×
Ad

ಬೆಳ್ಳಾರೆ: ಕೆರೆಯ ಪಾಚಿ ತೆಗೆಯಲು ಹೋದ ಯುವಕ ಕೆರೆಗೆ ಬಿದ್ದು ಮೃತ್ಯು

Update: 2023-04-28 15:52 IST

ಸುಳ್ಯ, ಎ.28: ತೋಟದ ಕೆರೆಯಲ್ಲಿದ್ದ ಪಾಚಿ ತೆಗೆಯಲು ಹೋದ ಯುವಕನೋರ್ವ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ತಾಡಿ ಗ್ರಾಮದಿಂದ ವರದಿಯಾಗಿದೆ.

ಪಾಲ್ತಾಡಿ ಗ್ರಾಮದ ಕಾಪುತಮೂಲೆ ನಿವಾಸಿ ಮೋನಪ್ಪ ನಾಯ್ಕ ಎಂಬವರ ಪುತ್ರ ಗೋಪಾಲಕೃಷ್ಣ ಕೆ. (34) ಮೃತಪಟ್ಟವರು.

ಗೋಪಾಲಕೃಷ್ಣ ಅವರು ಪಾಲ್ತಾಡಿ ಗ್ರಾಮದ ಕಾಪುತಮೂಲೆ ಎಂಬಲ್ಲಿರುವ ತೋಟದ ಕೆರೆಯಲ್ಲಿ ತುಂಬಿದ್ದ ಪಾಚಿ ತೆಗೆಯಲೆಂದು ಗುರುವಾರ ಒಬ್ಬರೇ ತೆರಳಿದ್ದರೆನ್ನಲಾಗಿದೆ. ತುಂಬಾ ಹೊತ್ತಾದರೂ ಅವರು ಹಿಂದಿರುಗಿ ಬಾರದೇ ಇದ್ದುದರಿಂದ ಮನೆಯವರು ಕೆರೆಯ ಬಳಿ ಹೋಗಿ ನೋಡಿದಾಗ ಗೋಪಾಲಕೃಷ್ಣರ ಚಪ್ಪಲಿ ಕೆರೆಯ ನೀರಿನಲ್ಲಿ ತೇಲುತ್ತಿತ್ತೆನ್ನಲಾಗಿದೆ. ಸಂಶಯಗೊಂಡು ಕೆರೆಯಲ್ಲಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ.

ಗೋಪಾಲಕೃಷ್ಣ ಅವರು ಪಡುಬಿದ್ರೆಯ ಅದಾನಿ ಪವರ್ ಲಿಮಿಟೆಡ್ ಯಪಿಎಸ್‌ಎಲ್ ಇಲ್ಲಿ ಇಲೆಕ್ಟ್ರಿಕಲ್ ಮೆಂಟೈನೆನ್ಸ್ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದು, ಗುರುವಾರ ಅವರಿಗೆ ವಾರದ ರಜಾದಿನ. ಈ ಕಾರಣಕ್ಕೆ ಗುರುವಾರ ಮನೆಯಲ್ಲಿ ಇದ್ದ ಅವರು ಕೆರೆಯ ಪಾಚಿ ತೆಗೆಯಲು ಹೋಗಿದ್ದರೆನ್ನಲಾಗಿದೆ.

ಪಾಚಿಯನ್ನು ತೆಗೆಯಲು ಹೋದ ಗೋಪಾಲಕೃಷ್ಣ ಆಕಸ್ಮಿಕವಾಗಿ ಕಾಲುಜಾರಿ ಕೆರೆಯ ನೀರಿಗೆ ಬಿದ್ದು ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Similar News