×
Ad

‘‘ನನಗೀಗ ಜೀವನದಲ್ಲಿ ಜಿಗುಪ್ಸೆ ಬಂದಿದೆ!’’

ಗಾದಿ May

Update: 2023-04-29 09:35 IST

ನಮಸ್ಕಾರ. ನಾನು ನಿಮ್ಮ ಈ ಹೊತ್ತಿಗೆ ಮೂಡುವ ಗೆಳೆಯ ‘‘ಚುನಾವಣಾ ಸಮೀಕ್ಷೆ’’.

ಈವತ್ತು ಸಾರ್ವಜನಿಕವಾಗಿ ನನ್ನ ಮಾನಹಾನಿ ಆಗುತ್ತಿರುವುದನ್ನು ಕಂಡು, ರೋಸಿಹೋಗಿ, ತಡೆಯಲಾಗದೇ ನಾನು ತಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ದಯವಿಟ್ಟು ಪರಾಂಬರಿಸಿ.

ರಾಜಕೀಯ ಶಾಸ್ತ್ರದಲ್ಲಿ 1948-52ರ ನಡುವೆ ಚಲಾವಣೆಗೆ ಬಂದ ನಾನು, ಮೂಲತಃ ಒಂದು ಚುನಾವಣೆಯ ಚಾರಿತ್ರಿಕ-ಭೌಗೋಳಿಕ ಹಿನ್ನೆಲೆ, ಮತದಾನದ ಚರಿತ್ರೆ, ಸಂಬಂಧಿತ ಅಂಕಿಸಂಖ್ಯೆಗಳು ಮತ್ತಿತರ ಡೇಟಾಗಳನ್ನು ಆಧರಿಸಿಕೊಂಡು ಒಂದು ಚುನಾವಣೆಯ ಸಾಧ್ಯತೆಗಳನ್ನು ಪರಿಶೀಲಿಸುವ, ವಿಶ್ಲೇಷಿಸುವ ಅಧ್ಯಯನ ವಿಧಾನವೆಂಬ ಮರ್ಯಾದೆ ಹೊಂದಿದ್ದೆ. ಸಾರ್ವಜನಿಕ ಅಭಿಪ್ರಾಯಗಳನ್ನು ಸಂಖ್ಯಾಶಾಸ್ತ್ರೀಯ ಪರಿಕರಗಳನ್ನು ಬಳಸಿ, ನಿರ್ಣಯಾತ್ಮಕವಾಗಿ ಹಿಗ್ಗಿಸಿ ನೋಡಬಲ್ಲ ಸಾಮರ್ಥ್ಯ ನನಗಿತ್ತು. 1977ರ ಹೊತ್ತಿಗೆ, ದಿಲ್ಲಿ ಸ್ಕೂಲ್ ಆಫ್ ಇಕನಾಮಿಕ್ಸ್‌ನಲ್ಲಿ ಪಿಎಚ್‌ಡಿ ಪಡೆದಿರುವ ಪ್ರಣಯ್ ರಾಯ್ ಮೊದಲಬಾರಿಗೆ ನನಗೆ ಭಾರತದಲ್ಲಿ ಅವಕಾಶಗಳನ್ನು ತೆರೆದುಕೊಟ್ಟರು. 1984ರ ಬಳಿಕ ಭಾರತದಲ್ಲಿ ಚುನಾವಣೆಗಳ ಮುನ್ನ ನನ್ನ ಕುರಿತು ಒಂದು ರೀತಿಯ ಕ್ರೇಝ್ ಶುರುವಾಗಿತ್ತು.

ಅಲ್ಲಿಂದೀಚೆಗೆ ಸತತವಾಗಿ, ನನ್ನ ಮಾನಹಾನಿ ಪ್ರಯತ್ನಗಳು ಎಲ್ಲೆಂದರಲ್ಲಿ ನಡೆಯುತ್ತಾ ಬಂದಿವೆ. ಹಾದಿ ಬೀದಿಗಳಲ್ಲಿ ಹುಟ್ಟಿಕೊಂಡ ಟೆಲಿವಿಷನ್ ಚಾನೆಲ್‌ಗಳಲ್ಲಿ, ಪತ್ರಿಕೆಗಳಲ್ಲಿ ‘‘ಸೆಫಾಲಜಿಸ್ಟು’’ಗಳೆಂಬ ಹೆಸರಿಟ್ಟುಕೊಂಡು ಮೂತಿ ತೋರಿಸಿದವರೆಲ್ಲ ನನ್ನನ್ನು ಸಾರ್ವಜನಿಕರ ಕಣ್ಣಲ್ಲಿ ನಗೆಪಾಟಲಿಗೀಡುಮಾಡುತ್ತಾ ಬಂದಿದ್ದಾರೆ.

ನಾನಂತಲ್ಲ ಯಾವುದೇ ಒಂದು ಸಮೀಕ್ಷೆ ನಡೆಸುವಾಗ ಅದನ್ನು ಸಾಮಾನ್ಯವಾಗಿ ಆರು ಮಾನದಂಡಗಳ ಆಧಾರದಲ್ಲಿ ವಿನ್ಯಾಸ ಮಾಡಿರುತ್ತಾರೆ.

1. ಒಂದು ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಜನಸಮುದಾಯ

2. ಒಂದು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿರುವ ವಿಶ್ಲೇಷಣೆಯ ಮಾನದಂಡ

3. ಒಂದು ಸ್ಯಾಂಪಲ್ ಗಾತ್ರವನ್ನು ನಿರ್ಧರಿಸಿದ ಹಿನ್ನೆಲೆಯಲ್ಲಿರುವ ತೀರ್ಮಾನಗಳು

4. ಸ್ಯಾಂಪಲ್ ಆಯ್ಕೆಯ ಮಾಹಿತಿಯುತ ಪ್ರಕ್ರಿಯೆ

5. ಸಮೀಕ್ಷೆಯಲ್ಲಿ ಪ್ರತಿಕ್ರಿಯೆಯ ದರ ಮತ್ತು ಪ್ರತಿಕ್ರಿಯಿಸದವರ ಡೇಟಾವನ್ನು ಬಳಸಿಕೊಳ್ಳುವ ರೀತಿಯ ಬಗ್ಗೆ ಸ್ಪಷ್ಟ ಕಲ್ಪನೆ

6. ಸೂಕ್ತವಾದ ಅಂದಾಜಿಸುವ ಪ್ರಕ್ರಿಯೆಗಳ ಆಯ್ಕೆ

ಈ ವಿನ್ಯಾಸವನ್ನಾಧರಿಸಿ ಒಂದು ಸಮೀಕ್ಷೆಯ ಚೌಕಟ್ಟು ಸಿದ್ಧಗೊಂಡ ಬಳಿಕ, ಅದನ್ನು ಕಾರ್ಯರೂಪಕ್ಕೆ ತಂದು, ಕ್ಷೇತ್ರಕಾರ್ಯದಲ್ಲಿ ಸಿಕ್ಕ ಡೇಟಾವನ್ನು ಪರಿಶೀಲಿಸಿ, ಸಂಸ್ಕರಿಸಿ, ಬಳಿಕ ಅದನ್ನು ಒಂದು ಹಿಗ್ಗುಲೆಕ್ಕಾಚಾರಕ್ಕೆ ಒಳಪಡಿಸಿ, ಎಲ್ಲ ಮೂಲದ್ರವ್ಯಗಳೊಂದಿಗೆ ಪಾರದರ್ಶಕವಾಗಿ, ಮಿತಿಗಳ ಸಮೇತ ಸಾರ್ವಜನಿಕಗೊಳಿಸುವುದು ಕ್ರಮ.

ಆದರೆ ಈಗೀಗ ಅದನ್ನೆಲ್ಲ ಯಾರೂ ಹೇಳುವವರು-ಕೇಳುವವರು ಇಲ್ಲ. ಸಮೀಕ್ಷೆಯ ವಿನ್ಯಾಸ ಏನು? ಯಾರು ಡೇಟಾ ಸಂಗ್ರಹಿಸಿದರು? ಹೇಗೆ ಸಂಗ್ರಹಿಸಿದರು? ಯಾವ ಸ್ಯಾಂಪಲ್? ಹೇಗೆ ವಿಶ್ಲೇಷಿಸಲಾಯಿತು? ಡೇಟಾ ಗೌಪ್ಯತೆಗೆ ಏನು ಕ್ರಮ? ಮಾಹಿತಿಯುತ ಅನುಮತಿ ಸಹಿತ ಪಡೆದ ಡೇಟಾವೆ?... ಎಂಬಿತ್ಯಾದಿ ಯಾವ ಪೂರ್ವಾಪರಗಳೂ ಇಲ್ಲದೆ, ಫಲಜ್ಯೋತಿಷ್ಯ ಹೇಳುವವರಂತೆ ‘‘ಇಂತಹ ರಾಜಕೀಯ ಪಕ್ಷಕ್ಕೆ ಇಷ್ಟು ಸ್ಥಾನಗಳು’’ ಎಂಬ ಫಲಿತಾಂಶ ಕೊಡಲಾಗುತ್ತಿದೆ.

ಇಂತಹ ಫಲಜ್ಯೋತಿಷ್ಯಗಳು ಸಹಜವಾಗಿಯೇ ಅಂತಿಮ ಫಲಿತಾಂಶಕ್ಕಿಂತ ಭಿನ್ನವಾದ, ಕೆಲವೊಮ್ಮೆ ಸಂಪೂರ್ಣ ತಿರುವುಮುರುವಾದ ಹಲವು ಪ್ರಕರಣಗಳನ್ನು ಕಂಡಬಳಿಕ, ಈ ಸಮೀಕ್ಷೆ ಮಾಡುತ್ತೇವೆಂದು ಹೇಳಿಕೊಳ್ಳುವ ಜನ ನನ್ನ ಪರಿಸ್ಥಿತಿಯನ್ನು ಇನ್ನೂ ಚಿಂತಾಜನಕಗೊಳಿಸಿದ್ದಾರೆ. ಟಿಆರ್‌ಪಿ ಕಾರಣಕ್ಕಾಗಿ ಹತ್ತು ಟೆಲಿವಿಷನ್ ಚಾನೆಲ್‌ಗಳವರು, ಮತ್ತೆ ಹತ್ತು ಪ್ರಿಂಟ್ ಮೀಡಿಯಾದವರು, ಈಗೀಗ ಇನ್ನೂ ಹತ್ತು ವೆಬ್ ಮೀಡಿಯಾದವರು ಎಲ್ಲರೂ ತರಹೇವಾರಿ ಸಮೀಕ್ಷೆ ಫಲಿತಾಂಶಗಳನ್ನು ಹೊತ್ತು ತಂದಾಗ, ಉಳಿದ ಕೆಲವು ಬುದ್ಧಿವಂತ ಮೀಡಿಯಾಗಳವರು ‘‘ಸಮೀಕ್ಷೆಗಳ ಸಮೀಕ್ಷೆ’’ ‘‘ಮದರ್ ಆಫ್ ಸಮೀಕ್ಷೆ’’ ‘‘ಫಾದರ್ ಆಫ್ ಸಮೀಕ್ಷೆ’’ ಅಂತೆಲ್ಲ ಶುರು ಹಚ್ಚಿಕೊಂಡಿದ್ದಾರೆ. ಸಮೀಕ್ಷೆಗಳ ಸರಾಸರಿ ಲೆಕ್ಕಾಚಾರವನ್ನೇ ಅಂತಿಮ ಸಮೀಕ್ಷೆ ಎಂದು ಬಿಂಬಿಸುವ ಬದ್ಧಿವಂತಿಕೆ!.

ಇಷ್ಟು ಮಾತ್ರವಲ್ಲ, ಇದಕ್ಕೆ ಎಕ್ಸಿಟ್ ಪೋಲ್ ಎಂಬ ಮತ್ತೊಂದು ಅಧ್ವಾನವನ್ನೂ ಸೇರಿಸಿಕೊಳ್ಳಲಾಗಿದೆ. ಸಿನೆಮಾ ನೋಡಿ ಹೊರಬಂದವರಲ್ಲಿ ಸಿನೆಮಾ ಹೇಗಿತ್ತೆಂದು ಕೇಳಿದಷ್ಟೇ ಸಲೀಸಾಗಿ ಚುನಾವಣೆ ಬಗ್ಗೆ ಕೇಳಿ, ಫಲಿತಾಂಶ ಹೊರಗೆಡಹುವ ಈ ಅಧ್ವಾನಕ್ಕೂ ಈಗ ಎಕ್ಸಿಟ್ ಪೋಲ್‌ಗಳ ಸರಾಸರಿ, ಪ್ರಿ-ಪೋಲ್ ಮತ್ತು ಎಕ್ಸಿಟ್ ಪೋಲ್‌ಗಳ ಸರಾಸರಿ ಎಂದೆಲ್ಲ ನೂರಾರು ಅವತಾರಗಳು ಕಾಣಿಸಿಕೊಂಡಿವೆ.

ಇಷ್ಟೇ ಆಗಿದ್ದರೆ, ಹೋಗಲಿ ಬಿಡಿ, ಏನೋ ಚಟ ಎಂದು ಸುಮ್ಮನಿರಬಹುದಿತ್ತು. ಆದರೆ, ನಮ್ಮ ಡಿಯರ್ ಮೀಡಿಯಾ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ನನ್ನ ಮರ್ಯಾದೆಹರಣವನ್ನು ಕ್ರಿಮಿನಲೈಸ್ ಗೊಳಿಸಿದೆ. ರಾಜಕೀಯ ಪಕ್ಷಗಳೊಂದಿಗೆ ಅನೈತಿಕ ಹೊಂದಾಣಿಕೆ ಮಾಡಿಕೊಂಡು, ಅವರಿಗೆ ಬೇಕಾದಂತೆ ತಿರುಚಿದ ಸಮೀಕ್ಷೆ ಫಲಿತಾಂಶಗಳನ್ನು ಪ್ರಕಟಿಸುವ ಮೂಲಕ, ತಮಗೆ ಬೇಕಾದ ರಾಜಕೀಯ ಪಕ್ಷಕ್ಕೆ ಚುನಾವಣಾ ಪ್ರಚಾರಕಾಲದಲ್ಲಿ ಅನುಕೂಲ ಮಾಡಿಕೊಡುವ, ಒಂದಕ್ಕಿಂತ ಹೆಚ್ಚು ಹಂತದ ಚುನಾವಣೆಗಳಿರುವಾಗ, ಮುಂದಿನ ಹಂತದ ಚುನಾವಣೆಗಳ ಮೇಲೆ ಪ್ರಭಾವ ಬೀರುವ ಆಟಗಳೆಲ್ಲ ಶುರುವಾಗಿವೆ. ಬೆಕ್ಕು ಕಣ್ಣುಮುಚ್ಚಿಕೊಂಡು ಕದ್ದು ಹಾಲು ಕುಡಿದರೆ ಯಾರಿಗೂ ಕಾಣಿಸುತ್ತಿಲ್ಲ ಅಂದುಕೊಳ್ಳುತ್ತದೆಯಂತೆ. ಹಾಗಿದೆ ಇವರ ವ್ಯವಹಾರ. ಚುನಾವಣಾ ಆಯೋಗದಂತಹ ನಿಯಂತ್ರಕ ಸಂಸ್ಥೆಗಳೂ ಕೂಡ ಇದನ್ನೆಲ್ಲ ಕಣ್ಣಿದ್ದೂ ಕಾಣದಂತೆ ಕುಳಿತಿರುವುದನ್ನು ಕಂಡರೆ, ಅವರೂ ಈ ಷಡ್ಯಂತ್ರದ ಭಾಗವೇ ಎಂದು ಕೆಲವೊಮ್ಮೆ ನನಗೆ ಅನ್ನಿಸತೊಡಗಿದೆ.

ಸಾಮಾನ್ಯವಾಗಿ ಮಾಧ್ಯಮಗಳು, ಜನಪ್ರತಿನಿಧಿಗಳು ಎಲ್ಲ ಸಮಾಜದ ಪ್ರತಿಬಿಂಬಗಳೇ. ಜನ ಹೇಗಿದ್ದಾರೋ, ಅವರ ಪ್ರತಿಬಿಂಬಗಳೂ ಹಾಗೇ ಕಾಣಿಸುತ್ತವೆ. ಜನ ಇಷ್ಟೊಂದು ಸಮಾಜ ವಿಮುಖರಾಗಿರುವುದು, ಅದಕ್ಕನುಗುಣವಾಗಿ ಈ ಪ್ರತಿಬಿಂಬಗಳೂ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸಮಾಜ ವಿರೋಧಿಯಾಗಿರುವುದು ನನ್ನನ್ನು ತೀರಾ ಖಿನ್ನಗೊಳಿಸಿವೆ. ನೀವೆಲ್ಲರೂ ಸೇರಿ ನನ್ನನ್ನು ಈ ಪರಿ ದುರ್ಬಳಕೆ ಮಾಡಿಕೊಂಡಿರುವುದರಿಂದಾಗಿ ನನಗೆ ಜೀವನದಲ್ಲೇ ಜಿಗುಪ್ಸೆ ಬಂದಿದೆ. ದಯವಿಟ್ಟು ಇನ್ನಾದರೂ ನನ್ನನ್ನು ಮರ್ಯಾದೆಯಿಂದ, ವೃತ್ತಿಪರವಾಗಿ ಬದುಕಲು ಅವಕಾಶ ಮಾಡಿಕೊಡಿ.

ತಾವು ನನ್ನ ಈ ಅಹವಾಲನ್ನು ಗಂಭೀರವಾಗಿ ಪರಿಗಣಿಸುವಿರಿ ಎಂಬ ಕ್ಷೀಣ ಆಸೆಯೊಂದಿಗೆ, ನನ್ನ ಈ ಪತ್ರವನ್ನು ಕೊನೆಗೊಳಿಸುತ್ತಿದ್ದೇನೆ. ನಾನೇನಾದರೂ ಈ ಜಿಗುಪ್ಸೆ, ಬೇಸರಗಳಿಂದ ಕೊರಗಿ, ರೋಗಗ್ರಸ್ತಗೊಂಡು ಅಕಾಲಿಕ ಸಾವಿಗೆ ತುತ್ತಾದರೆ ನೀವೆಲ್ಲರೂ ನನ್ನ ಸಾವಿಗೆ ಹೊಣೆಗಾರರು ಎಂಬುದನ್ನು ಮರೆಯಬೇಡಿ.

ಇತೀ ತಮ್ಮ ಹತಾಶ ವಿಶ್ವಾಸಿ

“ಚುನಾವಣೆ ಸಮೀಕ್ಷೆ“

Similar News