×
Ad

ಶಾಸಕ ಸುನೀಲ್ ಕುಮಾರ್ ಆಪ್ತರ ಖಾತೆಗೆ ಕಮಿಷನ್ ಹಣ: ಕಾಂಗ್ರೆಸ್ ಆರೋಪ

Update: 2023-05-06 12:27 IST

ಕಾರ್ಕಳ: 'ಶಾಸಕ ಸುನೀಲ್ ಕುಮಾರ್ ಅವರ ಆಪ್ತರ ಖಾತೆಗೆ ತಲಾ 25 ಸಾವಿರ ರೂ. ಕಮಿಷನ್ ಹಣ ಸಂದಾಯವಾಗುತ್ತಿದೆ. ಇದು ಸುಳ್ಳು ಎಂದಾದರೆ ಶಾಸಕರು ಪ್ರಮಾಣ ಮಾಡಲಿ' ಎಂದು ಕಾರ್ಕಳ ಕೆಪಿಸಿಸಿ ಪ್ರಚಾರ ಸಮಿತಿಯ ಅದ್ಯಕ್ಷ ಶುಭದರಾವ್ ಸವಾಲು ಹಾಕಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  'ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ( ಕೆ.ಪಿ.ಟಿ.ಸಿ.ಎಲ್)  ನಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ವಾಹನವನ್ನು ನಿಗಮದ ವತಿಯಿಂದ ನೀಡುತ್ತಿದ್ದು ಬಡ ವಾಹನದ ಮಾಲಕರು ಎಗ್ರಿಮೆಂಟ್ ಮೂಲಕ ಮಾಸಿಕ 32 ರಿಂದ ‌35 ಸಾವಿರ ರೂಪಾಯಿಗಳನ್ನು ಬಾಡಿಗೆ ರೂಪದಲ್ಲಿ ‌ಪಡೆಯುತ್ತಿದ್ದರು. ಸುನೀಲ್ ಕುಮಾರ್ ಇಂಧನ ಸಚಿವರಾದ ತಕ್ಷಣ ತಾನು ನೇಮಕ ಮಾಡಿದ ನೂತನ  ಎಂ. ಡಿ ಯ ಮೂಲಕ ಅವಧಿಗೂ ಮುನ್ನ ಆ ಎಲ್ಲಾ ಅಗ್ರಿಮೆಂಟ್ ಗಳನ್ನು ರದ್ದು ಮಾಡಿಸಿ 603 ವಾಹನಗಳಿಗೆ ಏಕ ಟೆಂಡರ್ ಮಾಡುವುದರ ಮೂಲಕ ತನ್ನ ಆಪ್ತನ ಮಾಲಕತ್ವದ ಸಂಸ್ಥೆಗೆ  ಬಾಡಿಗೆಯನ್ನು ಹೆಚ್ಚಿಸಿ ಮಾಸಿಕ ರೂ 45‌ ಸಾವಿರ ಬಾಡಿಗೆಯನ್ನು ನಿಗದಿ ಮಾಡಿದ್ದಾರೆ. ಒಂದು ವಾಹನದ 13 ಸಾವಿರದಂತೆ 603 ವಾಹನದ ಸುಮಾರು‌ 80 ಲಕ್ಷ ರೂಪಾಯಿ ಹಣವು ಕಮಿಷನ್ ರೂಪದಲ್ಲಿ ಸಂದಾಯವಾಗುತ್ತಿದ್ದು ಇದರಲ್ಲಿ ಕಾರ್ಕಳದ  60 ಜನ ಆಪ್ತರ ಖಾತೆಗೆ ತಿಂಗಳಿಗೆ ರೂ 25‌ ಸಾವಿರದಂತೆ ಜಮೆಯಾಗುತ್ತಿದೆ' ಎಂದು ದೂರಿದರು.

ಇದೇ ತರಹ ಹೆಸ್ಕಾ, ಚೆಸ್ಕಾಂ, ಜೆಸ್ಕಾಂ, ಬೆಸ್ಕಾಂ ಮತ್ತು ಮೆಸ್ಕಾಂ 1000ಕ್ಕೂ ಹೆಚ್ಚು  ವಾಹನದ ಟೆಂಡರಿಗೆ ಮುಂದಾದಾಗ ಮೆಸ್ಕಾಂ ವಿಭಾಗದ 210 ವಾಹನ ಮಾಲಕರು ಕೋರ್ಟ್ ನಿಂದ ತಡೆ ತಂದಿದ್ದರು. ಈಗ ಯಥಾ ಸ್ತಿತಿ ಮುಂದುವರಿಯುತ್ತಿದೆ. 60 ಜನ ಶಾಸಕರ ಆಪ್ತರು ಪಡೆಯವ ಈ ಹಣ ಕಮಿಷನ್ ಹಣವಲ್ಲವೇ? ಶಾಸಕರಿಗಾಗಿ ದುಡಿದವರು 60 ಜನ ಮಾತ್ರವೇ? ಬೇರೆಯಾರು ಲೆಕ್ಕಕೇ ಇಲ್ಲವೇ? ಎಂದು ಪ್ರಶ್ನಿಸಿದ ಅವರು, ಬಿಜೆಪಿ ಕಾರ್ಯಕರ್ತರ ನಿಮ್ಮ ಬದ್ಧತೆಯ ಬಗ್ಗೆ ನನಗೆ ಗೌರವವಿದೆ ಆದರೆ ಇನ್ನೂ ಸಮಯವಿದೆ, ತಾವುಗಳು ಅತ್ಮವಿಮರ್ಶೆ ಮಾಡಿಕೊಳ್ಳಿ ಎಂದರು.

ಶಾಸಕರ ಮೇಲೆ ಭೃಷ್ಟಾಚಾರದ  ಇಷ್ಟು ದೊಡ್ಡ ಅರೋಪ ಬರಲು ಕಾರಣವೇನು? ನಿಮ್ಮ ಪಕ್ಷದ ಕೆಲವು ನಾಯಕರಿಗೆ ಅವರ ನಡೆಯ ಬಗ್ಗೆ ಬೇಸರವಿದೆಯಲ್ಲಾ ಯಾಕೆ? ಅವರ ಸ್ವಾರ್ಥಕ್ಕೆ ನಿಮ್ಮನ್ನು ಹೇಗೂ ಬಳಸಿಕೊಳ್ಳುತ್ತಾರೆ,  ಅವರ ಲಾಭಕ್ಕೆ ನಡೆಯುವ ಕಾರ್ಯಕ್ರಮಗಳಲ್ಲಿ ತಾವುಗಳು ಕೇವಲ ಸ್ವಯಂ ಸೇವಕನಾಗಿ ದುಡಿಯಲು ಮಾತ್ರ ಸೀಮಿತವಾಗುತ್ತೀರಿ ಅಷ್ಟೇ ಎಂದು ಹೇಳಿದರು. 

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ  ಗ್ಯಾರಂಟಿ ‌ಕಾರ್ಡಿನ ಫಲಾನುಭವಿಗಳು ತಾವೆಲ್ಲರೂ ಆಗುತ್ತೀರಿ ಎನ್ನುವುದು ನೆನಪಿರಲಿ. ಗೃಹಲಕ್ಷ್ಮಿ ಯೋಜನೆಯಲ್ಲಿ ನಿಮ್ಮ ತಾಯಿಯ ಅಥವಾ ಸಹೋದರಿಯ ಖಾತೆಗೆ ಪ್ರತೀ ತಿಂಗಳು 2000 ಹಣ ಸಂದಾಯವಾಗುತ್ತದೆ, ಉಚಿತ ವಿದ್ಯುತ್ ಮೂಲಕ ನಿಮ್ಮ ಮನೆಯ ಆರ್ಥಿಕ ಹೊರೆ ಕಡಿಮೆಯಾಗುತ್ತದೆ, ನಿಮ್ಮನೆಯಲ್ಲಿರುವ ವಿದ್ಯಾವಂತ ನಿರುದ್ಯೋಗಿಗೆ ಉದ್ಯೋಗ ಸಿಗುತ್ತದೆ ಹೀಗೆ ಅನೇಕ ಕಾಂಗ್ರೆಸ್ ಯೋಜನೆಗಳು ನಿಮ್ಮ ಮನೆ ತಲುಪಲಿದೆ ಹಾಗಾಗಿ ಕಾರ್ಕಳದಲ್ಲಿ ಭೃಷ್ಟಾಚಾರಕ್ಕೆ ಅವಕಾವೇ ಇಲ್ಲ ಎಂದು ಈ ಚುನಾವಣೆಯಲ್ಲಿ ತೋರಿಸಿ ಕೊಡೋಣ, ಇಲ್ಲವಾದರೆ ಭೃಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳೆದುಕೊಳ್ಳುತ್ತೇವೆ ಎಂದರು.

ಮಾಜಿ ಪುರಸಭಾ ಸದಸ್ಯ ವಿವೇಕಾನಂದ ಶೆಣೈ, ಪ್ರಚಾರ ಸಮಿತಿ ಸದಸ್ಯ ದಿನಕರ್ ಶೆಟ್ಟಿ ನಿಟ್ಟೆ ಉಪಸ್ಥಿತರಿದ್ದರು.

Similar News