ಪುತ್ತೂರಿನಲ್ಲಿ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ರೋಡ್ ಶೋ; ಬಿಜೆಪಿ ಪರ ಪ್ರಚಾರ
ಪುತ್ತೂರು: ಹನುಮಂತನ ನಾಡಿನಲ್ಲಿ ಬಜರಂಗದಳ ಸಂಘಟನೆಯನ್ನು ನಿಷೇಧ ಮಾಡಲು ಕಾಂಗ್ರೆಸ್ ಮುಂದಾಗಿದೆ. ಬಜರಂಗದಳವು ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಯಾಗಿದ್ದು, ಇದನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿರುವ ಕಾಂಗ್ರೆಸ್ ಪಕ್ಷವು ಅವಸಾನದತ್ತ ಸಾಗುತ್ತಿದೆ. ರಾಜ್ಯದಲ್ಲಿ ಮತ್ತೊಮ್ಮೆ ಪೂರ್ಣಪ್ರಮಾಣದ ಬಿಜೆಪಿ ಸರ್ಕಾರ ಬರಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದರು.
ಅವರು ಶನಿವಾರ ಅಪರಾಹ್ನ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಲು ಪುತ್ತೂರಿಗೆ ಆಗಮಿಸಿದ್ದರು. ತೆರೆದ ವಾಹನದಲ್ಲಿ ಪುತ್ತೂರು ದೇವಳದ ಮುಂಭಾಗದಿಂದ ಕಿಲ್ಲೆ ಮೈದಾನದ ತನಕ ರೋಡ್ ಶೋ ನಡೆಸಿದ ಅವರು ಕಿಲ್ಲೆ ಮೈದಾನದಲ್ಲಿ ಜನರನ್ನು ಉದ್ದೇಶಿಸಿ ಮಾನತಾಡಿದರು.
ಪುತ್ತೂರಿನ ಮುತ್ತಿನಂತ ಜನರಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಹೇಳಿದ ಅವರು ಪುತ್ತೂರಿನ ನಿಮ್ಮೆಲ್ಲರಿಗೂ ಹೃದಯದ ಅಭಿನಂದನೆಗಳು. ನಾನು ಮರ್ಯಾದಾ ಪುರುಷೋತ್ತಮ ರಾಮನ ಜನ್ಮಭೂಮಿ ಯಿಂದ ಹನುಮಂತನ ಜನ್ಮಭೂಮಿಯಾದ ಕರ್ನಾಟಕಕ್ಕೆ ಬಂದಿದ್ದೇನೆ. ಸಾವಿರ ವರ್ಷದ ಹಿಂದೆ ರಾಮನ ವನ ವಾಸದ ಸಮಯದಲ್ಲಿ ರಾಮನ ಅಂತಿಮ ದಿನದ ವರೆಗೆ ರಾಮನ ಜೊತೆಗಿದ್ದವನು ಹನುಮಂತ. ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ನಡೆಯುತ್ತಿದೆ. ಕರ್ನಾಟಕದ ಬಿಜೆಪಿ ಸರಕಾರ ಕೂಡಾ ಅಂಜನೇಯನ ದೇವಸ್ಥಾನ ಮಾಡುತ್ತಿದೆ ಎಂದರು.
ಶ್ರೀ ರಾಮಚಂದ್ರನ ಅಸ್ತಿತ್ವವನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್ ಜನರ ನಂಬಿಕೆಯ ಮೇಲೆ ಪ್ರಹಾರ ಮಾಡುತ್ತಿದೆ. ರಾಮ ಕಾಲ್ಪನಿಕ ಎಂದು ಕಾಂಗ್ರೆಸ್ ಹೇಳಿಕೊಂಡು ಬರುತ್ತಿದೆ. ಕಾಂಗ್ರೆಸ್ ಹನುಮಂತನ ನಾಡಿನಲ್ಲಿ ಭಜರಂಗದಳ ನಿಷೇಧದ ಬಗ್ಗೆ ಹೇಳಿಕೆ ನೀಡುತ್ತಿದೆ. ಭಯೋತ್ಪಾದನೆ ಮಾಡುವ ಪಿಎಫ್‌ಐಗೆ ಮುಕ್ತ ಅವಕಾಶ ನೀಡುವ ಬಗ್ಗೆ ಮಾತನಾಡುತ್ತಿದೆ ಎಂದು ಹೇಳಿದರು.
ಈ ಸಂದರ್ಭ ಬಿಜೆಪಿ ರಾಜ್ಯ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ, ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತು ಪಕ್ಷದ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ, ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಜೊತೆಗಿದ್ದರು.