ಬೆಂಗಳೂರು: ಡೆತ್‍ನೋಟ್‍ ಬರೆದಿಟ್ಟು ಬಹುಮಹಡಿ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

Update: 2023-04-30 11:51 GMT

ಬೆಂಗಳೂರು, ಎ.30: ವಿದ್ಯಾರ್ಥಿನಿಯೊಬ್ಬಳು ಬಹುಮಹಡಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆಯಿಶಾ ಬಿ.ಆರ್.ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದು, ಈಕೆ  ರವಿವಾರ ಬೆಳಗ್ಗೆ ಬಿನ್ನಿ ಮಿಲ್ ಸಮೀಪದ ಪೊಲೀಸ್ ಕ್ವಾರ್ಟರ್ಸ್ ನ ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. 

ಭೀಮೇಶ್ ಎಂಬ ಯುವಕನನ್ನು ಆಯಿಶಾ ಪ್ರೀತಿಸುತ್ತಿದ್ದಳು. ಆದರೆ ಇವರಿಬ್ಬರ ಪ್ರೀತಿಗೆ ಮನೆಯವರ ಒಪ್ಪಿಗೆ ಇರಲಿಲ್ಲ. ಮನೆಯವರು ಪ್ರೀತಿಯನ್ನು ನಿರಾಕರಿಸಿದ್ದರಿಂದ ತನ್ನ ಪ್ರಿಯಕರನ ಮೊಬೈಲ್ ನಂಬರ್ ಕೈ ಮೇಲೆ ಬರೆದುಕೊಂಡು ತನ್ನ ಸಾವಿನ ವಿಚಾರ ಆತನಿಗೆ ತಿಳಿಸುವಂತೆ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.

ಇನ್ನೂ, 'ನನ್ನ ಸಾವಿಗೆ ಕಾರಣ ಯಾರೂ ಅಲ್ಲ. ಈ ಜೀವನದ ಮೇಲೆ ಜಿಗುಪ್ಸೆ ಬಂದ ಕಾರಣದಿಂದ ನಾನೇ ಸ್ವತಃ ಈ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಡೆತ್‍ನೋಟ್‍ನಲ್ಲಿ ಉಲ್ಲೇಖ ಮಾಡಿದ್ದಾಳೆ ಎಂದು ತಿಳಿದುಬಂದಿದ್ದು, ಪೊಲೀಸರು ಈ ಸಂಬಂಧ ತನಿಖೆ ಕೈಗೊಂಡಿದ್ದಾರೆ.

Similar News