×
Ad

ಫೆಲೆಸ್ತೀನ್‌ನಲ್ಲಿ ಇಸ್ರೇಲಿ ಆಕ್ರಮಣ ಅಂತ್ಯಗೊಳ್ಳಲಿ: ವಿಶ್ವಸಂಸ್ಥೆ ಭದ್ರತಾ ಮಂಡಳಿ ಕರೆ

Update: 2023-04-26 23:31 IST

ನ್ಯೂಯಾರ್ಕ್, ಎ.26: ಫೆಲೆಸ್ತೀನ್ ನಲ್ಲಿ ಇಸ್ರೇಲಿ ಆಕ್ರಮಣ ಮತ್ತು ಅಕ್ರಮ ಯೆಹೂದಿ ವಸಾಹತುಗಳನ್ನು ಕೊನೆಗೊಳಿಸಬೇಕು ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯ ದೇಶಗಳು ಆಗ್ರಹಿಸಿವೆ.

ಇಸ್ರೇಲಿಯನ್ನರು ಹಾಗೂ ಫೆಲೆಸ್ತೀನೀಯರ ನಡುವಿನ ಬಿಕ್ಕಟ್ಟನ್ನು ಪರಿಹರಿಸಲು ಎರಡು ದೇಶ ಸೂತ್ರವೇ ಪರಿಹಾರ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಪುನರುಚ್ಚರಿಸಿದೆ. ಫೆಲೆಸ್ತೀನ್ ನ ಪರಿಸ್ಥಿತಿ ಹಾಗೂ ಫೆಲೆಸ್ತೀನಿಯನ್ ಪ್ರದೇಶಗಳ ಮೇಲಿನ ಇಸ್ರೇಲಿ ಆಕ್ರಮಣದ ಸ್ಥಿತಿಯ ಕುರಿತು ಚರ್ಚಿಸಲು ನಡೆದ ಭದ್ರತಾ ಮಂಡಳಿಯ ತ್ರೈಮಾಸಿಕ ಸಭೆಯಲ್ಲಿ ಈ ಕುರಿತು ವಿಚಾರ ವಿನಿಮಯ ನಡೆಯಿತು.

ಸಭೆಯನ್ನು ಸಚಿವರ ಮಟ್ಟದಲ್ಲಿ ನಡೆಸಲು ಭದ್ರತಾ ಮಂಡಳಿಯ ಹಾಲಿ ಅಧ್ಯಕ್ಷ ರಶ್ಯ ನಿರ್ಧರಿಸಿದ ಬಳಿಕ ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಫೆಲೆಸ್ತೀನ್ ನ ವಿದೇಶಾಂಗ ಸಚಿವ ರಿಯಾದ್ ಅಲ್-ಮಲೀಕಿ ಅವರು `ನಕ್ಬಾ' ಅಥವಾ ದುರಂತದ 75ನೇ ವಾರ್ಷಿಕೋತ್ಸವವನ್ನು ಸ್ಮರಿಸುವ ಮೂಲಕ ಸಭೆಯಲ್ಲಿ ತಮ್ಮ ವಿಚಾರ ಮಂಡಿಸಿದರು.

ಪಶ್ಚಿಮದಂಡೆ ಮತ್ತು ಪೂರ್ವ ಜೆರುಸಲೇಂನಲ್ಲಿ ಫೆಲೆಸ್ತೀನ್ ನ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ಇಸ್ರೇಲ್ ಮುಂದುವರಿಸುವ ಮೂಲಕ ಅಂತರಾಷ್ಟ್ರೀಯ ಕಾನೂನನ್ನು ನಿರಂತರವಾಗಿ ಉಲ್ಲಂಘಿಸುತ್ತಿದ್ದು ಇದಕ್ಕೆ ಇಸ್ರೇಲ್ ಅನ್ನು ಹೊಣೆಯಾಗಿಸಲು ಅಂತರಾಷ್ಟ್ರೀಯ ಸಮುದಾಯ ಇನ್ನಷ್ಟು ಕಾರ್ಯನಿರ್ವಹಿಸಬೇಕಾಗಿದೆ ಎಂದವರು ಆಗ್ರಹಿಸಿದರು.

ಅಂತರಾಷ್ಟ್ರೀಯ ಕಾನೂನಿನ ತತ್ವಗಳನ್ನು ಅನುಸರಿಸಲು ವಿಫಲವಾದ ಮತ್ತು ಫೆಲೆಸ್ತೀನೀಯರನ್ನು ಕೆಟ್ಟದಾಗಿ ನಡೆಸಿಕೊಳ್ಳುವ  ಇಸ್ರೇಲ್ ಅನ್ನು ಕೇವಲ ಬಾಯ್ಮಾತಿನಲ್ಲಿ ಖಂಡಿಸುವ ಬದಲು, ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದ್ದರೆ ಇಸ್ರೇಲ್ ಇಂತಹ ವರ್ತನೆ ಮತ್ತು ಆಕ್ರಮಣದಿಂದ ಹಿಂದೆ ಸರಿಯುವ ಸಾಧ್ಯತೆಯಿತ್ತು. ಆದರೆ ಶಿಕ್ಷೆಯ ಭಯವಿಲ್ಲದೆ ಇಸ್ರೇಲಿ ಅಧಿಕಾರಿಗಳು ಅಂತರಾಷ್ಟ್ರೀಯ ಕಾನೂನು ಮತ್ತು ಮಾನದಂಡಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ.

ತನ್ನ ಸ್ವಾಧೀನಪಡಿಸುವಿಕೆ ಪ್ರಕ್ರಿಯೆಯ ಲಾಭವನ್ನು ಇಸ್ರೇಲ್ ಪಡೆಯುತ್ತಿದ್ದು ಅದರ ಹೊರೆ ನಮ್ಮ ಮೇಲಿದೆ. ನಾವು ಸ್ವಾಧೀನಪಡಿಸುವಿಕೆ ಮತ್ತು ವರ್ಣಭೇದ ನೀತಿಯ ಸಂತ್ರಸ್ತರು. ಸ್ವಾಧೀನಪಡಿಸಿಕೊಳ್ಳುವುದು ದುಬಾರಿ ಎಂದು ಅವರಿಗೆ ಅನಿಸಿದರೆ ಮಾತ್ರ ಇದು ಅಂತ್ಯಗೊಳ್ಳಬಹುದು ಎಂದವರು ಪ್ರತಿಪಾದಿಸಿದರು.

ಈ ಸಂದರ್ಭ ಮಾತನಾಡಿದ ವಿಶ್ವಸಂಸ್ಥೆಗೆ ಇಸ್ರೇಲ್ ಪ್ರತಿನಿಧಿ ಗಿಲಾಡ್ ಎರ್ಡನ್ `ವಿಶ್ವಸಂಸ್ಥೆ ಭದ್ರತಾ ಮಂಡಳಿ ಪಕ್ಷಪಾತದಿಂದ ವರ್ತಿಸುತ್ತಿದೆ. ಇಸ್ರೇಲ್ನ `ಸ್ಮಾರಕದಿನದ ರಜೆ'ಯ ಸಂದರ್ಭ ಭದ್ರತಾ ಮಂಡಳಿ ಸಭೆ ನಡೆಸುವುದು ಬೇಡ ಎಂಬ ನಮ್ಮ ಸಲಹೆಯನ್ನು ಭದ್ರತಾ ಮಂಡಳಿ ತಿರಸ್ಕರಿಸಿದೆ' ಎಂದರು. ಬಳಿಕ ಯುದ್ಧದಲ್ಲಿ ಮರಣಹೊಂದಿದ ಇಸ್ರೇಲಿ ಯೋಧರ ಹೆಸರನ್ನು ಓದಿ ಹೇಳಿ ಸಭೆಯಿಂದ ಹೊರನಡೆದರು.

ಬಳಿಕ ಮಾತನಾಡಿದ ಮಧ್ಯಪ್ರಾಚ್ಯ ಶಾಂತಿ ಪ್ರಕ್ರಿಯೆಗಾಗಿನ ವಿಶ್ವಸಂಸ್ಥೆಯ ವಿಶೇಷ ಸಂಯೋಜಕ ಟೋರ್ ವೆನ್ನೆಸ್ಲ್ಯಾಂಡ್ `ಸಂಘರ್ಷವನ್ನು ಉಲ್ಬಣಗೊಳಿಸಬಹುದಾದ ಯಾವುದೇ ಕ್ರಮಗಳಿಂದ ದೂರವಿರಬೇಕು ಮತ್ತು ಯಾವುದೇ ಪ್ರಚೋದನೆಗಳನ್ನು ಕೊನೆಗೊಳಿಸಬೇಕು. ಸ್ವಾಧೀನತೆಯನ್ನು ಕೊನೆಗೊಳಿಸಲು ಆಗ್ರಹಿಸುವ ನಿರ್ಣಯಗಳನ್ನು ತಡೆಯುವ ಯಾವುದೇ ಕ್ರಮಗಳಿಂದ ದೂರ ಇರಬೇಕು' ಎಂದು ಆಗ್ರಹಿಸಿದರು.

ಇಸ್ರೇಲ್ ಪಡೆಗಳಿಂದ ಫೆಲೆಸ್ತೀನಿಯನ್ ನಾಗರಿಕರ ಹತ್ಯೆ, ಫೆಲೆಸ್ತೀನೀಯರ ಮನೆಗಳ ಧ್ವಂಸಗೊಳಿಸುವ ಕೃತ್ಯಗಳನ್ನು ಉಲ್ಲೇಖಿಸಿದ ಅವರು `ಅಂತರಾಷ್ಟ್ರೀಯ ಕಾನೂನಿನ ಸಿದ್ಧಾಂತಕ್ಕೆ ಬದ್ಧರಾಗಿ, ಆಕ್ರಮಿತ ಜೆರುಸಲೇಂನಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ಇಸ್ರೇಲ್ ಅನ್ನು ಆಗ್ರಹಿಸಿದರು. ಅಧ್ಯಕ್ಷತೆ ವಹಿಸಿದ್ದ ಲಾವ್ರೋವ್ ಮಾತನಾಡಿ ರಶ್ಯವು ಎರಡು ದೇಶಗಳ ಪರಿಹಾರವನ್ನು ಬೆಂಬಲಿಸುತ್ತದೆ ಮತ್ತು ಮಧ್ಯಪ್ರಾಚ್ಯದಲ್ಲಿ ಸ್ಥಿರತೆ ಮತ್ತು ಶಾಂತಿಯನ್ನು ಸಾಧಿಸಲು ಸಹಾಯ ಮಾಡುವ ಎಲ್ಲಾ ಶಕ್ತಿಗಳೊಂದಿಗೂ ತೊಡಗಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ. ಅಕ್ರಮ ವಸಾಹತು ನಿರ್ಮಾಣ, ಫೆಲೆಸ್ತೀನೀಯರ ಮನೆಗಳ ಧ್ವಂಸ, ಸ್ವೇಚ್ಛಾಚಾರದಿಂದ ಫೆಲೆಸ್ತೀನೀಯರ ಬಂಧನ ಇತ್ಯಾದಿ ಕೃತ್ಯಗಳ ಮೂಲಕ ಇಸ್ರೇಲಿಯನ್ನರ ಏಕಪಕ್ಷೀಯ ಕ್ರಮಗಳು ಈ ಪ್ರದೇಶದಲ್ಲಿ ಅಸ್ಥಿರತೆ ನೆಲೆಸಲು ಪ್ರಮುಖ ಕಾರಣ ಎಂದರು.

ಈ ಪ್ರದೇಶದಲ್ಲಿನ ಪರಿಸ್ಥಿತಿ ಉಲ್ಬಣಗೊಳ್ಳದಂತೆ ಎರಡೂ ಕಡೆಯವರು ಕ್ರಮ ಕೈಗೊಳ್ಳಬೇಕು ಎಂದ ಅಮೆರಿಕದ ಪ್ರತಿನಿಧಿ ಲಿಂಡಾ ಥಾಮಸ್-ಗ್ರೀನ್ಫೀಲ್ಡ್, ಇಸ್ರೇಲ್ಗೆ ಅಮೆರಿಕದ ಬೆಂಬಲ ಮುಂದುವರಿಯಲಿದೆ ಎಂದರು. ಫ್ರಾನ್ಸ್, ಇಕ್ವೆಡಾರ್, ಘಾನಾ ಮತ್ತು ಯುಎಇ ದೇಶಗಳ ಸದಸ್ಯರು ಇತ್ತೀಚಿಗೆ ಜೆರುಸಲೇಂನಲ್ಲಿ ಹಿಂಸಾಚಾರ ಉಲ್ಬಣಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಫೆಲೆಸ್ತೀನೀಯರ ಹಕ್ಕುಗಳಿಗೆ ತಮ್ಮ ಬೆಂಬಲವಿದೆ. ಫೆಲೆಸ್ತೀನ್ ಜನರ ಸಮಸ್ಯೆಗೆ ಪರಿಹಾರ ಹುಡುಕುವುದು ಅತ್ಯಗತ್ಯವಾಗಿದೆ ಎಂದು ಸದಸ್ಯರು ಆಗ್ರಹಿಸಿದರು.

Similar News