×
Ad

ಪೂಂಚ್ ಭಯೋತ್ಪಾದಕ ದಾಳಿ: ವಿಚಾರಣೆಗಾಗಿ ಸಮನ್ಸ್ ಪಡೆದಿದ್ದ ವ್ಯಕ್ತಿ ಆತ್ಮಹತ್ಯೆ,ಭುಗಿಲೆದ್ದ ಪ್ರತಿಭಟನೆ

Update: 2023-04-28 23:22 IST
ಶ್ರೀನಗರ,ಎ.28: ಜಮ್ಮುವಿನ ಪೂಂಛ್ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದಿದ್ದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪೊಲೀಸರಿಂದ ಸಮನ್ಸ್ ಪಡೆದಿದ್ದ ಭಾಟಾಧುರಿಯಾನ್ ನಿವಾಸಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು,ಇದು ಗ್ರಾಮದಲ್ಲಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಪ್ರತಿಭಟನೆಗಳಿಗೆ ಕಾರಣವಾಗಿದೆ. ಮುಖ್ತಾರ್ ಹುಸೇನ್ ಶಾ (50) ಆತ್ಮಹತ್ಯೆಗೆ ಮುನ್ನ 9 ನಿಮಿಷ 45 ಸೆಕೆಂಡ್ಗಳ ಅವಧಿಯ ವೀಡಿಯೊವೊಂದನ್ನು ಮಾಡಿದ್ದು,ಇದನ್ನು ಇನ್ನೋರ್ವ ವ್ಯಕ್ತಿ ಚಿತ್ರೀಕರಿಸಿದ್ದು ಸ್ಪಷ್ಟವಾಗಿದೆ. ಶಾ ಗುರುವಾರ ಮೃತಪಟ್ಟಿದ್ದು,ಆತನ ಕುಟುಂಬ ಸದಸ್ಯರು,ಬಂಧುಗಳು ಮತ್ತು ಗ್ರಾಮದ ನಿವಾಸಿಗಳು ಜಮ್ಮು-ಪೂಂಛ್ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ನ್ಯಾಯಕ್ಕಾಗಿ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಆದರೆ ಸೇನೆಯಿಂದ ತಾವು ಯಾವುದೇ ಕಿರುಕುಳವನ್ನು ಎದುರಿಸುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ‘ಸ್ಥಳೀಯ ಪೊಲೀಸರು ವಿಚಾರಣೆಗಾಗಿ ಶಾಗೆ ಸಮನ್ಸ್ ನೀಡಿದ್ದರು. ತನಗೆ ಕಿರುಕುಳ ನೀಡಲಾಗುತ್ತಿದೆ ಮತ್ತು ತಾನು ವೀಡಿಯೊವೊಂದನ್ನು ಮಾಡಿದ್ದೇನೆ ಎಂದು ಆತ ಹೇಳಿದ್ದ. ನಾನು ಪೊಲೀಸರೊಂದಿಗೆ ಮಾತನಾಡುತ್ತೇನೆ ಎಂದು ಆತನಿಗೆ ತಿಳಿಸಿದ್ದೆ. ಆದರೆ ಆತ ಕೇಳಲಿಲ್ಲ. ಆತ ತೀರ ಕೆಟ್ಟ ಸ್ಥಿತಿಯಲ್ಲಿದ್ದ ’ಎಂದು ಪ್ರತಿಭಟನಾಕಾರನೋರ್ವ ಸುದ್ದಿಗಾರರಿಗೆ ತಿಳಿಸಿದ. ಸ್ಥಳೀಯ ಪೊಲೀಸರು ಶಾ ಮನೆಯಲ್ಲಿ ಶೋಧ ಕಾರ್ಯಾಚರಣೆಯನ್ನೂ ನಡೆಸಿದ್ದರು ಎಂದು ಪ್ರತಿಭಟನಾಕಾರರು ತಿಳಿಸಿದರು. ಆರೋಪಗಳನ್ನು ನಿರಾಕರಿಸಿದ ಹಿರಿಯ ಪೊಲೀಸ್ ಅಧಿಕಾರಿಯೋರ್ವರು,‘ಶಾಗೆ ಶಂಕಿತ ಎಂದು ಸಮನ್ಸ್ ನೀಡಿರಲಿಲ್ಲ. ಆತನ ಮನೆ ದಾಳಿ ನಡೆದ ಸ್ಥಳಕ್ಕೆ ಸಮೀಪದಲ್ಲಿದೆ. ವಿಚಾರಣೆಗಾಗಿ ನಾವು ಸುಮಾರು 60 ಜನರನ್ನು ಕರೆಸಿದ್ದೇವೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಶಾ ವಿಚಾರಣೆಗೂ ಹಾಜರಾಗಿರಲಿಲ್ಲ ’ಎಂದು ಹೇಳಿದರು. ತನ್ನ ಮೇಲೆ ಸ್ಥಳೀಯ ಪೊಲೀಸರಿಂದ ಅಥವಾ ಅಧಿಕಾರಿಗಳಿಂದ ಯಾವುದೇ ಒತ್ತಡವಿರಲಿಲ್ಲ ಎಂದು ವೀಡಿಯೊದಲ್ಲಿ ಹೇಳಿರುವ ಶಾ,ತನ್ನ ಕುಟುಂಬಕ್ಕೆ ಕಿರುಕುಳ ನೀಡಬಾರದು ಎಂದು ಕೋರಿಕೊಂಡಿದ್ದಾನೆ.

Similar News