ಸಂಘಪರಿವಾರದ ಕಟ್ಟು ಕತೆ: 'ದಿ ಕೇರಳ ಸ್ಟೋರಿ' ಸಿನೆಮಾದ ವಿರುದ್ಧ ಪಿಣರಾಯಿ ವಿಜಯನ್‌ ವಾಗ್ದಾಳಿ

"ಗೃಹ ಸಚಿವಾಲಯವೇ ಲವ್‌ ಜಿಹಾದ್‌ ಇಲ್ಲವೆಂದು ಹೇಳಿದೆ"

Update: 2023-04-30 13:18 GMT

ತಿರುವನಂತಪುರಂ: ಕೇರಳದಿಂದ 32 ಸಾವಿರ ಮಹಿಳೆಯರು ಮತಾಂತರವಾಗಿ ಐಸಿಸ್‌ ಗೆ ಸೇರಿದ್ದಾರೆ ಎಂದು ಪ್ರತಿಪಾದಿಸುವ ಹಿಂದಿ ಚಿತ್ರ ʼದಿ ಕೇರಳ ಸ್ಟೋರಿʼ (The Kerala Story) ವಿರುದ್ಧ ಕೇರಳ ಸಿಎಂ ಪಿಣರಾಯಿ ವಿಜಯನ್‌ (Pinarayi Vijayan) ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಕೇರಳದ ಕುರಿತಂತೆ ತಪ್ಪು ಕಲ್ಪನೆಗಳನ್ನು ಚಿತ್ರವು ಪ್ರಚಾರ ಮಾಡುತ್ತಿದೆ ಎಂದು ಹೇಳಿರುವ ಅವರು, ಟ್ರೇಲರ್‌ ನ ಮೊದಲ ನೋಟದಲ್ಲಿ ಕೋಮು ಧ್ರುವೀಕರಣವನ್ನು ಸೃಷ್ಟಿಸುವ ಮತ್ತು ರಾಜ್ಯದ ವಿರುದ್ಧ ದ್ವೇಷದ ಪ್ರಚಾರವನ್ನು ಹರಡುವ ಸಲುವಾಗಿ "ಉದ್ದೇಶಪೂರ್ವಕವಾಗಿ ನಿರ್ಮಿಸಲಾಗಿದೆ" ಎಂದು ತೋರುತ್ತದೆ ಎಂದು ಹೇಳಿದ್ದಾರೆ.

‘ಲವ್ ಜಿಹಾದ್’ ವಿಚಾರವನ್ನು ತನಿಖಾ ಸಂಸ್ಥೆಗಳು, ನ್ಯಾಯಾಲಯಗಳು ಮತ್ತು ಕೇಂದ್ರ ಗೃಹ ಸಚಿವಾಲಯವು ತಿರಸ್ಕರಿಸಿದ್ದರೂ, ಕೇರಳಕ್ಕೆ ಸಂಬಂಧಿಸಿದಂತೆ ಅದನ್ನು ಚಿತ್ರದ ಮುಖ್ಯ ವಿಷಯವನ್ನಾಗಿಸಿ ರಾಜ್ಯವನ್ನು ಪ್ರಪಂಚದ ಮುಂದೆ ಅವಮಾನಿಸುವಂತೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕೋಮುವಾದದ ವಿಷಬೀಜ ಬಿತ್ತುವ ಮೂಲಕ ರಾಜ್ಯದಲ್ಲಿ ಧಾರ್ಮಿಕ ಸೌಹಾರ್ದತೆಯನ್ನು ಹಾಳು ಮಾಡಲು ಸಂಘಪರಿವಾರ ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.

ಕೇರಳದಲ್ಲಿ ಸಂಘಪರಿವಾರದ ವಿಭಜನೆಯ ರಾಜಕೀಯ ಕೆಲಸ ಮಾಡುತ್ತಿಲ್ಲವಾದ್ದರಿಂದ, ಯಾವುದೇ ಸತ್ಯ ಅಥವಾ ಪುರಾವೆಗಳಿಲ್ಲದ "ನಕಲಿ ಕಥೆ" ಆಧಾರಿತ ಚಲನಚಿತ್ರದ ಮೂಲಕ ಅದನ್ನು ಹರಡಲು ಪ್ರಯತ್ನಿಸುತ್ತಿದೆ ಎಂದು ವಿಜಯನ್ ಹೇಳಿದ್ದಾರೆ.

ಸಿನಿಮಾದ ಟ್ರೇಲರ್‌ನಲ್ಲಿ ಕೇರಳದಲ್ಲಿ 32,000 ಮಹಿಳೆಯರನ್ನು ಮತಾಂತರ ಮಾಡಿ ಇಸ್ಲಾಮಿಕ್ ಸ್ಟೇಟ್‌ನ ಸದಸ್ಯರನ್ನಾಗಿ ಮಾಡಲಾಗಿದೆ ಎಂಬ ಆರೋಪವನ್ನು ನೋಡಿದ್ದೇವೆ. ಈ ಬೋಗಸ್ ಕಥೆ ಸಂಘಪರಿವಾರದ ಸುಳ್ಳು ಕಾರ್ಖಾನೆಯ ಉತ್ಪನ್ನವಾಗಿದೆ ಎಂದು ಸಿಎಂ ತಮ್ಮ ಹೇಳಿಕೆಯಲ್ಲಿ ಹೇಳಿದ್ದಾರೆ.

ರಾಜ್ಯದಲ್ಲಿ ಮತೀಯವಾದವನ್ನು ಹರಡಲು ಮತ್ತು ಒಡಕುಗಳನ್ನು ಸೃಷ್ಟಿಸಲು ಸಿನಿಮಾವನ್ನು ಬಳಸುವುದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಸಮರ್ಥನೆಯಾಗುವುದಿಲ್ಲ ಎಂದು ಹೇಳಿದ ಅವರು, “ಇದು ಕೋಮುವಾದವನ್ನು ಹರಡಲು ಮತ್ತು ರಾಜ್ಯದಲ್ಲಿ ಜನರನ್ನು ವಿಭಜಿಸಲು ಇರುವ ಪರವಾನಗಿ ಅಲ್ಲ" ಎಂದು ಹೇಳಿದ್ದಾರೆ.

ಮಲಯಾಳಿಗಳು ಇಂತಹ ನಡೆಗಳನ್ನು ತಿರಸ್ಕರಿಸಬೇಕು ಮತ್ತು ಸುಳ್ಳು ಪ್ರಚಾರದ ಮೂಲಕ ಸಮಾಜದಲ್ಲಿ ಕೋಮುಗಲಭೆ ಹರಡುವ ಪ್ರಯತ್ನಗಳ ವಿರುದ್ಧ ಜಾಗರೂಕರಾಗಿರಬೇಕು ಎಂದು ಕರೆ ನೀಡಿದ ಅವರು, ಸಮಾಜ ವಿರೋಧಿ ಚಟುವಟಿಕೆಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸುದೀಪ್ತೋ ಸೇನ್ ಬರೆದು ನಿರ್ದೇಶಿಸಿರುವ ಈ ಚಿತ್ರವು ಕೇರಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ "ಸುಮಾರು 32,000 ಮಹಿಳೆಯರ" ಕಥೆಗಳನ್ನು ಹೊರ ಜಗತ್ತಿಗೆ ತೋರಿಸುತ್ತದೆ ಎಂದು ಪ್ರತಿಪಾದಿಸಿ, ಚಿತ್ರಿಸಲಾಗಿದೆ. ಈ ಮಹಿಳೆಯರು ಮತಾಂತರವಾಗಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಚಿತ್ರದಲ್ಲಿ ಪ್ರತಿಪಾದಿಸಲಾಗಿದೆ. ಬಲಪಂಥೀಯ ಈ ಚಿತ್ರದ ಪರವಾಗಿ ವ್ಯಾಪಕ ಪ್ರಚಾರ ನಡೆಸುತ್ತಿದ್ದು, ಈ ಚಿತ್ರ ಬಿಡುಗಡೆಯಾಗಬಾರದೆಂಬ ಆಗ್ರಹವೂ ಕೇಳಿ ಬಂದಿವೆ.

Similar News