ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅನಿವಾಸಿ ಕನ್ನಡಿಗರಿಗೆ ಪ್ರತ್ಯೇಕ ಸಚಿವಾಲಯದ ಭರವಸೆ: ಬಹರೈನ್ ಕನ್ನಡಿಗರ ಅಭಿನಂದನೆ
''ಕೊಲ್ಲಿ ಕನ್ನಡಿಗರ ಹಾಗೂ ತುಳುವರ ಪಾಲಿಗೆ ಇದೊಂದು ಮಹತ್ವದ ಹೆಜ್ಜೆ''
ಮಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಈ ಬಾರಿ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಥಮವಾಗಿ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯವೊಂದನ್ನು ಪ್ರಾರಂಭಿಸುವ ಬಗ್ಗೆ ಭರವಸೆಯನ್ನು ನೀಡಿದೆ. ಇದರೊಂದಿಗೆ ಸಾಗರೋತ್ತರ ಕನ್ನಡ ಸಂಘಟನೆಗಳನ್ನು ಗುರುತಿಸುವ ಭರವಸೆಯನ್ನೂ ಕೆಪಿಸಿಸಿ ನೀಡಿರುವುದು ಅನಿವಾಸಿ ಕನ್ನಡಿಗರು, ಅದರಲ್ಲೂ ವಿಶೇಷವಾಗಿ ಕೊಲ್ಲಿ ಕನ್ನಡಿಗರ ಹಾಗೂ ತುಳುವರ ಪಾಲಿಗೆ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು 'ಬಹರೈನ್ ಕನ್ನಡ ಸಂಘ'ದ ಮಾಜಿ ಅಧ್ಯಕ್ಷ ಆಸ್ಟಿನ್ ಸಂತೋಷ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು, ' ಪ್ರತ್ಯೇಕ ಸಚಿವಾಲಯ ಪ್ರಾರಂಭವಾದರೆ, ಅನಿವಾಸಿ ಕನ್ನಡಿಗರ ಹಾಗೂ ತುಳುವರ ಹತ್ತು ಹಲವು ಸಮಸ್ಯೆಗಳಿಗೆ ಆ ಮೂಲಕ ಪರಿಹಾರ ದೊರಕಲಿದೆ. ಅನಿವಾಸಿ ಕನ್ನಡಿಗರ ಕುಂದು ಕೊರತೆಗಳ ಬಗ್ಗೆ ಮಿಥುನ್ ರೈ ಯವರ ಮೂಲಕ ಕೆಪಿಸಿಸಿ ಅಧ್ಯಕ್ಷರಿಗೆ ನಾನು ಮನವಿಯೊಂದನ್ನು ಸಲ್ಲಿಸಿದ್ದೆ ಹಾಗೂ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆಗಳನ್ನು ನೀಡುವ ಮೂಲಕ ಸೂಕ್ತವಾಗಿ ಸ್ಪಂದಿಸಲು ವಿನಂತಿಸಿದ್ದೆ.ಮಿಥುನ್ ರೈ ಯವರು ಈ ಬಗ್ಗೆ ಮುತುವರ್ಜಿ ವಹಿಸಿ, ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯವೊಂದರ ಭರವಸೆಯನ್ನು ಪ್ರಣಾಳಿಕೆಯಲ್ಲಿ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ' ಎಂದು ತಿಳಿಸಿದ್ದಾರೆ.
'ಬಹರೈನ್ ನ ಸಮಸ್ತ ಕನ್ನಡಿಗರ ಪರವಾಗಿ ಮಿಥುನ್ ರೈಯವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಅನಿವಾಸಿ ಕನ್ನಡಿಗ ಹಾಗೂ ತುಳುವರ ಸಮಸ್ಯೆಗಳಿಗೆ ಮಿಥುನ್ ರೈ ಯವರ ಮೂಲಕ ಇನ್ನೂ ಹೆಚ್ಚಿನ ಸ್ಪಂದನೆಯನ್ನು ನಿರೀಕ್ಷಿಸುತ್ತಿದ್ದೇವೆ' ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.