×
Ad

ಮಲ್ಪೆ: ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಸಂಭ್ರಮಿಸಿದ ಜನತೆ

Update: 2023-04-30 20:53 IST

ಮಲ್ಪೆ, ಎ.30: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಆಚರಿಸುವಂತೆ ಚುನಾವಣಾ ಆಯೋಗ ನೀಡಿರುವ ಸಲಹೆಯು ಮಲ್ಪೆ ಬೀಚ್‌ನಲ್ಲಿ ಅನಾವರಣಗೊಂಡಿತು.

ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಕುರಿತು ರವಿವಾರ ಸಂಜೆ ಮಲ್ಪೆಬೀಚ್‌ನಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯ ಕ್ರಮದಲ್ಲಿ ನೃತ್ಯಗಾರರ ಜೊತೆ ಪ್ರೇಕ್ಷಕರೂ ಹೆಜ್ಜೆ ಹಾಕಿ ಸಂಭ್ರಮಿ ಸಿದರು. ಎಂಐಟಿ ವಿದ್ಯಾರ್ಥಿಗಳುಗಳು ವಂದೇ ಮಾತರಂ, ಮೈ ಭಾರತ್ ಹೂಂ ಹಾಗೂ ಮತದಾನ ಜಾಗೃತಿ ಕುರಿತು ಕಿರು ನಾಟಕ ಪ್ರದರ್ಶಿಸಿದರು.

ಉಡುಪಿ ಬನ್ನಂಜೆಯ ಹಾಸ್ಟೆಲ್‌ನ ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಉಡುಪಿ ತಾಲ್ಲೂಕು ಪಂಚಾಯತ್ ಸಿಬ್ಬಂದಿಗಳು ನೃತ್ಯ ಪ್ರದರ್ಶಿಸಿದರು. ಮತದಾನ ಜಾಗೃತಿ ಕುರಿತು ಯಕ್ಷಗಾನ ಕಾರ್ಯಕ್ರಮ ಹಾಗೂ ಅಗ್ನಿ ಸಾಹಸ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿ ಪ್ರಸನ್ನ ಎಚ್., ಉಡುಪಿ ನಗರಸಭೆಯ ಪೌರಾಯುಕ್ತ ರಮೇಶ್ ನಾಯಕ್, ಡಯಟ್ ಪ್ರಾಂಶುಪಾಲ ಗೋವಿಂದ ಮಡಿವಾಳ, ಎಂಐಟಿ ಕಾಲೇಜಿನ ಪ್ರೊ.ಬಾಲಕೃಷ್ಣ ಮದ್ದೋಡಿ ಮೊದಲಾದವರು ಉಪಸ್ಥಿತರಿದ್ದರು. ಬೀಚ್‌ನಲ್ಲಿ ಸೇರಿದ್ದ ಸಾವಿರಾರು ಮಂದಿ ಕಾರ್ಯಕ್ರಮ ವೀಕ್ಷಿಸಿದರು.

ಕಾರ್ಯಕ್ರಮದ ಪ್ರಯುಕ್ತ ಬೀಚ್‌ನ ಉದ್ದಕ್ಕೂ ಮತದಾನ ಜಾಗೃತಿ ಫಲಕಗಳನ್ನು ಅಳವಡಿಸಲಾಗಿತ್ತು. ನನ್ನ ಮತ ನನ್ನ ಹೆಮ್ಮೆ ಸಾರುವ ಸೆಲ್ಫಿ ಪಾಯಿಂಟ್‌ನಲ್ಲಿ ಸಾರ್ವಜನಿಕರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ನೈತಿಕ ಮತದಾನ ಮಾಡುವ ಕುರಿತು ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ನಡೆಯಿತು.

Similar News