×
Ad

ನದಿ ನನ್ನೊಳಗಿದೆ: ಬ್ರೂಸ್ ಲೀ ಕಲಿಸಿದ ಪಾಠ

Update: 2023-04-29 00:13 IST

ನೀರು ಎಂದೊಡನೆ ನಿಮಗೇನು ನೆನಪಾಗುತ್ತದೆ? ಗಂಗಾ, ಯಮುನಾ, ಬ್ರಹ್ಮಪುತ್ರ, ನೈಲ್, ಕಾಂಗೋ, ಅಮೆಝಾನ್, ಯಾಂಗ್ತ್ಸೆ ನದಿಗಳು ನೆನಪಾಗಬಹುದು. ನದಿಯ ತಡಿಗಳಲ್ಲಿ ಹುಟ್ಟಿದ ನಾಗರಿಕತೆಗಳು ನೆನಪಾಗಬಹುದು. ಮನುಷ್ಯನ ವಿಕಸನದಲ್ಲಿ ನೀರಿನ ಪಾತ್ರ, ಅದರ ಪಾವಿತ್ರ್ಯತೆ, ಜನ-ಜಲ ನಡುವಿನ ಅನ್ಯೋನ್ಯತೆ ಕಣ್ಮುಂದೆ ಹಾದು ಹೋಗಬಹುದು. ಜಲವೆಂದರೆ ಹಳ್ಳಿಯ ಕೆರೆ, ಸಾಹುಕಾರನ ದೊಡ್ಡ ಬಾವಿ, ಗುಡ್ಡದ ಮೇಲೆ ಸಣ್ಣ ತೊರೆಯಾಗಿ ಹುಟ್ಟಿ ಹರಿದು ಅಗಾಧವಾಗುವ ನದಿ, ಮುಸ್ಸಂಜೆ ವೇಳೆಗೆ ಬಂಗಾರದ ಬಟ್ಟೆ ತೊಡುವ ಕಡಲು, ಸಕಲ ನೋವನ್ನೂ ಮರೆಸುವ ಕಿನಾರೆಗಳು ಮನದಲ್ಲಿ ಸುಳಿಯಬಹುದು ಅಥವಾ ಜಲವೆಂದರೆ ಕಡಲ ತೀರದ ಮರಳ ಮೇಲಿನ ನಮ್ಮೆಲ್ಲ ಚಿತ್ರಗಳನ್ನೂ ಅಳಿಸಿ ಹಾಕುವ ಸಾವಿನ ಅಲೆಯೂ ಆಗಬಹುದು. ಆದರೆ ನನಗೆ ನೀರು ಎಂದೊಡನೆ ಥಟ್ಟನೆ ನೆನಪಿಗೆ ಬರುವುದು ಬ್ರೂಸ್ ಲೀ ಮತ್ತು ನೀರಿನ ಕುರಿತು ಆತ ನೀಡಿದ ಪುಟ್ಟ ಸಂದೇಶ: ''ಮನಸ್ಸು ಖಾಲಿ ಮಾಡಿಕೊ. ನೀರಿನಂತೆ ನಿರಾಕಾರನಾಗು, ನಿರೂಪನಾಗು.'' 'ಎಂಟರ್ ದ ಡ್ರ್ಯಾಗನ್'ನಂತಹ ಅದ್ಭುತ ಚಿತ್ರ ನೋಡಿ ಮಾರುಹೋಗಿದ್ದ ದಿನಗಳಲ್ಲಿ ಬ್ರೂಸ್ ಲೀ ನೀಡಿದ ಈ ಪುಟ್ಟ ಸಂದೇಶ ನನ್ನ ಮೇಲೆ ಭಾರೀ ಪರಿಣಾಮವನ್ನೇ ಬೀರಿತ್ತು.

ಬ್ರೂಸ್ ಲೀ ತನ್ನ ಹದಿಮೂರನೇ ವಯಸ್ಸಿಗೆ ಹಾಂಗ್‌ಕಾಂಗ್ ನಗರದಲ್ಲಿ ಚುನ್ ಕುಂಗ್ ಫು ಕಲಿಯಲು ಶುರುಮಾಡಿದ್ದ. ಆತನ ಗುರು ಯಿಪ್ ಮನ್ ಎನ್ನುವವ. ಯಿಪ್ ಮನ್ ಒಬ್ಬ ನುರಿತ ತರಬೇತುದಾರ, ಚತುರ ಬೋಧಕ. ಆತ ಬರಿಯ ದೈಹಿಕ ಕವಾಯತು, ಪಟ್ಟುಗಳನ್ನಷ್ಟೇ ಕಲಿಸದೆ ತನ್ನ ಪಠ್ಯದೊಳಗೆ ತಾವೋ ತತ್ವಶಾಸ್ತ್ರಗಳನ್ನು, ಯಿನ್ ಮತ್ತು ಯಾಂಗ್ ಸಿದ್ಧಾಂತಗಳನ್ನು ನೇದುಬಿಡುತ್ತಿದ್ದ. ಸುತ್ತಮುತ್ತಲಿನ ಪರಿಸರದಿಂದ ಕಲಿತ ದೃಷ್ಟಾಂತಗಳನ್ನು ಹೇಳುತ್ತಿದ್ದ. ಗುರು ಹೇಳಿದ್ದ, ಬೀಸಿದ ಗಾಳಿಗೆ ಎದೆಯೊಡ್ಡಿ ನಿಂತು ನೆಲಕ್ಕುರುಳಿದ ಓಕ್ ಮರ ಮತ್ತು ಬೀಸಿದ ಗಾಳಿಯ ಜೊತೆಗೇ ಉಯ್ಯಿಲೆಯಾಡಿ ಬದುಕುಳಿದ ಬಿದಿರಿನ ಕತೆ ಬ್ರೂಸ್ ಲೀಗೆ ಬಹಳ ಹಿಡಿಸಿತ್ತು.
ಕುಂಗ್ ಫುಗಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟಿದ್ದ ವಿದ್ಯಾರ್ಥಿ ಬ್ರೂಸ್ ಲೀ, ಏನೇ ಹೇಳಿಕೊಟ್ಟರೂ ಬಹುಬೇಗ ಕಲಿತುಬಿಡುತ್ತಿದ್ದ ಜಾಣ. ತರಗತಿಯ ಹೊರಗೂ ನಿರಂತರ ಅಭ್ಯಾಸ ಮಾಡುತ್ತಿದ್ದ. ಈ ಹದಿಹರೆಯದ ಹುಡುಗನ ಬಾಲ್ಯದ ಅಡ್ಡ ಹೆಸರು ಮೌ ಸಿ ಟಿಂಗ್ (ಕುಂತಲ್ಲಿ ಕೂರಲಾರದವನು). ಹದಿಹರೆಯದ ಬ್ರೂಸ್ ಲೀ ಬೆಂಕಿಯ ಚೆಂಡಿನಂತಿದ್ದ. ಆತ ಬೆಂಕಿ ಉಗುಳುವ ಡ್ರ್ಯಾಗನೇ ಆಗಿದ್ದ. ಹೀಗೆ ಅತಿ ಉತ್ಸಾಹಿಯಾದ ಬ್ರೂಸ್ ಲೀಗೆ ಯಿಪ್ ಮನ್ ಸೌಮ್ಯತೆ, ನಮ್ಯತೆ ಮತ್ತು ಹರಿವಿನ ಗುಣ ರೂಢಿಸಿಕೋ ಎಂದು ಸಲಹೆ ನೀಡುತ್ತಿದ್ದ. ಶಕ್ತಿಯಿದ್ದರೆ ಸಾಲದು, ಯುಕ್ತಿಯೂ ಬೇಕೆಂದು ಬೋಧಿಸುತ್ತಿದ್ದ.

ಗುರು ನೀಡಿದ ಸಲಹೆಗಳನ್ನೇನೂ ಬ್ರೂಸ್ ಕಡೆಗಣಿಸುತ್ತಿರಲಿಲ್ಲ. ಆದರೂ ದುಡುಕು ಸ್ವಭಾವ, ಮುಂಗೋಪ ಆತನಿಗೆ ಬಹು ದೊಡ್ಡ ತೊಡಕಾಗಿದ್ದವು. ತಾನು ಪ್ರತೀ ಸಲವೂ ಗೆಲ್ಲಲೇಬೇಕೆಂದುಕೊಂಡಿದ್ದ ಬ್ರೂಸ್ ಲೀಗೆ ಸೌಮ್ಯವಾಗಿದ್ದು ಗೆಲ್ಲುವುದು ಹೇಗೆಂಬುದು ಅರ್ಥವಾಗದ ವಿಚಾರವಾಗಿತ್ತು. ಒಂದು ದಿನ ಯಿಪ್ ಮನ್, ಬ್ರೂಸ್ ಲೀಗೆ ಶಾಂತಚಿತ್ತನಾಗಿರಲು, ತಣ್ಣಗಿರಲು, ಮನಸ್ಸು ನಿರಾಳವಾಗಿಟ್ಟುಕೊಳ್ಳುವಂತೆ ಹೇಳಿಕೊಡುತ್ತಿದ್ದ. ಎದುರಾಳಿಯ ಚಲನೆ ಗಮನಿಸುತ್ತಾ ಬೆನ್ನುಹತ್ತುವುದನ್ನು ಸೂಚಿಸುತ್ತಿದ್ದ. ಏಟಿಗೆ ಪ್ರತಿ ಏಟು ನೀಡುವ ತಂತ್ರ ಮನದಲ್ಲೇ ರೂಪಿಸುತ್ತಾ, ಅತಿ ಬುದ್ಧಿವಂತಿಕೆಯ ಪಾಶದಲ್ಲಿ ಸಿಲುಕುವ ಬದಲು ಅಪರೋಕ್ಷ ಜ್ಞಾನದಿಂದ ಎದುರಾಳಿಯ ನಡೆಗಳಿಗೆ ಪ್ರತಿಕ್ರಿಯಿಸುವ ನಿರ್ಲಿಪ್ತ ಕಲೆಯನ್ನು ಕಲಿಸಲು ಯಿಪ್ ಮನ್ ಪ್ರಯತ್ನಿಸುತ್ತಿದ್ದ. ಬ್ರೂಸ್ ತನ್ನದೇ ಜಾಣತನದಲ್ಲಿ ಮುಳುಗಿ, ತಂತ್ರ-ಪ್ರತಿತಂತ್ರಗಳ ಲೆಕ್ಕಾಚಾರಗಳಲ್ಲಿ ಮಗ್ನನಾದಾಗ, ಅಖಾಡದಲ್ಲಿ ಆತನ ಕಣ್ಣ ರೆಪ್ಪೆಯ ಮೇಲಿಂದ ಬೆವರು ತೊಟ್ಟಿಕ್ಕುವಾಗ ಯಿಪ್ ಮನ್ ಮಧ್ಯೆ ನುಸುಳಿ ''ನಿನ್ನ ಶಕ್ತಿ ಸಂರಕ್ಷಿಸಿಕೋ, ಸ್ವಾಭಾವಿಕವಾಗಿರು, ನಿನ್ನ ಸ್ವಭಾವ ಮೀರಿ ಆಕ್ರಮಣ ಮಾಡಬೇಡ'' ಎಂದು ಪದೇ ಪದೇ ಹೇಳುತ್ತಿದ್ದ. ಕಿವಿಮಾತು ಕೇಳದ ಬ್ರೂಸ್ ಲೀಗೆ ಕೊನೆಗೊಮ್ಮೆ ''ಸಾಕು, ನಿಲ್ಲಿಸು ಅಭ್ಯಾಸ. ಈ ವಾರ ಅಭ್ಯಾಸ ಬೇಡ. ಮನೆಗೆ ಹೋಗು. ನನ್ನ ಮಾತುಗಳನ್ನು ಮತ್ತೊಮ್ಮೆ ಯೋಚಿಸು'' ಎಂದು ಸೌಮ್ಯವಾಗಿಯೇ ಹೇಳಿ ಸುಮ್ಮನಾದ ಯಿಪ್ ಮನ್.

ಅಭ್ಯಾಸ ನಿಲ್ಲಿಸು ಎಂಬ ಮಾತು ಬ್ರೂಸ್ ಲೀಗೆ ಉಸಿರಾಡುವುದನ್ನು ನಿಲ್ಲಿಸು ಎಂಬ ಮಾತಿನಷ್ಟೇ ಕಠೋರವಾಗಿತ್ತು. ಮನೆಗೆ ಬಂದ ಬ್ರೂಸ್ ಅಭ್ಯಾಸವನ್ನೇನೂ ನಿಲ್ಲಿಸಲಿಲ್ಲ. ಧ್ಯಾನ ಮಾಡಿದ, ಏಕಾಂತದಲ್ಲಿ ಕುಳಿತು ಗುರು ಹೇಳಿದ ಕಿವಿಮಾತನ್ನು ಅರ್ಥ ಮಾಡಿಕೊಳ್ಳಲು ಹೋರಾಟ ನಡೆಸಿದ.
ಹತಾಶನಾದ ಆತ ಒಂದು ದಿನ ತನ್ನ ಸಣ್ಣ ದೋಣಿಯೊಂದಿಗೆ ಹಾಂಗ್ ಕಾಂಗ್ ಕಡಲಿಗೆ ಇಳಿದ. ಅಂದು ಅವನಿಗೆ ಯೋಚಿಸಲು ಸಾಕಷ್ಟು ಸಮಯವಿತ್ತು. ವಿಶಾಲವಾದ ಸಾಗರ ಶಾಂತವಾಗಿತ್ತು. ಹಾಯಿದೋಣಿ ತೇಲುತ್ತಿತ್ತು. ಹೀಗೆ ಸಮಯ ವ್ಯರ್ಥ ಮಾಡಲು ಆತನಿಗೆ ಮನಸ್ಸಿರಲಿಲ್ಲ. ಹಾಯಿಸುವುದನ್ನು ನಿಲ್ಲಿಸಿ, ಸುಮ್ಮನೆ ಕುಳಿತು, ಅಲೆಗಳಿಗೆ ಇಷ್ಟ ಬಂದೆಡೆ ದೋಣಿಯನ್ನು ಕರೆದೊಯ್ಯಲು ಬಿಟ್ಟು ಅಭ್ಯಾಸದ ಗಳಿಗೆಗಳನ್ನು ಮೆಲುಕು ಹಾಕತೊಡಗಿದ. ಎಲ್ಲಿ ತಪ್ಪು ಮಾಡುತ್ತಿದ್ದೇನೆ ಎಂದು ಯೋಚಿಸತೊಡಗಿದ. ಗುರುವಿನ ಸಲಹೆಗಳನ್ನೇಕೆ ಅರ್ಥ ಮಾಡಿಕೊಳ್ಳಲಾಗುತ್ತಿಲ್ಲ ಎಂದು ತಲೆ ಕೆಡಿಸಿಕೊಂಡ. ಆತನ ಹತಾಶೆ ತಾರಕಕ್ಕೇರಿತು. ಆವೇಶದಿಂದ ದಕ್ಷಿಣ ಚೀನಾ ಕಡಲಿಗೆ ತನ್ನೆಲ್ಲಾ ಬಲದಿಂದ ಗುದ್ದತೊಡಗಿದ. ಇದ್ದಕ್ಕಿದ್ದ ಹಾಗೆ ಆತನಿಗೆ ಏನೋ ಹೊಳೆಯಿತು. ಮುಷ್ಟಿ ಸಡಿಲಿಸಿ ತನ್ನ ತೊಯ್ದ ಕೈಗಳನ್ನೊಮ್ಮೆ ನೋಡಿಕೊಂಡ.
 
ನಾನು ನೀರಿಗೆ ಗುದ್ದಿದೆ, ಆದರೆ ಅದು ನೋವಿನಿಂದ ನರಳಲಿಲ್ಲ, ಘಾಸಿಗೊಳ್ಳಲಿಲ್ಲ. ಮತ್ತೊಮ್ಮೆ ನನ್ನೆಲ್ಲಾ ಶಕ್ತಿ ಬಿಟ್ಟು ಗುದ್ದಿದೆ, ಆದರೆ ಅದು ಗಾಯಗೊಳ್ಳಲಿಲ್ಲ. ಕೋಪದಿಂದ ಮುಷ್ಟಿಯಲ್ಲಿ ಬಂಧಿಸಲು ಪ್ರಯತ್ನಿಸಿದೆ, ಹಿಡಿತಕ್ಕೆ ಸಿಗಲಿಲ್ಲ. ಜಗತ್ತಿನಲ್ಲೇ ಮೃದುವಾದ ಜಲ ಒಂದು ಬಟ್ಟಲಿನಲ್ಲಿಟ್ಟಾಗ ದುರ್ಬಲ, ಅಸಹಾಯಕವಾಗಿ ಕಾಣುತ್ತದೆ. ಆದರೆ ವಾಸ್ತವದಲ್ಲಿ ಇದೇ ಜಲ ಜಗತ್ತಿನ ಅತ್ಯಂತ ಕಠಿಣ ವಸ್ತುಗಳನ್ನೂ ಭೇದಿಸಿ, ಕತ್ತರಿಸಬಹುದು. ಹೌದು, ನಾನು ನೀರಿನಂತಾಗಬೇಕು. ಇದಲ್ಲವೆ ನನ್ನ ಗುರು ಹೇಳಿಕೊಟ್ಟ ಕುಂಗ್ ಫು ತತ್ವ! ಅದೇ ಕ್ಷಣದಲ್ಲಿ ಹಕ್ಕಿಯೊಂದು ಆಗಸದಲ್ಲಿ ಹಾರಿಹೋಯಿತು. ನೀರಿನಲ್ಲಿ ಅದರ ಪ್ರತಿಬಿಂಬ ಮೂಡಿ ಮಾಯವಾಯಿತು. ನಾನು ನನ್ನ ಎದುರಾಳಿಗಳ ಮುಂದೆ ನಿಂತಾಗ ನನ್ನ ಆಲೋಚನೆಗಳು, ಭಾವನೆಗಳು ನೀರಿನಲ್ಲಿ ಮೂಡಿ ಮಾಯವಾದ ಪ್ರತಿಬಿಂಬದಂತಿರಬೇಕಲ್ಲವೆ? ಯಾವುದಕ್ಕೂ ಅಂಟಿಕೊಳ್ಳದೆ, ಅಡ್ಡಿಯಾಗದೆ ಇರುವುದು ಹೇಗೆ? ತನ್ನನ್ನು ತಾನು ನಿಯಂತ್ರಿಸಿಕೊಳ್ಳುವ ಮೊದಲು ತನ್ನನ್ನು ತಾನು ಸ್ವೀಕರಿಸಬೇಕು ಎಂದು ಗುರು ಯಿಪ್ ಮನ್ ನೀಡಿದ ಪಾಠಗಳ ಸಂಪೂರ್ಣ ಅರಿವು ಬ್ರೂಸ್ ಲೀಯಲ್ಲಿ ಮೂಡಿತು. ಈ ಅರಿವು ಮೂಡಿದ ಮರುಕ್ಷಣವೇ ಬ್ರೂಸ್ ಲೀಯಲ್ಲಿದ್ದ ಸಂಶಯಗಳು ಕೊನೆಯಾಗಿದ್ದವು. ಹೀಗೆ ಬ್ರೂಸ್ ಲೀ ಜಾಡು ಹಿಡಿದು ಲಾವೋತ್ಸು ಬೋಧನೆಗಳಲ್ಲಿ ಒಮ್ಮೆ ಕಣ್ಣಾಡಿಸಿದರೆ ತಿಳಿಯುವ ವಿಷಯ, ತಾವೋ ಮತ್ತು ಜಲ ಸಮಾನಾರ್ಥಕ ಪದಗಳೆಂಬುದು. ನಾವು ಜಲ ಮತ್ತು ಜಲವೇ ನಾವು. ತಾಯಿ ಗರ್ಭಧರಿಸಿದ ನಂತರ ನಮ್ಮ ಜೀವನದ ಮೊದಲ ಒಂಭತ್ತು ತಿಂಗಳು ನಾವು ಬದುಕುವುದು ಮತ್ತು ಆರೈಕೆ ಮಾಡಲ್ಪಡುವುದು ಆಮ್ನಿಯೋಟಿಕ್ ದ್ರವದಿಂದ. ಈ ಆಮ್ನಿಯೋಟಿಕ್ ದ್ರವವೆಂಬ ಜೀವಜಲ ತಾಯಿಯಿಂದ ನಮಗೆ ಹರಿಯುವ ಬೇಷರತ್ ಪ್ರೀತಿ. ಜನನದ ನಂತರ ನಾವೇನು? ಶೇ. 75ರಷ್ಟು ಜಲವಷ್ಟೆ. ನಮ್ಮ ಮೆದುಳಲ್ಲಿ ಶೇ. 85 ನೀರಿದೆ. ಮಿಕ್ಕಿದ್ದು ಕೂಡ ಬಿಗಿದ ಜಲದ ಸ್ನಾಯುಗಳಷ್ಟೆ.

ನಾವು ಲಘುವಾಗಿ ಪರಿಗಣಿಸುವ ಜಲಶಕ್ತಿಯ ನಿಗೂಢ ಮಾಂತ್ರಿಕ ಸ್ವಭಾವದ ಕುರಿತು ಆಲೋಚಿಸಿ. ನೀರನ್ನು ಹಿಡಿಯಲು, ಹಿಸುಕಲು ಪ್ರಯತ್ನಿಸಿದರೆ ಅದು ನುಣುಚಿಕೊಳ್ಳುತ್ತದೆ. ಹರಿವ ನದಿಯಲ್ಲಿ ಮನಬಿಚ್ಚಿ, ಮೈ ಸಡಿಲಿಸಿ ಕೈ ಅಥವಾ ಕಾಲು ಇಳಿಬಿಡಿ. ಜಲ ನಿಮ್ಮ ಅನುಭವಕ್ಕೆ ಸಂಪೂರ್ಣ ದಕ್ಕುತ್ತದೆ. ಹರಿಯದೆ ನಿಂತು ಬಿಟ್ಟರೆ ನಾರುತ್ತದೆ, ಹರಿಯಲು ಬಿಟ್ಟರೆ ಶುದ್ಧವಾಗುತ್ತದೆ. ಜಲ ಎಂದಿಗೂ ಉನ್ನತ ಜಾಗಗಳನ್ನು ಅರಸುವುದಿಲ್ಲ. ಎತ್ತರದ ಸ್ಥಳಗಳಿಗೆ ಏರುವುದಿಲ್ಲ. ಕೆಳಮಟ್ಟಕ್ಕೆ ಯಾವುದೇ ಅಳುಕಿಲ್ಲದೆ ಹರಿದುಬಿಡುತ್ತದೆ. ಸರೋವರ, ನದಿ, ತೊರೆ, ಹೊಳೆ, ಕಡಲಾಗಿ ಆವಿಯಾಗಿ ಮತ್ತೆ ಮಳೆಯಾಗುವ ಅದರ ಹರಿವಲ್ಲಿ ಯಾವ ನಕ್ಷೆಗಳಿಲ್ಲ, ನೆಚ್ಚಿನ ನೆಂಟರಿಲ್ಲ, ವಿಶೇಷ ಪ್ರೀತಿಪಾತ್ರರಿಲ್ಲ. ಪ್ರಾಣಿ, ಪಕ್ಷಿ, ಗಿಡ, ಮರಗಳಿಗೆ ಜೀವಸಾರ, ಜೀವನಾಂಶ ನೀಡುವ ಇರಾದೆ ಅದಕ್ಕಿಲ್ಲ. ಹೊಲಗದ್ದೆಗಳಿಗೆ ಒದಗಬೇಕು, ಬಾಯಾರಿದವನ ದಾಹ ನೀಗಿಸಬೇಕು, ಉತ್ಸಾಹಿಗಳಿಗೆ ಈಜಲು ಅವಕಾಶ ಕಲ್ಪಿಸಿಕೊಡಬೇಕೆಂಬ ಯೋಜನೆಗಳಿಲ್ಲ. ತನ್ನೊಳಗಿನ ಅಪೂರ್ವ ಭಾವಕ್ಕೆ ಅಂಕಿತವನ್ನಿಡಲು ಎಂದೂ ನೀರು ಮುಂದಾಗುವುದಿಲ್ಲ.

ಎಲ್ಲಕ್ಕಿಂತ ನಿರ್ಬಲವಾಗಿದ್ದೂ, ಕಲ್ಲನ್ನು ಗೆಲ್ಲಬಲ್ಲ ನೀರಿನ ಅಸಾಧಾರಣತೆಯ ಬಗ್ಗೆ ಲಾವೋ ಬರೆದ. ಹೆನ್ರಿ ಡೇವಿಡ್ ಥೋರು ತನ್ನ ಪ್ರಸಿದ್ಧ ಕೃತಿ 'ವಾಲ್ಡೆನ್'ನ್ನು ದಿನನಿತ್ಯ ವಾಲ್ಡೆನ್ ಸರೋವರವನ್ನು ನೋಡುತ್ತಲೇ ಬರೆದ. ವಿಲಿಯಮ್ ವರ್ಡ್ಸ್ ವರ್ಥ್ ದುಡ್ಡೋನ್ ನದಿಯ ಕುರಿತು ಸಾನೆಟ್ ಸರಣಿಯನ್ನೇ ಬರೆದ. ಕೋಲ್ ರಿಡ್ಜ್ ಪ್ರಸಿದ್ಧ 'ಕುಬ್ಲಾ ಖಾನ್' ಕವಿತೆಯಲ್ಲಿ ಪ್ರಕೃತಿಯ ಅಗಾಧ ಶಕ್ತಿ, ಅಪರಿಮಿತ ಬಲ ಹಾಗೂ ತೀರದ ಉತ್ಸಾಹದ ಪ್ರತೀಕವಾಗಿ ಆಲ್ಫ್ ನದಿಯ ಉಲ್ಲೇಖವಿದೆ. ಮಿಸ್ಸಿಸಿಪ್ಪಿನದಿಯ ರಭಸದ ಅನುಭವವಿದ್ದ ಕವಿ ಟಿ.ಎಸ್. ಎಲಿಯಟ್ "The river is within us, the sea is all about us’ ಎಂದ. ಯೀಟ್ಸ್ ನಗರದ ಬೀದಿಗಳಲ್ಲಿ ಓಡಾಡುವಾಗಲೂ "The Lake Isle of Innisfree''ಯನ್ನು ನೆನಪಿಸಿಕೊಂಡ. ಥೇಮ್ಸ್ ನದಿಯಿಂದ ಶುರುವಾಗಿ ಕಾಂಗೊ ನದಿಯಲ್ಲಿ ಅಂತ್ಯವಾಗುವ ಮಾರ್ಲೋವಿನ 'ಹಾರ್ಟ್ ಆಫ್ ಡಾರ್ಕ್‌ನೆಸ್' ಪಯಣ ಯಾರು ತಾನೆ ಮರೆಯಲು ಸಾಧ್ಯ? 'ಓಲ್ಡ್ ಮ್ಯಾನ್ ಆ್ಯಂಡ್ ದ ಸೀ' ಕಾದಂಬರಿಯಲ್ಲಿ ಕಡಲೇ ನಾಯಕನಲ್ಲವೇ? ಹೀಗೆ ನೀರು ಅಚ್ಚರಿ ಮೂಡಿಸುತ್ತಲೇ ಇದೆ. ಜಗತ್ತಿನ ಅಂತರ್ ಬಂಧವನ್ನು ತೋರಿಸುತ್ತಲೇ ಇದೆ. ನನ್ನಂತಿರು ಎಂದು ಸಾರುತ್ತಲೇ ಇದೆ.

Similar News