ಗ್ರಂಥಾಲಯಗಳು ಮಾಹಿತಿ ಮತ್ತು ಸಂವಹನದ ಕೇಂದ್ರಗಳಾಗಬೇಕು; ಎಚ್.ವಿ.ಇಬ್ರಾಹಿಂಪುರ
ಬ್ರಹ್ಮಾವರ: ಸ್ಥಳೀಯ ಹಂತದಲ್ಲಿ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯುವ ಜನಾಂಗವನ್ನು ಸಿದ್ಧಪಡಿಸುವ ದಿಸೆಯಲ್ಲಿ ಗ್ರಂಥಾಲಯ ಮೇಲ್ವಿಚಾರಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಬ್ರಹ್ಮಾವರ ತಾಲೂಕು ಪಂಚಾಯತ್‌ನ ಕಾರ್ಯ ನಿರ್ವಹಣಾಧಿಕಾರಿ ಹೆಚ್.ವಿ. ಇಬ್ರಾಹಿಂಪುರ ಹೇಳಿದ್ದಾರೆ.
ಮಂದರ್ತಿ ಸಮೀಪದ ಹೆಗ್ಗುಂಜೆ ಗ್ರಾಮ ಪಂಚಾಯತ್‌ನಲ್ಲಿ ಜರಗಿದ ಗ್ರಂಥಾಲಯ ಮೇಲ್ವಿಚಾರಕರ ಜಿಲ್ಲಾ ಮಟ್ಟದ ಪುನಶ್ಚೇತನ ಕಾರ್ಯಾಗಾರ ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯತ್‌ಗಳ ಮೂಲಕ ದೊರೆಯುವ ಸೌಲಭ್ಯಗಳ ಕುರಿತು ನಾಗರಿಕರಿಗೆ ಮಾಹಿತಿ ತಲುಪಿಸುವ ಹಂತದಲ್ಲಿ ಗ್ರಾಪಂಗಳ ಗ್ರಂಥಾಲಯ ಮೇಲ್ವಿಚಾರಕರು ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಬ್ರಹ್ಮಾವರ ತಾಪಂ ವ್ಯಾಪ್ತಿಯಲ್ಲಿ ಹೆಚ್ಚಿನ ಗ್ರಾಪಂಗಳು ಡಿಜಿಟಲ್ ಗ್ರಂಥಾಲಯಗಳಾಗಿದ್ದು ಆಧುನಿಕ ವ್ಯವಸ್ಥೆ ಗಳನ್ನು ಹೊಂದಿವೆ. ಶಿಕ್ಷಣ ಫೌಂಡೇಶನ್ ಸಹಯೋಗದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನತೆಯನ್ನು ಗ್ರಂಥಾಲಯಗಳತ್ತ ಆಕರ್ಷಿಸಲು ಆದ್ಯತೆ ನೀಡಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ಕಾಡೂರು ಗ್ರಾಪಂನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕೆ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನದಲ್ಲಿ ಗ್ರಂಥಾಲಯಗಳಿಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಶಿಕ್ಷಣ ಫೌಂಡೇಶನ್ ಉತ್ತಮ ಸಹಭಾಗಿತ್ವವನ್ನು ನೀಡುತ್ತಿದ್ದು ಗ್ರಾಪಂ ಗ್ರಂಥಾಲಯಗಳನ್ನು ಸ್ಪರ್ಧಾತ್ಮಕವಾಗಿ ಅಭಿವೃದ್ಧಿ ಪಡಿಸಲು ಪ್ರೇರಣೆ ನೀಡುತ್ತಿರುವುದು ಅಭಿನಂದನೀಯ ಎಂದರು.
ಕಾರ್ಯಕ್ರಮದ ಆತಿಥ್ಯ ವಹಿಸಿದ್ದ ಹೆಗ್ಗುಂಜೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ಶೆಟ್ಟಿ ಮಾತನಾಡಿ ತಂತ್ರಜ್ಞಾನದ ಹೊಸತನವನ್ನು ಸುಲಭವಾಗಿ ಮಾಹಿತಿ ನೀಡುವ ಸಾಧನವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಹೆಗ್ಗುಂಜೆ ಗ್ರಾಪಂ ಅಧ್ಯಕ್ಷೆ ಶೋಭಾ ಬಿ.ಶೆಟ್ಟಿ, ಶಿಕ್ಷಣ ಫೌಂಡೇಶನ್ ಸಂಯೋಜಕಿ ರೀನಾ ಹೆಗ್ಡೆ, ಕಾರ್ಯದರ್ಶಿ ಸುರೇಶ್, ಶಿಕ್ಷಣ ಫೌಂಡೇಶನ್ ಪದಾಧಿಕಾರಿಗಳು, ಜಿಲ್ಲೆಯ ವಿವಿಧ ಪಂಚಾಯತ್‌ಗಳ ಗ್ರಂಥಾಲಯ ಮೇಲ್ವಿಚಾರಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರೀನಾ ಹೆಗ್ಡೆ ಸ್ವಾಗತಿಸಿದರು. ಆಶಾ ಕಾರ್ಯಕ್ರಮ ನಿರೂಪಿಸಿದರು. ಮತದಾನ ಜಾಗೃತಿ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮವನ್ನೂ ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿತ್ತು.