ಉತ್ತರ ಶ್ರೀಲಂಕಾದಲ್ಲಿ ತಮಿಳು ಪಕ್ಷಗಳ ಪ್ರತಿಭಟನೆ; ಜನಜೀವನ ಅಸ್ತವ್ಯಸ್ತ
ನೂತನ ಭಯೋತ್ಪಾದನಾ ನಿಗ್ರಹ ಕಾಯ್ದೆಗೆ ವಿರೋಧ
ಕೊಲಂಬೊ,ಎ.25 : ನೂತನ ಭಯೋತ್ಪಾದನಾ ನಿಗ್ರಹ ವಿಧೇಯಕದ ವಿರುದ್ಧ ತಮಿಳು ಪಕ್ಷಗಳ ಒಕ್ಕೂಟವಾದ ತಮಿಳು ರಾಷ್ಟ್ರೀಯ ಮೈತ್ರಿಕೂಟವು ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಶ್ರೀಲಂಕಾದ ಉತ್ತರ ಹಾಗೂ ಪೂರ್ವ ಪ್ರಾಂತಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ.
ವಿವಾದಾತ್ಮಕ 1979ರ ಭಯೋತ್ಪಾದನೆ ತಡೆ ಕಾಯ್ದೆಯ ಬದಲಿಗೆ ನೂತನ ಭಯೋತ್ಪಾದಕ ನಿಗ್ರಹ ಕಾಯ್ದೆ (ಎಟಿಎ)ಯನ್ನು ಜಾರಿಗೆ ತರುವ ಉದ್ದೇಶವನ್ನು ಶ್ರೀಲಂಕಾ ಸರಕಾರ ಹೊಂದಿದೆ. 1979ರಲ್ಲಿ ಪ್ರತ್ಯೇಕತಾವಾದಿ ತಮಿಳು ಬಂಡುಕೋರರ ಗುಂಪುಗಳು ನಡೆಸುತ್ತಿದ್ದ ಹಿಂಸಾಚಾರವನ್ನು ಹತ್ತಿಕ್ಕಲು ಭಯೋತ್ಪಾದನೆ ನಿಗ್ರಹ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು.
80ರ ದಶಕದಲ್ಲಿ ಎಲ್ಟಿಟಿಇ ಬಂಡುಕೋರರ ಭದ್ರಕೋಟೆಯಾಗಿದ್ದ ಉತ್ತರ ಜಾಫ್ನಾದ ತೆನ್ಮಾರಚ್ಚಿ, ಕೊಡಿಕಾಮಮ್ ಹಾಗೂ ಚಾವಕಚ್ಚೇರಿಗಳಲ್ಲಿ ಸಂಪೂರ್ಣ ಬಂದ್ ಆಚರಿಸಲಾಗಿದ್ದು, ವಸ್ತುಶಃ ಜನಜೀವನ ಸ್ತಬ್ಧಗೊಂಡಿತ್ತು., ಆರೋಪಿಗಳ ವಿರುದ್ಧ ನ್ಯಾಯಾಲಯಗಳಲ್ಲಿ ಮೊಕದ್ದಮೆ ದಾಖಲಿಸದೆಯೇ ಅವನ್ನು ಹಲವಾರು ವರ್ಷಗಳ ಕಾಲ ಜೈಲಿನಲ್ಲಿಡುವುದಕ್ಕೆ ಅವಕಾಶ ನೀಡುವ ಹಾಲಿ ಭಯೋತ್ಪಾದನೆ ತಡೆ ಕಾಯ್ದೆಯ (ಪಿಟಿಎಒ) ನಿಯಮಾವಳಿಗಳ ನ್ನು ಅಂತಾರಾಷ್ಟೀಯ ಮಾನವಹಕ್ಕುಗಳ ಸಂಘಟನೆಗಳು ಹಾಗೂ ತಮಿಳು ರಾಜಕೀಯ ಪಕ್ಷಗಳು ಪ್ರಬಲವಾಗಿ ವಿರೋಧಿಸುತ್ತಾ ಬಂದಿವೆ.
ಆದಾಗ್ಯೂ ನೂತನ ಭಯೋತ್ಪಾದನಾ ನಿಗ್ರಹ ಕಾಯ್ದೆಯು, ಹಾಲಿ ಭಯೋತ್ಪಾದನಾ ತಡೆ ಕಾಯ್ದೆಗಿಂತಲೂ ಕಠೋರವಾಗಿದೆಯೆಂದು ಅವು ಅಸಮಾಧಾನ ವ್ಯಕಪಡಿಸಿವೆ.
ಅಲ್ಪಸಂಖ್ಯಾತ ತಮಿಳು ಹಾಗೂ ಮುಸ್ಲಿಂ ರಾಜಕೀಯ ಪಕ್ಷಗಳಲ್ಲದೆ ಕಾರ್ಮಿಕ ಒಕ್ಕೂಟ, ಶ್ರೀಲಂಕಾದ ಪ್ರತಿಪಕ್ಷಗಳಿಂದಲೂ ಎಟಿಎ ಕಾಯ್ದೆಗೆ ಪ್ರಬಲ ವಿರೋಧ ವ್ಯಕ್ತವಾಗಿದೆ. ಸರಕಾರದ ವಿರುದ್ಧ ಪ್ರತಿಭಟನೆ ನಡೆಸುವವರ ವಿರುದ್ಧ ಈ ಕಾಯ್ದೆಯಡಿ ಭಯೋತ್ಪಾದನೆಯ ದೋಷಾರೋಪ ಹೊರಿಸಲು ಅವಕಾಶ ನೀಡುತ್ತದೆ ಎಂದು ಅವು ಆಕ್ರೋಶ ವ್ಯಕ್ತಪಡಿಸಿವೆ.