ಅಕ್ರಮ ಆಸ್ತಿ ಪ್ರಕರಣ: ಸಿಬಿಐಯಿಂದ ಡಬ್ಲ್ಯುಎಪಿಸಿಒಎಸ್‌ನ ಮಾಜಿ ಅಧ್ಯಕ್ಷ ರಾಜಿಂದರ್ ಗುಪ್ತಾ, ಪುತ್ರನ ಬಂಧನ
ಹೊಸದಿಲ್ಲಿ, ಮೇ 3: ಅಕ್ರಮ ಆಸ್ತಿ ಹೊಂದಿದ ಆರೋಪದಲ್ಲಿ ಡಬ್ಲ್ಯುಎಪಿಸಿಒಎಸ್‌ನ ಮಾಜಿ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ರಾಜಿಂದರ್ ಕುಮಾರ್ ಗುಪ್ತಾ ಹಾಗೂ ಅವರ ಪುತ್ರ ಗೌರವ್ ಅವರನ್ನು ಸಿಬಿಐ ಬುಧವಾರ ಬಂಧಿಸಿದೆ.
ದಿಲ್ಲಿ, ಗುರುಗಾಂವ್, ಚಂಡಿಗಢ, ಸೋನೆಪತ್ ಹಾಗೂ ಗಾಝಿಯಾಬಾದ್‌ನಾದ್ಯಂತ ಆರೋಪಿಗೆ ಸೇರಿದ 19 ಸ್ಥಳಗಳಲ್ಲಿ ಸಿಬಿಐ ಮಂಗಳವಾರ ದಾಳಿ ನಡೆಸಿದೆ ಹಾಗೂ 38 ಕೋ.ರೂ. ನಗದನ್ನು ವಶಪಡಿಸಿಕೊಂಡಿದೆ.
ಈ ಹಿಂದೆ ವಾಟರ್ ಆ್ಯಂಡ್ ಪವರ್ ಕನ್ಸಲ್ಟೆನ್ಸಿ ಸರ್ವೀಸಸ್ (ಇಂಡಿಯಾ) ಲಿಮಿಟೆಡ್ ಎಂದು ಜನಪ್ರಿಯವಾಗಿದ್ದ ಡಬ್ಲ್ಯುಎಪಿಸಿಒಎಸ್ ಸರಕಾರದ ಮಾಲಕತ್ವ ಹೊಂದಿದ್ದ ಸಾರ್ವಜನಿಕ ವಲಯದ ಉದ್ಯಮವಾಗಿದೆ ಹಾಗೂ ಜಲಶಕ್ತಿ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿ ಇದೆ.
ಸಂಸ್ಥೆಯಲ್ಲಿ ಗುಪ್ತಾ ಅವರ 2011 ಎಪ್ರಿಲ್ 1ರಿಂದ 2019 ಮಾರ್ಚ್ 31ರ ವರೆಗಿನ ಅಧಿಕಾರವಧಿಯಲ್ಲಿ ಅಕ್ರಮ ಸಂಪತ್ತು ಹೊಂದಿದ್ದ ಆರೋಪದಲ್ಲಿ ಗುಪ್ತಾ, ಅವರ ಪತ್ನಿ ರೀಮಾ ಸಿಂಗಾಲ್, ಪುತ್ರ ಗೌರವ್ ಸಿಂಗಾಲ್ ಹಾಗೂ ಸೊಸೆ ಕೋಮಲ್ ಸಿಂಗಾಲ್ ಅವರ ವಿರುದ್ಧ ಪ್ರಕರಣ ದಾಖಲಾದ ಬಳಿಕ ಸಿಬಿಐ ಮಂಗಳವಾರ ದಾಳಿ ನಡೆಸಿದೆ.