ಕಾಂಗ್ರೆಸ್ ಘೋಷಣೆಗಳ ಬಗ್ಗೆ ಅನುಮಾನ ಬೇಡ: ಅಮೃತ ಶೆಣೈ
ಉಡುಪಿ : ಕಾಂಗ್ರೆಸ್ ಘೋಷಣೆಗಳ ಕುರಿತಂತೆ ಯಾರಿಗೂ ಯಾವುದೇ ಬಗೆಯ ಅನುಮಾನ ಬೇಡ. ಈ ಹಿಂದೆಯೂ ಕಾಂಗ್ರೆಸ್ ಕ್ಷೀರಭಾಗ್ಯ, ಅನ್ನಭಾಗ್ಯ, ಮಕ್ಕಳಿಗೆ ಶೂ, ಸಾಕ್ಸ್, ಇಂದಿರಾ ಕ್ಯಾಂಟೀನ್ ಮೂಲಕ ಹಲವು ಯೋಜನೆಗಳನ್ನು ಜಾರಿಗೆ ತಂದಿತ್ತು ಎಂದು ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಅಮೃತ್ ಶೆಣೈ ಹೇಳಿದ್ದಾರೆ.
ಮಂಗಳವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರ ಈಡೇರಿಸಲಾಗ ದಂತಹ ಘೋಷಣೆಗಳನ್ನು ನೀಡುವ ಮೂಲಕ ಜನರನ್ನು ವಂಚಿಸುತ್ತಿದೆ. ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಸರಕಾರ ಎಲ್ಲರ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ರೂ.ಜಮೆ ಮಾಡುವ ಘೋಷಣೆ ಏನಾಯಿತು ಎಂದವರು ಪ್ರಶ್ನಿಸಿದರು.
ಈಡೇರಿಸಲಾಗದ ಘೋಷಣೆಗಳ ಮೂಲಕ ಹಣಕೊಟ್ಟು ವಸ್ತುಗಳನ್ನು ಕೊಂಡುಕೊಳ್ಳುವವರು ದುಬಾರಿ ಬೆಲೆ ತೆರಬೇಕಾದೀತು. ಭ್ರಷ್ಟಾಚಾರದಿಂದ ಕೂಡಿರುವ ಬಿಜೆಪಿ ಯೋಜನೆಗಳ ಗುಣಮಟ್ಟ ಕೂಡ ಕಳಪೆಯಾಗಿರುತ್ತದೆ. ಕಾಂಗ್ರೆಸ್ ಪಕ್ಷ ಕಮಿಷನ್ ದಂಧೆಗೆ ಕಡಿವಾಣ ಹಾಕಲಿದೆ ಎಂದರು.
ತಜ್ಞರೊಂದಿಗೆ ಸಮಾಲೋಚನೆ: ಆರ್ಥಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಕಾಂಗ್ರೆಸ್ ಗ್ಯಾರಂಟಿಗಳ ಘೋಷಣೆ ಮಾಡಿದೆ. ಈ ಬಗ್ಗೆ ಅಪಪ್ರಚಾರ ಮಾಡುವುದು ಸಲ್ಲದು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಘೋಷಣೆ ಗಳನ್ನು ಖಂಡಿತಾ ಈಡೇರಿಸಲಿದೆ ಎಂದವರು ಹೇಳಿದರು.
ಕಳೆದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಎಷ್ಟನ್ನು ಮೂರೂವರೆ ವರ್ಷಗಳ ಆಡಳಿತದಲ್ಲಿ ಈಡೇರಿಸಿದ್ದಾರೆ ಎಂದು ಪ್ರಶ್ನಿಸಿದ ಅಮೃತ ಶೆಣೈ, ಬಿಜೆಪಿಯ ಈ ಬಾರಿಯ ಪ್ರಣಾಳಿಕೆ ಕೂಡಾ ಬೋಗಸ್ ಆಗಿದ್ದು, ಜನ ಅದನ್ನು ನಂಬುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಕೀರ್ತಿ ಶೆಟ್ಟಿ ಅಂಬಲಪಾಡಿ, ಮಹಾಬಲ ಕುಂದರ್, ವಾಮನ ಬಂಗೇರ, ಸುರೇಶ್ ಶೆಟ್ಟಿ ಬನ್ನಂಜೆ, ಅಹಮದ್, ಉಪೇಂದ್ರ, ಭಾಸ್ಕರ ದೇವಾಡಿಗ ಉಪಸ್ಥಿತರಿದ್ದರು.