ತುಷ್ಟೀಕರಣ ರಹಿತ ಅಭಿವೃದ್ಧಿ ನೀತಿಯೇ ಮುಸ್ಲಿಂ ಸಮುದಾಯಕ್ಕೆ ಶ್ರೀರಕ್ಷೆ: ಡಾ. ಸೈಯದ್ ಝಾಫರ್ ಇಸ್ಲಾಂ
ಮಂಗಳೂರು: ತುಷ್ಟೀಕರಣದ ನೀತಿಯೊಂದಿಗೆ ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯವನ್ನು ಮತ ಬ್ಯಾಂಕ್ ಆಗಿ ಪರಿವರ್ತಿಸಿ ಅಭಿವೃದ್ಧಿಯ ಆಯಾಮಗಳಿಂದ ಹೊರಗಿಟ್ಟಿರುವುದೇ ಮುಸ್ಲಿಂ ಸಮುದಾಯ ಹಿಂದುಳಿಯಲು ಕಾರಣ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ಸೈಯದ್ ಝಾಫರ್ ಇಸ್ಲಾಂ ಹೇಳಿದ್ದಾರೆ.
ನಗರದಲ್ಲಿ ಬಿಜೆಪಿಯ ಮಾಧ್ಯಮ ಕೇಂದ್ರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ತುಷ್ಟೀಕರಣದ ಈ ನೀತಿಗೆ ವಿರುದ್ಧವಾಗಿ ಪ್ರಧಾನಿ ನರೇಂದ್ರ ಮೋದಿಯವರು ’ಸಬ್ ಕಾ ಸಾಥ್- ಸಬ್ ಕಾ ವಿಕಾಸ್’ ಎನ್ನುವ ಕಲ್ಪನೆಯೊಂದಿಗೆ ಕಳೆದ 9 ವರ್ಷಗಳಲ್ಲಿ ಹಮ್ಮಿಕೊಂಡಿರುವ ಜನಪರ ಮತ್ತು ಅಂತ್ಯೋದಯದ ಯೋಜನೆಗಳ ಸಿಂಹಪಾಲು ಮುಸ್ಲಿಂ ಸಮುದಾಯಕ್ಕೆ ದೊರಕಿರುವುದನ್ನು ಮನಗಂಡ ಮುಸ್ಲಿಂ ಸಮುದಾಯ ಬಿಜೆಪಿದೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರಕಾರದ ಬಹುಪಾಲು ಯೋಜನೆಗಳ ಸಿಂಹಪಾಲು ಮುಸ್ಲಿಂ ಸಮುದಾಯಕ್ಕೆ ದೊರಕಿದೆ ಎನ್ನಲು ನನಗೆ ಹೆಮ್ಮೆಯೆನಿಸುತ್ತದೆ. ಮೋದಿ ನೇತೃತ್ವದ ಕೇಂದ್ರ ಸರಕಾರವು ತಾರತಮ್ಯವಿಲ್ಲದೆ ದೇಶವಾಸಿಗಳ ಸರ್ವಾಂಗೀಣ ಅಭಿವೃದ್ಧಿಯ ಕಾರ್ಯಸೂಚಿಯೊಂದಿಗೆ ಭಾರತವನ್ನು ವಿಶ್ವದಲ್ಲೇ ಅಗ್ರಮಾನ್ಯ ರಾಷ್ಟ್ರವನ್ನಾಗಿ ಮಾಡುವ ಮಹೋನ್ನತ ಉದ್ದೇಶ ಹೊಂದಿದೆ. ಈ ದಿಕ್ಕಿನಲ್ಲಿ ಸಂಯೋಜಿತವಾಗಿ ಆಡಳಿತ ನಡೆಸಬೇಕಾದರೆ ಕರ್ನಾಟಕದಲ್ಲೂ ಬಿಜೆಪಿ ಸರಕಾರವೇ ಇರುವುದು ಅವಶ್ಯಕ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲಾ ವಕ್ತಾರ ಜಗದೀಶ್ ಶೇಣವ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ರತನ್ ರಮೇಶ್ ಪೂಜಾರಿ, ಬಿಜೆಪಿ ಮುಖಂಡರಾದ ಸಂಜಯ್ ಪ್ರಭು ಉಪಸ್ಥಿತರಿದ್ದರು.