ಡಿಎಂಕೆಯನ್ನು ಟೀಕಿಸುವ ಆಡಿಯೊ ನಕಲಿ: ತ.ನಾ. ಸಚಿವ ಪಳನಿವೇಲ್ ತ್ಯಾಗರಾಜನ್

Update: 2023-04-27 18:35 GMT

ಚೆನ್ನೈ, ಎ. ೨೭:  ತಾನು ಆಡಳಿತಾರೂಡ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ)ಅನ್ನು ಟೀಕಿಸುವ ಹಾಗೂ ಬಿಜೆಪಿಯನ್ನು ಪ್ರಶಂಸಿಸುವ ವೈರಲ್ ಅಡಿಯೊ ನಕಲಿ ಎಂದು ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಬುಧವಾರ ಪ್ರತಿಪಾದಿಸಿದ್ದಾರೆ.

ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಆಗುತ್ತಿರುವ ಎರಡನೇ ಆಡಿಯೊ ಇದಾಗಿದೆ. ಆದರೆ, ಇದು ನಕಲಿ ಎಂದು ಅವರು ಹೇಳಿದ್ದಾರೆ.

ಎಪ್ರಿಲ್ ೧೯ರಂದು ವೈರಲ್ ಆದ ಮೊದಲನೆ ಆಡಿಯೊದಲ್ಲಿ ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಮತ್ತು ಅಳಿಯ ವಿ. ಶಬರೀಶನ್ ಅವರು ಒಂದು ವರ್ಷದಲ್ಲಿ ದೊಡ್ಡ ಪ್ರಮಾಣದ ಅಕ್ರಮ ಸಂಪತ್ತು ಸಂಗ್ರಹಿಸಿದ್ದಾರೆ ಎಂದು ತ್ಯಾಗರಾಜನ್ ಹೇಳುತ್ತಿರುವುದು ಕೇಳಿಬಂದಿತ್ತು.

ಬಿಜೆಪಿಯ ರಾಜ್ಯ ಘಟಕದ ಮುಖ್ಯಸ್ಥ ಕೆ. ಅಣ್ಣಾಮಲೈ ಅವರು ಮಂಗಳವಾರ ಹಂಚಿಕೊಂಡ ಎರಡನೇ ಆಡಿಯೊದಲ್ಲಿ ರಾಜನ್ ಅವರು ಡಿಎಂಕೆಯ ಕಾರ್ಯನಿರ್ವಹಣೆಯನ್ನು ಟೀಕಿಸುತ್ತಿರುವುದು  ಹಾಗೂ ಬಿಜೆಪಿಯ ‘‘ಒಬ್ಬ ವ್ಯಕ್ತಿ, ಒಂದು ಹುದ್ದೆ’’ ರಚನೆಯನ್ನು ಪ್ರಶಂಸುತ್ತಿರುವುದು ಕೇಳಿ ಬಂದಿದೆ.

ಮೊದಲನೆಯದ್ದು ತಿರುಚಲಾದ ಆಡಿಯೊ ಎಂದು ರಾಜನ್ ಅವರು ಎಪ್ರಿಲ್ ೨೨ರಂದು ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದರು.

Similar News