ಪ್ರಜಾಪ್ರಭುತ್ವದ ರಕ್ಷಣೆಯ ದೃಷ್ಟಿಯಿಂದ ಕರ್ನಾಟಕದ ಚುನಾವಣೆ ಮಹತ್ವದ್ದು: ಖರ್ಗೆ
ಮಂಗಳೂರು, ಎ.25: ದೇಶದ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ದೇಶದ ಜನತೆ ಆತಂಕದಲ್ಲಿರುವ ಸಂದರ್ಭದಲ್ಲಿ ಕರ್ನಾಟಕದ ವಿಧಾನಸಭಾ ಚುನಾವಣೆ ಮಹತ್ವದ್ದಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಯಯಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಡಬಲ್ ಇಂಜಿನ್ ಬಿಜೆಪಿ ಸರ್ಕಾರ 40% ಕಮಿಷನ್ ನಿಂದ ವಿಫಲವಾಗಿದೆ ಎಂದರು.
ಈಗ ಪ್ರಜಾಪ್ರಭುತ್ವದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ ಕರ್ನಾಟಕ, ಗುಜರಾತ್, ಗೋವಾ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದವರ ಕಳ್ಳತನ ಆಗಿದೆ ಇಡಿ, ಐಟಿ ಎಲ್ಲವೂ ಅವರ ಕೈಯಲ್ಲಿದೆ ಹಾಗಾಗಿ ಕಳ್ಳತನ ಆಗ್ತಾ ಇದೆ. ಆದ್ದರಿಂದ ರಾಜ್ಯದಲ್ಲಿ ನಮಗೆ 150 ಸ್ಥಾನಗಳನ್ನು ಗೆಲ್ಲಬೇಕಿದೆ. ಒಂದೆರಡು ಕಳ್ಳತನ ಆದ್ರೂ ಸರ್ಕಾರ ಸುಭದ್ರವಾಗಿ ಉಳಿಯಲು ಇದು ಅನಿವಾರ್ಯ ಎಂದರು.
ಬಿಜೆಪಿಯವರೇ ಎಲ್ಲಾ ಕಡೆ ಎಟಿಎಂ ಇಟ್ಟಿದ್ದಾರೆ.ದುಡ್ಡಿನ ಮೇಲೆ ಬಿಜೆಪಿ ಚುನಾವಣೆ ನಡೆಸ್ತಾ ಇದೆ, ಮನಿ ಮತ್ತು ಮಸಲ್ ಪವರ್ ಬಳಸ್ತಾ ಇದ್ದಾರೆ ಎಂದು ಆರೋಪಿಸಿದ ಖರ್ಗೆ, ದೇಶದಲ್ಲಿ ಶಿಕ್ಷಣ, ನಿರುದ್ಯೋಗ, ಹೂಡಿಕೆ, ಹಣದುಬ್ಬರ, ಭ್ರಷ್ಟಾಚಾರದ ಬಗ್ಗೆ ದೇಶದ ಪ್ರಧಾನಿ ಮಾತನಾಡುತ್ತಿಲ್ಲ. ಬೆಂಗಳೂರಿನಿಂದ ವಾರಣಾಸಿಗೆ ಮೊನ್ನೆ ಒಂದು ರೈಲು ಬಿಟ್ಟು ಅದನ್ನು ದೊಡ್ಡ ಸುದ್ದಿ ಮಾಡಿದ್ದಾರೆ. ನಾನು ರೈಲ್ವೇ ಸಚಿವ ಆಗಿದ್ದಾಗ 30ಕ್ಕೂ ಅಧಿಕ ರೈಲು ಹಾಕಿದ್ದೆ ಎಂದು ತಿಳಿಸಿದರು.
ಕಾಂಗ್ರೆಸ್ 185 ವಿಧಾನಸಭಾ ಕ್ಷೇತ್ರಗಳಿಗೆ ಎಲ್ಲಾ ಪಕ್ಷ ಗಳಿಗೂ ಮೊದಲೇ ಅಭ್ಯರ್ಥಿಗಳನ್ನು ಘೋಷಿಸಿತ್ತು. ಕೆಲವು ಕಡೆ ನಾಯಕರ, ಆಕಾಂಕ್ಷಿಗಳ ಬೇಡಿಕೆ ಹೆಚ್ಚಾಗಿ ವಿಳಂಬ ಆಗಿತ್ತು ಎಂದು ಸಮಜಾಯಿಷಿ ನೀಡಿದರು.
ಪಕ್ಷದಲ್ಲಿ ಟಿಕೆಟ್ ಸೇಲ್ ಬಗ್ಗೆ ಮಾಜಿ ಶಾಸಕ ಮೊಯ್ದಿನ್ ಬಾವಾ, ಮಾಡಿರುವ ಆರೋಪ ಕುರಿತಂತೆ ಪ್ರತಿಕ್ರಿಯಿಸಿದ ಎಐಸಿಸಿ ಅಧ್ಯಕ್ಷ ಟಿಕೆಟ್ ಸಿಗದೇ ಇದ್ದವರೂ ಈಗ ಆರೋಪ ಮಾಡ್ತಾರೆ ಅದಕ್ಕೆಲ್ಲಾ ಈಗ ಕಮೆಂಟ್ ಮಾಡುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಶಾಸಕರಾದ ಯು.ಟಿ.ಖಾದರ್, ಮಂಜುನಾಥ ಭಂಡಾರಿ, ಮಾಜಿ ಸಚಿವ ಬಿ.ರಮಾನಾಥ ರೈ, ಎಐಸಿಸಿ ವಕ್ತಾರ ಡಾ.ಶಮಾ ಮುಹಮ್ಮದ್, ಪ್ರಣವ್ ಜ್ಹಾ, ಶಾಸಕ, ಚರಣ್ ಸಿಂಗ್ ಸಪ್ರಾ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.