್ಯಂಗ್ಯಗಳಿಗೆ ಭದ್ರತೆ ಒದಗಿಸುವ ಅಗತ್ಯ ಕ್ರಮಗಳನ್ನು ಹೊಂದಿಲ್ಲ ಎಂದು ಹೇಳಿದೆ.

ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಲ್ಲಿಸಿದ ಅಫಿಡವಿಟ್ ಅನ್ನು ಉಲ್ಲೇಖಿಸಿದ ನ್ಯಾಯಾಲಯ, “ನಿಮ್ಮ ಅಫಿಡವಿಟ್‌ನಲ್ಲಿ ನಾವು ವಿಡಂಬನೆ ಮತ್ತು ವ್ಯಂಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.  ಆದರೆ ನಿಮ್ಮ ಕಾನೂನು ಬೇರೆಯದನ್ನು ಹೇಳುತ್ತದೆ. ಅದರಲ್ಲಿ ಭದ್ರತೆ ಇಲ್ಲ. ನಾವು ನೋಡಬೇಕು.”  ಎಂದು ಹೇಳಿದ್ದು, ಪ್ರಕರಣದ ವಿಚಾರಣೆಯನ್ನು ಎ. 26 ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಿ ಮಾಡಿದೆ.

ಪ್ರಕರಣದ ಹಿನ್ನೆಲೆ:

ಕೇಂದ್ರ ಸರ್ಕಾರ ಎ. 6ರಂದು ಐಟಿ ನಿಯಮಗಳಿಗೆ ತಿದ್ದುಪಡಿ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಿತ್ತು.  ಐಟಿ ನಿಯಮಗಳಲ್ಲಿನ ತಿದ್ದುಪಡಿಯ ಪ್ರಕಾರ, ಯಾವುದೇ ಸುದ್ದಿ ಅಥವಾ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಸತ್ಯವನ್ನು ಪರಿಶೀಲಿಸಲು ಪ್ರತ್ಯೇಕ ಸಂಸ್ಥೆಯನ್ನು ರಚಿಸಲಾಗುತ್ತದೆ.  ಈ ಸಂಸ್ಥೆಯ ಮೂಲಕ 'ನಕಲಿ ಸುದ್ದಿ'ಯನ್ನು ತೆಗೆದುಹಾಕಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ.

ಈ ತಿದ್ದುಪಡಿ ವಿರುದ್ಧ ಕುನಾಲ್ ಕಾಮ್ರಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರು ಬಾಂಬೆ ಹೈಕೋರ್ಟ್‌ನಲ್ಲಿ ಮಾಹಿತಿ ತಂತ್ರಜ್ಞಾನ (ಮಧ್ಯಂತರ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ತಿದ್ದುಪಡಿ ನಿಯಮಗಳು, 2023 ರ ನಿಯಮ 3(i)(II)(C) ಅನ್ನು ಪ್ರಶ್ನಿಸಿದ್ದರು.

ಅರ್ಜಿಯಲ್ಲಿ ತಮ್ಮನ್ನು ರಾಜಕೀಯ ವಿಡಂಬನಕಾರ ಎಂದು ಬಣ್ಣಿಸಿರುವ ಕಾಮ್ರಾ, ಈ ತಿದ್ದುಪಡಿಯೊಂದಿಗೆ ಸರ್ಕಾರ ನಿರಂಕುಶವಾಗಿ ವರ್ತಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ತಾನು ರಾಜಕೀಯ ವಿಡಂಬನಕಾರನಾಗಿದ್ದು, ತನ್ನ ವಿಷಯವನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮವನ್ನು ತಾನು ಅವಲಂಬಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಈ ಕಾನೂನು ಮೂಲಕ ತನ್ನಂತಹ ವಿಡಂಬನಾಕಾರರ ಮೇಲೆ ನಿಯಂತ್ರಣ ಹೇರಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಈ ಕಾನೂನಿನ ಸಹಾಯದಿಂದ ಸರ್ಕಾರವು ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದು ಕಾಮ್ರಾ ಪ್ರತಿಪಾದಿಸಿದ್ದಾರೆ.

Similar News