ಕೇಂದ್ರದ ಎಲ್ಲ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಯಲ್ಲಿ ನಡೆಸಿ: ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಆಗ್ರಹ

Update: 2023-05-02 17:39 GMT

ಚೆನ್ನೈ, ಮೇ 2: ಕೇಂದ್ರ ಸರಕಾರದ ಎಲ್ಲ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆಗ್ರಹಿಸಿದ್ದಾರೆ. 

ದೇಶದ ಎಲ್ಲ ರಾಜ್ಯಗಳ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಸಿಗಬೇಕು ಎಂದು ಅವರು ಹೇಳಿದ್ದಾರೆ. 

ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಪರೀಕ್ಷೆಯನ್ನು ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಅಲ್ಲದೆ, ಇತರ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ಕೇಂದ್ರ ಈ ವರ್ಷ ಎಪ್ರಿಲ್‌ನಲ್ಲಿ ತೆಗೆದುಕೊಂಡ ನಿರ್ಧಾರವನ್ನು ಸ್ಟಾಲಿನ್ ಅವರು ಸ್ವಾಗತಿಸಿದ್ದಾರೆ.

‘‘ಕೇಂದ್ರ ಸರಕಾರದ ಎಲ್ಲ ಪರೀಕ್ಷೆಗಳನ್ನು ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವಂತೆ ಒತ್ತಾಯಿಸಿ ನಾವು ಧ್ವನಿ ಎತ್ತಲಿದ್ದೇವೆ’’ ಎಂದು ಸ್ಟಾಲಿನ್ ಸೋಮವಾರ ‘ಉಂಗಲಿಲ್ ಒರುವನ್’ ವೀಡಿಯೊ ಸರಣಿಯಲ್ಲಿ ಹೇಳಿದ್ದಾರೆ. ‘‘ಆದಷ್ಟು ಬೇಗ ಕೇಂದ್ರ ಸರಕಾರ ಎಲ್ಲ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಯಲ್ಲಿ ನಡೆಸಬೇಕು. ಇದು ಸಂಸತ್ತು, ರಾಜ್ಯ ಶಾಸಕಾಂಗ ಹಾಗೂ ಜನತಾ ವೇದಿಕೆಯಲ್ಲಿ ಡಿಎಂಕೆಯ ಬಹುಕಾಲದ ಬೇಡಿಕೆಯಾಗಿದೆ. ಇದರೊಂದಿಗೆ  ಕೇವಲ ತಮಿಳುನಾಡಿನ ಯುವ ಜನತೆ ಮಾತ್ರವಲ್ಲದೆ, ಭಾರತದ ಅನೇಕ ರಾಜ್ಯಗಳ ಯುವಜನರು ತಮ್ಮ ಭಾಷೆಯಲ್ಲೇ ಪರೀಕ್ಷೆ ಬರೆಯಬಹುದು. ಒಬ್ಬರ ಹಿಂದಿ ಹಾಗೂ ಇಂಗ್ಲೀಷ್ ನಿರರ್ಗಳತೆಯ ಕೊರತೆ ಅವಕಾಶಗಳನ್ನು ಕಡಿಮೆ ಮಾಡಬಾರದು’’ ಎಂದು ಅವರು ತಿಳಿಸಿದ್ದಾರೆ.

‘‘ಭಾರತ ರಾಜ್ಯಗಳ ಒಕ್ಕೂಟ. ಆದುದರಿಂದ ಎಲ್ಲಾ ರಾಜ್ಯಗಳ ಯುವಜನರಿಗೆ  ಸಮಾನ ಅವಕಾಶಗಳು ಸಿಗಬೇಕು. ಮೊದಲಾಗಿ ನಮ್ಮ ಬೇಡಿಕೆಗೆ ಸಕಾರಾತ್ಮಕ ಫಲಿತಾಂಶ ಸಿಕ್ಕಿದೆ. ಈಗ ಕೇಂದ್ರ ಸರಕಾರದ ಎಲ್ಲ ಪರೀಕ್ಷೆಗಳು ಎಲ್ಲ ಪ್ರಾದೇಶಿಕ ಭಾಷೆಯಲ್ಲಿ ನಡೆಸಲು ಧ್ವನಿ ಎತ್ತೋಣ. ನಾವು ಇದರಲ್ಲಿ ಜಯ ಗಳಿಸಲಿದ್ದೇವೆ’’

-ಎಂ.ಕೆ. ಸ್ಟಾಲಿನ್
ತಮಿಳುನಾಡು ಮುಖ್ಯಮಂತ್ರಿ 

Similar News