ರಾಜ್ಯ ಬಿಜೆಪಿಗೆ ಮತ್ತೆ ಜನಾದೇಶ: ಗೋಪಾಲಕೃಷ್ಣ ಅಗರ್ವಾಲ್ ವಿಶ್ವಾಸ
ಮಂಗಳೂರು, ಮೇ 1: ಸುಸ್ಥಿರ, ಸುವ್ಯವಸ್ಥಿತ ಮತ್ತು ಸಮನ್ವಯದ ಅಭಿವೃದ್ಧಿಗಾಗಿ ಕರ್ನಾಟಕದಲ್ಲಿ ಮತ್ತೆ ಬಿಜೆಪಿಯ ಡಬಲ್ ಇಂಜಿನ್ ಸರಕಾರಕ್ಕೆ ಜನಾದೇಶ ಸಿಗಲಿದೆ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೋಪಾಲಕೃಷ್ಣ ಅಗರ್ವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತವನ್ನು 5 ಟ್ರಿಲಿಯನ್ ಡಾಲರ್ ಗಾತ್ರದ ಅರ್ಥವ್ಯವಸ್ಥೆಯನ್ನಾಗಿ ಅಭಿವೃದ್ಧಿಪಡಿಸುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಮಹತ್ವಾಕಾಂಕ್ಷೆಗೆ ಸಾಥ್ ನೀಡಲು ರಾಜ್ಯಗಳಲ್ಲಿ ಬಿಜೆಪಿಯ ಸರಕಾರಗಳೇ ಅಧಿಕಾರಕ್ಕೆ ಬರಬೇಕು. ಇತರ ಪಕ್ಷಗಳ ಸರಕಾರಗಳಿದ್ದಲ್ಲಿ ಯೋಜನೆಗಳ ಅನುಷ್ಠಾನ ನನೆಗುದಿಗೆ ಬೀಳಲಿದೆ. ಜನತೆಗೆ ಸೌಲಭ್ಯಗಳು ದೊರಕದಂತಾಗುತ್ತದೆ ಎಂದರು.
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅನುಷ್ಠಾನದಲ್ಲಿ ಕೇಂದ್ರ ಸರಕಾರದಿಂದ ದೊರಕುವ 6,000 ರೂ.ಗೆ ರಾಜ್ಯ ಸರಕಾರವು ಮತ್ತೆ 4,000 ರೂ. ಸೇರಿಸಿ ಕೊಡುತ್ತದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ರಾಜ್ಯದಲ್ಲಿ ಶೇ.94ರಷ್ಟು ಅನುಷ್ಠಾನವಾಗಿದ್ದರೆ ಕಮ್ಯುನಿಸ್ಟ್ ಆಡಳಿತವಿರುವ ಕೇರಳದಲ್ಲಿ ಕೇವಲ ಶೇ.56ರಷ್ಟು ಮಾತ್ರ ಜಾರಿಯಾಗಿದೆ. ಅದೇ ರೀತಿ ಹರ್‌ಘರ್ ಜಲ್ ಯೋಜನೆ ಕರ್ನಾಟಕದಲ್ಲಿ ಶೇ.57, ಕೇರಳದಲ್ಲಿ ಶೇ.47, ಬಂಗಾಳದಲ್ಲಿ ಶೇ.32 ಅನುಷ್ಠಾನವಾಗಿದದ್ದರೆ, ಗುಜರಾತ್‌ನಲ್ಲಿ ಶೇ.100ರಷ್ಟು ಅನುಷ್ಠಾನಗೊಂಡಿದೆ ಎಂದು ಗೋಪಾಲಕೃಷ್ಣ ಅಗರ್ವಾಲ್ ತಿಳಿಸಿದರು.
ರಾಜ್ಯದ ಸಿರಿಧಾನ್ಯಗಳನ್ನು ಜಾಗತಿಕ ಮಾರುಕಟ್ಟೆಗೆ ಒಯ್ದಿರುವುದು ಬಿಜೆಪಿ ಸರಕಾರದ ಪ್ರಗತಿಪರ ಕೃಷಿ ನೀತಿಗೆ ಸಾಕ್ಷಿಯಾಗಿದೆ. ಕರಾವಳಿ ಕರ್ನಾಟಕವು ಶಿಕ್ಷಣ, ಬ್ಯಾಂಕಿಂಗ್ ಮತ್ತಿತರ ಕ್ಷೇತ್ರಗಳಲ್ಲಿ ದೇಶದಲ್ಲೇ ನಂ.1 ಆಗಿದ್ದು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಪುಲ ಅವಕಾಶಗಳನ್ನು ಹೊಂದಿದೆ ಎಂದು ಹೇಳಿದರು.
ನಮ್ಮ ಪ್ರಣಾಳಿಕೆ ಪ್ರಕಾರ ಬಿಪಿಎಲ್ ಕುಟುಂಬಗಳಿಗೆ ಯುಗಾದಿ, ಚೌತಿ ಹಬ್ಬ ಮತ್ತು ದೀಪಾವಳಿಗೆ 3 ಉಚಿತ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಪ್ರತಿವರ್ಷ ಒದಗಿಸಲಿದ್ದೇವೆ. ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯಕರ ಆಹಾರ ಒದಗಿಸಲು ಪ್ರತಿ ಮಹಾನಗರ ಪಾಲಿಕೆಯ ವಾರ್ಡ್‌ಗಳಲ್ಲಿ ಅಟಲ್ ಆಹಾರ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ರಾಜ್ಯ ಮಾಧ್ಯಮ ಪ್ಯಾನೆಲಿಸ್ಟ್ ಆನಂದ ಗುರುಮೂರ್ತಿ, ಆರ್ಥಿಕ ಪ್ರಕೋಷ್ಟದ ಶಾಂತಾರಾಂ ಶೆಟ್ಟಿ, ರಾಜೇಶ್ ರಾವ್ ಹಾಗೂ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ರತನ್ ರಮೇಶ್ ಪೂಜಾರಿ ಉಪಸ್ಥಿತರಿದ್ದರು.