×
Ad

ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ಮುಳುಗಿ ಪಿಯುಸಿ ವಿದ್ಯಾರ್ಥಿ ಮೃತ್ಯು

Update: 2023-04-30 21:24 IST

ಉಪ್ಪಿನಂಗಡಿ: ಇಲ್ಲಿನ ಕೆಂಪಿಮಜಲು  ಎಂಬಲ್ಲಿನ ನೇತ್ರಾವತಿ ನದಿಯ  ಸನ್ಯಾಸಿ ಕಯ ಎಂಬ ಪ್ರದೇಶದಲ್ಲಿ  ಮೀನು ಹಿಡಿಯಲೆಂದು  ಹೋದ  ದ್ವಿತೀಯ ಪಿಯುಸಿ ವಿದ್ಯಾರ್ಥಿ ರೂಪೇಶ್ (17) ನೀರಿನಲ್ಲಿ ಮುಳುಗಿ  ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ.

ಬಜತ್ತೂರು ಗ್ರಾಮದ ಪೆಲತ್ರೋಡಿ ಮನೆ ನಿವಾಸಿ ಓಡಿಯಪ್ಪ ಎಂಬವರ ಪುತ್ರ ರೂಪೇಶ್ ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ.

ಕಬಡ್ಡಿ ಆಟಗಾರನಾಗಿಯೂ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ವಿದ್ಯಾರ್ಥಿಯಾಗಿದ್ದ ಈತ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ. ಶನಿವಾರ ಇಳಂತಿಲ ಗ್ರಾಮದ ಕಟ್ಟೆಚ್ಚಾರ್ ಎಂಬಲ್ಲಿನ ತನ್ನ ಸಂಬಂಧಿಕರ ಮನೆಗೆ ಬಂದಿದ್ದ ಈತ ತನ್ನ ಸಂಬಂಧಿ ಅಖಿಲೇಶ್ ಎಂಬಾತನೊಂದಿಗೆ ರವಿವಾರ ನೇತ್ರಾವತಿ ನದಿಯ ಸನ್ಯಾಸಿ ಕಯದಲ್ಲಿ ಮೀನು ಹಿಡಿಯಲೆಂದು ಹೋದಾತ ಈಜು ಬಾರದೆ  ನೀರಿನಲ್ಲಿ ಮುಳುಗಿ  ಅಸ್ವಸ್ಥನಾಗಿದ್ದ. ಜೊತೆಗಿದ್ದ ಅಖಿಲೇಶ್ ಆತನನ್ನು ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಲು ಮುಂದಾದರಾದರೂ ಆಸ್ಪತ್ರೆಯಲ್ಲಿ  ಆತ ಮೃತಪಟ್ಟಿರುವುದಾಗಿ ಘೋಷಿಸಲಾಯಿತು.

ಮೃತರ ತಾಯಿ  ಗೋಪಿ ನೀಡಿದ ದೂರನ್ನು ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Similar News