×
Ad

ನುಡಿದಂತೆ ನಡೆಯುವುದು ಶಂಕರಾಚಾರ್ಯರ ಸಿದ್ಧಾಂತ: ಉಡುಪಿ ಎಡಿಸಿ

Update: 2023-04-25 20:21 IST

ಉಡುಪಿ, ಎ.25: ಶಂಕರಾಚಾರ್ಯರು ಬೋಧಿಸಿದ ಸತ್ಯದರ್ಶನವೆಂದರೆ ನುಡಿದಂತೆ ನಡೆಯುವುದು. ಅವರು ತಮ್ಮ ತತ್ವ ಸಿದ್ಧಾಂತಗಳಲ್ಲಿ ಯಾರನ್ನು ತುಳಿಯಬಾರದು, ಎಲ್ಲಾಚರಾಚರ ಹಾಗೂ ಲೌಕಿಕ- ಅಲೌಕಿಕ ವಸ್ತು ಗಳಿಗೂ ಬದುಕುವ ಹಕ್ಕಿದೆ ಎಂದು ಪ್ರತಿಪಾದಿಸಿದವರು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಹೇಳಿದ್ದಾರೆ. 

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ವತಿಯಿಂದ ಮಂಗಳವಾರ ಆಯೋಜಿಸಲಾದ ಶ್ರೀಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಸಲ್ಲಿಸಿ ಮಾತನಾಡಿದರು.

ಸಮಯಕ್ಕೆ ಬೆಲೆ ಕೊಟ್ಟು ತಮ್ಮ 32 ವರ್ಷದ ಜೀವಿತಾವಧಿಯಲ್ಲಿ ಇಡೀ ದೇಶವನ್ನು ಸುತ್ತಿ, ಅದ್ವೈತ ತತ್ವದ ಬೋಧನೆಯನ್ನು ಮಾಡಿದ್ದಾರೆ.ಅವರು ಸ್ಥಾಪಿಸಿದ 4 ಮಠಗಳಲ್ಲಿ ಒಂದು ಮಠ ರಾಜ್ಯದ ಶೃಂಗೇರಿಯಲ್ಲಿ ಇರುವುದು ನಮ್ಮ ಹೆಮ್ಮೆ ಎಂದರು.

ಶಂಕರಾಚಾರ್ಯರ ಕುರಿತು ಡಾ.ವೈ.ಸುದರ್ಶನ್ ರಾವ್ ಮಾತನಾಡಿ, ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯರಲ್ಲಿ ಶಂಕರಾಚಾರ್ಯರು ಮೊದಲಿಗರು. ಭಾರತೀಯ ಧರ್ಮ ಶಾಸ್ತ್ರಕ್ಕೆ ಅದ್ವೈತ ವೇದಾಂತ ತತ್ವಶಾಸ್ತ್ರವನ್ನು ಕೊಡುಗೆಯಾಗಿ ನೀಡಿದ ಆಚಾರ್ಯರು, ಹಿಂದೂ ಧರ್ಮದ ಬೆಳವಣಿಗೆಗೆ ಧರ್ಮ ಬೋಧನೆ, ಕೀರ್ತನೆಗಳನ್ನು ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕನ್ನಡ ಸಾಹಿತ್ಯ ಪರಿಷತ್‌ನ ನರಸಿಂಹ ಮೂರ್ತಿ, ಹಿರಿಯ ನಾಗರಿಕ ಸಂಘದ ಅಧ್ಯಕ್ಷ ಸಿ.ಎಸ್.ರಾವ್ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ ವಂದಿಸಿದರು.

Similar News