ಮಾನ ಹಾನಿ ಪ್ರಕರಣ: ವೈಯುಕ್ತಿಕ ಹಾಜರಾತಿಗೆ ವಿನಾಯತಿ ಕೋರಿದ ರಾಹುಲ್ ಗಾಂಧಿ ಅರ್ಜಿ ತಿರಸ್ಕೃತ
ಹೊಸದಿಲ್ಲಿ, ಮೇ 3: ‘ಮೋದಿ ಉಪನಾಮ’ ಹೇಳಿಕೆ ಕುರಿತ 2019ರ ಕ್ರಿಮಿನಲ್ ಮಾನ ಹಾನಿ ಪ್ರಕರಣಕ್ಕೆ ಸಂಬಂಧಿಸಿ ವೈಯುಕ್ತಿಕ ಹಾಜರಾತಿಗೆ ವಿನಾಯತಿ ನೀಡುವಂತೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ ಮನವಿಯನ್ನು ಜಾರ್ಖಂಡ್‌ನ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ.
ಇದೇ ರೀತಿಯ ಪ್ರಕರಣದಲ್ಲಿ ಸೂರತ್‌ನ ನ್ಯಾಯಾಲಯ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಪರಿಗಣಿಸಿದ ಹಾಗೂ ಎರಡು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದ ವಾರಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಸೂರತ್ ನ್ಯಾಯಾಲಯ ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಸಂಸದನ ಸ್ಥಾನದಿಂದ ಅನರ್ಹಗೊಂಡಿದ್ದರು.
ಕರ್ನಾಟಕದ ಕೋಲಾರದ ಪಟ್ಟಣವೊಂದರಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ರ್ಯಾಲಿಯ ಸಂದರ್ಭ ರಾಹುಲ್ ಗಾಂಧಿ ಅವರು ‘ಮೋದಿ ಉಪನಾಮ’ಕುರಿತು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯವಾದಿ ಪ್ರದೀಪ್ ಮೋದಿ ಅವರು 2019ರಲ್ಲಿ ರಾಂಚಿಯಲ್ಲಿ ದೂರು ದಾಖಲಿಸಿದ್ದರು.
2019ರ ಲೋಕಸಭಾ ಚುನಾವಣಾ ರ್ಯಾಲಿಯ ಸಂದರ್ಭ ರಾಹುಲ್ ಗಾಂಧಿ ಅವರು, ‘‘ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ... ಇವರೆಲ್ಲರಿಗೂ ಮೋದಿ ಎಂಬ ಸಮಾನ ಉಪ ನಾಮ ಹೇಗೆ ಬಂತು?. ಎಲ್ಲ ಕಳ್ಳರೂ ಮೋದಿ ಎಂಬ ಸಮಾನ ಉಪ ನಾಮವನ್ನು ಹೊಂದಿರುವುದು ಹೇಗೆ ?’’ಎಂದು ಅವರು ಪ್ರಶ್ನಿಸಿದ್ದರು.
ರಾಹುಲ್ ಗಾಂಧಿ ಅವರ ಹೇಳಿಕೆ ಮೋದಿ ಉಪ ನಾಮ ಹೊಂದಿರುವ ಎಲ್ಲರ ವಿರುದ್ಧವಾಗಿದೆ. ಅವಹೇಳನಕಾರಿ, ಮಾನಹಾನಿಕರವಾಗಿದೆ ಎಂದು ದೂರುದಾರ ಆರೋಪಿಸಿದ್ದರು.