ಹಿಮಾಚಲ ಸ್ಥಳೀಯ ಸಂಸ್ಥೆಗಳ ಚುನಾವಣೆ: ಕಾಂಗ್ರೆಸ್‌ಗೆ ಭರ್ಜರಿ ಜಯ, ಬಿಜೆಪಿಗೆ ಹಿನ್ನಡೆ

Update: 2023-05-05 02:32 GMT

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ನಡೆದ ಶಿಮ್ಲಾ ಮಹಾನಗರ ಪಾಳಿಕೆ ಚುನಾವಣೆಯಲ್ಲಿ 24 ವಾರ್ಡ್‌ಗಳಲ್ಲಿ ಜಯ ಗಳಿಸುವ ಮೂಲಕ ಕಾಂಗ್ರೆಸ್ ಪಕ್ಷ ಮೂರನೇ ಎರಡರಷ್ಟು ಬಹುಮತ ಸಾಧಿಸಿದೆ. ಈ ಮೂಲಕ ಬಿಜೆಪಿಯಿಂದ ಮಹಾನಗರ ಪಾಲಿಕೆಯ ಅಧಿಕಾರ ಕಸಿದುಕೊಂಡಿದೆ.

ಒಟ್ಟು 34 ಸದಸ್ಯಬಲದ ಪಾಲಿಕೆಯಲ್ಲಿ ಬಿಜೆಪಿ ಕೇವಲ ಒಂಬತ್ತು ಸ್ಥಾನಗಳಿಗೆ ತೃಪ್ತಿಪಟ್ಟಿದೆ. ಸಿಪಿಎಂ ಉಳಿದ ಒಂದು ಸ್ಥಾನದಲ್ಲಿ ಜಯ ಸಾಧಿಸಿದೆ ಎಂದು ಉಪ ಕಮಿಷನರ್ ಆದಿತ್ಯ ನೇಗಿ ಹೇಳಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಎಲ್ಲ 34 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು, ಸಿಪಿಐಎಂ ನಾಲ್ಕು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು.

ಮಂಗಳವಾರ ನಡೆದ ಚುನಾವಣೆಯಲ್ಲಿ 21 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದ ಎಎಪಿ ಶೂನ್ಯ ಸಾಧನೆ ಮಾಡಿದೆ. ಎಲ್ಲ ಒಂಬತ್ತು ಪಕ್ಷೇತರರು ಸೋಲು ಅನುಭವಿಸಿದ್ದಾರೆ. ಒಟ್ಟು 102 ಉಮೇದುವಾರರು ಕಣದಲ್ಲಿದ್ದರು. 2022ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 68 ಸ್ಥಾನಗಳ ಪೈಕಿ 40ನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಸೂತ್ರ ಹಿಡಿದಿತ್ತು.

2017ರಲ್ಲಿ ನಡೆದ ಶಿಮ್ಲಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 17 ವಾರ್ಡ್‌ಗಳನ್ನು ಗೆಲ್ಲುವ ಮೂಲಕ ಬಿಜೆಪಿ 32 ವರ್ಷಗಳಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ ಕೈಯಿಂದ ಅಧಿಕಾರ ಕಸಿದಿತ್ತು. ಕಾಂಗ್ರೆಸ್ 12 ಹಾಗೂ ಸಿಪಿಐಎಂ ಒಂದು ಸ್ಥಾನ ಗೆದ್ದಿದ್ದವು. ನಾಲ್ಕು ಕ್ಷೇತ್ರಗಳು ಪಕ್ಷೇತರರ ಪಾಲಾಗಿದ್ದವು

Similar News