ಚುನಾವಣಾ ಬಹಿಷ್ಕಾರದ ನಿರ್ಧಾರದಿಂದ ಹಿಂದೆ ಸರಿದ ಎಂಆರ್‌ಪಿಎಲ್‌ ನಾಲ್ಕನೇ ಹಂತದ ಸಂತ್ರಸ್ತರು

ʼಮತದಾನದ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆʼ

Update: 2023-04-27 14:08 GMT

ಸುರತ್ಕಲ್‌, ಎ.27: ಎಂಆರ್‌ಪಿಎಲ್‌ ನಾಲ್ಕನೇ ಹಂತದ ಕುತ್ತೆತ್ತೂರು, ತೆಂಕ ಎಕ್ಕಾರು, ಪೆರ್ಮುದೆ ಗ್ರಾಮದ ಸಂತ್ರಸ್ತರು ಚುನಾವಣಾ ಬಹಿಷ್ಕಾರದ ನಿರ್ಧಾರದಿಂದ ಹಿಂದೆ ಸರಿದಿದ್ದು, ಮತದಾನದ ಮೂಲಕ ತಮ್ಮ ಬೇಡಿಕೆ ಈಡೇರಿಸಿ ಕೊಳ್ಳುವುದಾಗಿ ತಿಳಿಸಿದ್ದಾರೆ. ಗುರುವಾರ ಭೂ ಸಂತ್ರಸ್ತರ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಗ್ರಾಮಸ್ಥರು ಈ ನಿರ್ಧಾರವನ್ನು ಘೋಷಿಸಿದ್ದಾರೆ.

ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಹಾಗೂ ಹೋರಾಟಗಾರ ಮುನೀರ್‌ ಕಾಟಿಪಳ್ಳ, ಎಂಆರ್‌ಪಿಎಲ್‌ ಸಾರ್ವಜನಿಕ ರಂಗದ ಸರಕಾರಿ ಸಂಸ್ಥೆ ಆದರೆ, ಅದು ಅದಾನಿ ಅಂಬಾನಿ ಕಂಪೆನಿಗಳಿಗಿಂತಲೂ ತುಳುನಾಡಿದ ಜನರನ್ನು ಕೀಳಾಗಿ ಕಾಣುತ್ತಿದೆ. ಅವರಿಗೆ ನಮ್ಮ ಬಗ್ಗೆ ಯಾವುದೇ ಕಾಳಜಿ ಇಲ್ಲ. ನಮ್ಮ ಯುವಕರು ಮುಂಬೈ ವಿದೇಶಗಳಿಗೆ ತೆರಳಿ ಕಷ್ಟ ಪಡುವ ಬದಲು ಇಲ್ಲೇ ಕೆಲಸ ಮಾಡಿಕೊಂಡು ಇರಲೆಂದು ಕೈಗಾರಿಕೆಗಳಿಗೆ ಅವಕಾಶ ಕಲ್ಪಿಸಿದರೆ, ಅವರು ನಮ್ಮ ಯುವಕರನ್ನು ಕಡೆಗಣಿಸಿ ಉತ್ತರ ಭಾರತದವರಿಗೆ ಉದ್ಯೋಗ ನೀಡುತ್ತಿದ್ದಾರೆ ಇದು ಅಕ್ಷ್ಯಮ್ಯ ಎಂದರು.

ಉದ್ಯೋಗ ಸೃಷ್ಠಿ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಬೃಹತ್‌ ಕಂಪೆನಿಗಳನ್ನು ಕರಾವಳಿಗೆ ತರಲಾಗುತ್ತಿದೆ. ಈಗ ಜಮೀನು ನೀಡಿವರರಿಗೂ ಉದ್ಯೋಗ ನೀಡುವುದಿಲ್ಲ. ಭರವಸೆಗಳನ್ನು ನೀಡಿ ಈಗ ಜಮೀನುಗಳನ್ನು ಸರಕಾರದ ವಶಕ್ಕೆ ಪಡೆದುಕೊಂಡು ಈಗ ವಂಚಿಸುತ್ತಿರುವುದು ಅನ್ಯಾಯದ ಪರಮಾವಧಿ. ಎಂಆರ್‌ಪಿಎಲ್‌ ಈ ಹಿಂದೆ ಜೋಕಟ್ಟೆ ಭಾಗದಲ್ಲಿ ಮಾಡಿದಂತೆಯೇ ಈಗ ಕುತ್ತೆತ್ತೂರು ಭಾಗದಲ್ಲಿ ಮಾಡಲು ಹೊರಟಿದ್ದಾರೆ. ಹೀಗಾಗಿ ಇಲ್ಲಿನ ಗ್ರಾಮಸ್ಥರು ಮತದಾನ ಬಹೀಷ್ಕಾರಕ್ಕೆ ಮುಂದಾಗಿದ್ದಾರೆ ಎಂದರು.

ಮತದಾನ ಬಹಿಷ್ಕಾರ ಅನ್ಯಾಯವನ್ನು ಸರಿಪಡಿಸಿಕೊಳ್ಳುವ ಸರಿಯಾದ ವಿಧಾನವಲ್ಲ. ಚುನಾವಣೆ ಜನ ಸಾಮಾನ್ಯರ ಪ್ರಧಾನ ಅಸ್ತ್ರ. ಅದನ್ನು ಬಳಸಿಲಿಕೊಂಡು ಆಗುತ್ತಿರುವ ದೊಡ್ಡ ಅನ್ಯಾಯದ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟಗಳನ್ನು ರೂಪಿಸಬೇಕಿದೆ. ಅನ್ಯಾಯ ಮಾಡಿದವರಿಗೆ ಮತದಾನದ ಮೂಲಕ ತಕ್ಕ ಪಾಠ ಕಳಿಸಬೇಕು ಎಂದು ತಿಳುವಳಿಕೆ ನೀಡಿದರು. ಚುನಾವಣೆ ಮುಗಿದ ಬಳಿಕ ದೊಡ್ಡ ಪ್ರಮಾಣದಲ್ಲಿ ಹೋರಾಟಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದ ಅವರು, ಎಲ್ಲಾ ಕಾಲಕ್ಕೂ ಸಂತ್ರಸ್ತರ ಪರವಾಗಿ ಡಿವೈಎಫ್‌ಐ ಜೊತೆಯಾಗಿ ನಿಂತು ಹೋರಾಟದಲ್ಲಿ ಪಾಲ್ಗೊಳ್ಲಿದೆ ಎಂದು ಮುನೀರ್‌ ಭರವಸೆ ನೀಡಿದರು.

ಈಗಾಗಲೇ ಸಂತ್ರಸ್ತರ ಜಮೀನುಗಳು ಕೆಐಎಡಿಬಿಯ ಹೆಸರಿಗೆ ಮಾಡಿಕೊಳ್ಳಲಾಗಿದ್ದು, ಚುನಾವಣೆಯ ಬಳಿಕ ಹೇಳದೇ ಕೇಳದೆ ಸಂತ್ರಸ್ತರ ಮನೆಗಳು, ಕೃಷಿಭೂಮಿಯ ಮೇಲೆ ಸರಕಾರದ ಬುಲ್ಡೋಜರ್‌ಗಳು ಹರಿಯುವ ಕುರಿತು ಸಂತ್ರಸ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅವರಿಗೆ ಮತದಾನದಲ್ಲಿ ನಿಮ್ಮ ವಿರುದ್ಧ ಯಾವುದೇ ಕೆಲಸ ಮಾಡದ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಳಿಸುವಂತೆ ತಿಳಿ ಹೇಳಿದ್ದು, ಮತದಾನದಿಂದ ವಂಚಿತರಾಗ ದಂತೆ ಮನವಿ ಮಾಡಲಾಗಿದೆ. ಈ ಹೋರಾಟ, ಪೆರಮುದೆ, ಕುತ್ತೆತ್ತೂರಿಗೆ ಮಾತ್ರ ಸೀಮಿತವಾಗಿರದೆ ಜಿಲ್ಲೆಯ ಎಲ್ಲರೂ ಮಾತನಾಡಬೇಕು ಎಂದು  ಮುನೀರ್‌ ಮನವಿ ಮಾಡಿಕೊಂಡ ಮುನೀರ್‌, ಈ ಕುರಿತು ಸಂತ್ರಸ್ತರಿಗೆ ಡಿವೈಎಫ್‌ಐ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.

ಸಭೆಯ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಮುಲ್ಕಿ - ಮೂಡಬಿದ್ರೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ, ಮತದಾನ ಬಹಿಷ್ಕರಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕ. ನಮ್ಮ ಮತದಾನದ ಹಕ್ಕನ್ನು ಚಲಾಯಿಸಿ ನ್ಯಾಯಯುತವಾಗಿ ನಮ್ಮ ಬೇಡಿಕೆಗಳನ್ನು ಪಡೆದುಕೊಳ್ಳಬೇಕು. ಹಿಂದಿನ ಸರಕಾರ ಗ್ರಾಮಸ್ಥರನ್ನು ವಂಚಿಸಿರು ವುದು ಸ್ಪಷ್ಟವಾಗಿದೆ. ಸಂತ್ರಸ್ತರ ನೋವಿನ ಜೊತೆ ನಾವು ಇದ್ದೇವೆ. ಕಷ್ಟಕ್ಕೆ ಸದಾಕಾಲ ಸ್ಪಂದನೆ ನೀಡಲಾಗು ವುದು. ಮುಂದಿನ ದಿನಗಳಲ್ಲಿ ಗ್ರಾಮನಸ್ಥರು ರೂಪಿಸುವ ಯಾವುದೇ ರೀತಿಯ ಹೋರಾಟಗಳಲ್ಲಿ ಅಧಿಕಾರಿವಿ ದ್ದರೂ ಇಲ್ಲದೇ ಇದ್ದರೂ ನಾನು ಭಾಗವಹಿಸಿ ನ್ಯಾಯ ಒದಗಿಸಿಕೊಡುವ ಕೆಲಸಕ್ಕೆ ಬದ್ಧನಾಗಿದ್ದೇನೆ ಎಂದು ಮಿಥುನ್‌ ರೈ ಭರವಸೆ ನೀಡಿದರು.

ಸಭೆಯಲ್ಲಿ ರೈತ ಮುಖಂಡ ರೈತ ಮುಖಂಡ ಯಾದವ ಶೆಟ್ಟಿ ಮಾತನಾಡಿ ಮತದಾನ ಬಹಿಷ್ಕಾರದ ನಿರ್ಧಾರದಿಂದ ಹಿಂದೆ ಸರಿದು ಹಕ್ಕು ಚಲಾಯಿಸುವಂತೆ ಸಂತ್ರಸ್ತರ ಮನವೊಲಿಸಿದರು. ಅಲ್ಲದೆ, ಮಂದಿನ ದಿನಗಳಲ್ಲಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ನಿರ್ವಸಿತ ಸಮಿತಿ ಗೌರವಾಧ್ಯಕ್ಷ ಡೋನಿ ಸುವಾರಿಸ್ ಪ್ರಾತಾವಿಕ ಮಾತನಾಡಿದರು.

ನಿರ್ವಸಿತರ ಹೋರಾಟ ಸಮಿತಿಯ ಅಧ್ಯಕ್ಷ ಸುಧಾಕರ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೋರಾಟಕ್ಕೆ ಡಿವೈಎಫ್‌ಐ, ರೈತಸಂಘ ಮತ್ತು ಮಿಥುನ್‌ ರೈ ಅವರು ಬೆಂಬಲ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಹೋರಾಟ ಸಮಿತಿಗೆ ಆನೆ ಬಲ ಬಂದಂತಾಗಿದೆ. ಹಾಗಾಗಿ ಚುನಾವಣೆ ಬಹಿಷ್ಕಾರದ ನಿರ್ಧಾರವನ್ನು ಹಿಂಪಡೆದು ನಮ್ಮ ಹಕ್ಕುಗಳ ಮೂಲಕವೇ ಪ್ರಥಮ ಹಂತದವಾಗಿ ನಮ್ಮನ್ನು ಕಡೆಗಣಿಸಿದವರಿಗೆ ಉತ್ತರ ನೀಡಲಾಗುವುದು. ಚುನಾವಣೆಯ ಬಳಿಕ ಸಭೆ ನಡೆಸಿ  ಹೋರಾಟದ ಮುಂದಿನ ರೂಪುರೇಷೆಗಳನ್ನು ರಚಿಸಲಾಗುವುದು ಎಂದು ನುಡಿದರು.

ಈ ಸಂದರ್ಭ ಹೋರಾಟ ಸಮಿತಿಯ ಪ್ರಮುಖರಾದ ಸಂಜೀವ ರಾವ್, ಹೆನ್ರಿ ಫೆರ್ನಾಂಡಿಸ್, ಕೇಶವ ಶೆಟ್ಟಿ, ಜೆ.ಕೆ. ಪೂವಪ್ಪ, ರೈತರು, ಸ್ಥಳೀಯ ನಿರ್ವಸಿತರು ಉಪಸ್ಥಿತರಿದ್ದರು.

ಅಸ್ಸಾಂ ಒಎನ್‌ಜಿಸಿ, ಚೆನೈ ಒಎನ್‌ಜಿಸಿಯಲ್ಲಿ ತಮಿಳರಿಗೆ, ಮುಂಬೈ ಇಒಎಬನ್‌ಜಿಸಿ ಘಟಕದಲ್ಲಿ ಮರಾಠಿಗರಿಗೆ ಶೇ. 50 ಮೀಸಲಾತಿ ಇದೆ. ಆದರೆ ನಮ್ಮ ತುಳುನಾಡಿನಲ್ಲಿ ಮಾತ್ರ ನಮಗೆ ಮೀಸಲಾತಿ ಇಲ್ಲ. ಎಲ್ಲಾ ಉದ್ಯೋಗಗಳೂ ಹೊರರಾಜ್ಯದವರಿಗೆ ನೀಡಲಾಗುತ್ತಿದೆ.  ಧರ್ಮ ಯುದ್ಧದ ಹೆಸರಿನಲ್ಲಿ ಒಂದಾಗುವ ಯುವಕರು ಅವರ ಬದುಕಿನ ವಿಚಾರ ಬಂದಾಗ ಒಂಗಾಗುವುದಿಲ್ಲ. ಅದಕ್ಕೆ ಹೋರಾಟ ಸಮಿತಿಗಳು ರಚಿಸಿಕೊಂಡು ಅವರ ಕೈಕಾಲು ಹಿಡಿಯುವ ಸನ್ನಿವೇಶ ಇಲ್ಲಿ ನಿರ್ಮಾಣವಾಗುತ್ತದೆ. ಆಗಲೂ ರಾಜಕೀಯ, ಧರ್ಮವನ್ನು ಮುಂದಿಟ್ಟು ಕೊಂಡು ಯುವಕರು ಇದರಿಂದ ವಿಮುಖರಾಗುತ್ತಾರೆ ಎಂದು ಮುನೀರ್‌ ಕಾಟಿಪಳ್ಳ ವಿಷಾಧ ವ್ಯಕ್ತ ಪಡಿಸಿದರು.

ಶಾಸಕನಾಗಿ ಆಯ್ಕೆಯಾದ ಬಳಿಕ ಎಲ್ಲರನ್ನೂ ಸಮಾನವಾಗಿ ಕಾಣುವ ಜೊತೆ ತನ್ನ ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದಿಸಬೇಕಾಗಿರುವುದು  ಶಾಸಕನ ಪ್ರಥಮ ಕರ್ತವ್ಯ. ಕಳೆದ ಏಳು ವರ್ಷದಿಂದ ಈ ಭಾಗದ ಜನರು ತಮ್ಮಲ್ಲಿದ್ದ ಎಲ್ಲವನ್ನೂ  ಎಂಆರ್‌ಪಿಎಲ್‌ಗೆ ನೀಡಿ ಬರೀ ಕೈಯ್ಯಲ್ಲಿ ನಿಂತಿದ್ದಾರೆ. ಒಂದು ತಿಂಗಳ ಹಿಂದೆಯೇ ಮತದಾನ ಬಹಿಷ್ಕಾರದ ಘೋಷನೆಯನ್ನು ಇಲ್ಲಿನ ಸಂತ್ರಸ್ತರು ಮಾಡಿದ್ದಾರೆ. ಕನಿಷ್ಟ ಸೌಜನ್ಯಕ್ಕೂ ಸಂತ್ರಸ್ತರನ್ನು ಭೇಟಿಯಾಗಿ ಮಾತನಾಡದ ಇವರು ಎಂತಹಾ ಶಾಸಕರು ಎಂದು ಮಿಥುನ್‌ ರೈ ಶಾಸಕರನ್ನು ಪ್ರಶ್ನಿಸಿದ್ದಾರೆ.

Similar News